
ಬೆಂಗಳೂರು, ನವೆಂಬರ್ 24: ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ (Protection of children’s rights)ಬೆಂಗಳೂರು ನಗರ ಜಿಲ್ಲೆ ವಿಫಲವಾಗಿದೆ ಎಂದು ಕರ್ನಾಟಕದ ಮಕ್ಕಳ ಹಕ್ಕುಗಳ ಸೂಚ್ಯಂಕ ಬಹಿರಂಗಪಡಿಸಿದೆ. ಜೀವನಕ್ಕಾಗಿ ಅನುಕೂಲಕರ ಪರಿಸ್ಥಿತಿಗಳು, ಪೋಷಣೆಯ ಹಕ್ಕು, ರಕ್ಷಣೆ ನೀಡುವ ಹಕ್ಕು, ಶಿಕ್ಷಣಕ್ಕಿರುವ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳ ಮೇಲೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ಸಿದ್ದಪಡಿಸಿದೆ.
ರಾಜ್ಯದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಬೆಂಗಳೂರಿಗೆ ಕಳಪೆ ಸ್ಥಾನ ಲಭಿಸಿದ್ದು, ಎಲ್ಲಾ ಜಿಲ್ಲೆಗಳಿಗೂ ಹೋಲಿಸಿದರೆ ಬೆಂಗಳೂರು ಕೊನೆ ಸ್ಥಾನ ಪಡೆದಿದೆ. ಕೊಲಾರ, ಬೆಂಗಳೂರು, ವಿಜಯಪುರ, ಗದಗ ಮತ್ತು ಬೆಳಗಾವಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಕಳಪೆ ಪಟ್ಟವನ್ನು ಹೊಂದಿದ್ದು, ಕೊಡಗು ಮತ್ತು ಉಡುಪಿ ಜಿಲ್ಲೆಯು ಮಕ್ಕಳ ಹಕ್ಕುಗಳಿಗೆ ಅತ್ಯಂತ ಸುರಕ್ಷಿತ ಜಿಲ್ಲೆಗಳಾಗಿವೆ.
ಮಕ್ಕಳ ಮೇಲಿನ ಅಪರಾಧಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳೂ ಈ ಪಟ್ಟಿಗೆ ಸೇರಿವೆ. ಬೆಂಗಳೂರಿನಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಮಾಣ ಇತರ ಜಿಲ್ಲೆಗಳಿಗಿಂತ ಎಂಟು ಪಟ್ಟು ಹೆಚ್ಚಾಗಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ISEC) ಎಸ್ ಮಾದೇಶ್ವರನ್ ಮತ್ತು ಬಿಪಿ ವಾಣಿ ಈ ಕುರಿತು ಅಧ್ಯಯನದ ನಡೆಸಿದ್ದು, ಹಲವಾರು ಅಂಕಿ ಅಂಶಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2021ರಲ್ಲಿ ರಾಷ್ಟ್ರದ ಮಕ್ಕಳ ಹಕ್ಕು ಸೂಚಕದಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿತ್ತು. ಕೇರಳ, ದೆಹಲಿ, ತಮಿಳುನಾಡು, ಗೋವಾ ಮತ್ತು ಸಿಕ್ಕಿಂ ಅಗ್ರ ರಾಜ್ಯಗಳಾಗಿದ್ದವು. ಹೀಗಾಗಿ ಈಗಿನ ವರದಿ ಕರ್ನಾಟಕ ಮಕ್ಕಳ ಹಿತದೃಷ್ಟಿಯಿಂದ ಹಾಗೂ ಬೆಂಗಳೂರಿನ ಮಕ್ಕಳ ಹಿತದೃಷ್ಟಿಯಿಂದ ಎಚ್ಚರಿಕೆಯ ಗಂಟೆಯಾಗಿದೆ.
ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.