ಬೆಂಗಳೂರು ‘ಪೀಕ್ ಹೆಲ್ತ್‌ಕೇರ್’: ಅಮೆರಿಕದಲ್ಲಿ ಸಿಗದ ಲಸಿಕೆ ಕೋರಮಂಗಲದಲ್ಲಿ 10 ನಿಮಿಷದಲ್ಲಿ ಲಭ್ಯ!
ಬೆಂಗಳೂರಿನ ಆರೋಗ್ಯ ಸೇವಾ ಲಭ್ಯತೆ ಕುರಿತು ವೈರಲ್ ಆದ ಪೋಸ್ಟ್ ಗಮನ ಸೆಳೆದಿದೆ. ಕೋರಮಂಗಲದಲ್ಲಿ ಕಚ್ಚಿದ ನಾಯಿಯಿಂದ ತಕ್ಷಣ ರೇಬಿಸ್ ಲಸಿಕೆ ಪಡೆದ ಅನುಭವವು, ಅಮೆರಿಕದಲ್ಲಿ ಲಸಿಕೆ ಸಿಗದೇ ಪರದಾಡಿದ ಸ್ನೇಹಿತನ ಘಟನೆಗೆ ಹೋಲಿಸಲಾಗಿದೆ. ಭಾರತದ ತ್ವರಿತ ವೈದ್ಯಕೀಯ ಮೂಲಸೌಕರ್ಯದ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ. ಆದರೂ, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಲಭ್ಯತೆ ಅಸಮತೋಲನದ ಕುರಿತು ಚರ್ಚೆ ಮುಂದುವರೆದಿದೆ.

ಬೆಂಗಳೂರು, ಏ.1: ರಾಜ್ಯ ರಾಜಧಾನಿಯಲ್ಲಿ ವೈದ್ಯಕೀಯ ಲಭ್ಯತೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಶ್ಲಾಘಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಹಂಚಿಕೊಂಡ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಮೆರಿಕದಂತಹ ಶ್ರೀಮಂತ ರಾಷ್ಟ್ರಕ್ಕೆ ಹೋಲಿಸಿದರೆ ಭಾರತದ ಆರೋಗ್ಯ ಮೂಲಸೌಕರ್ಯ ಎಷ್ಟು ವೇಗವಾಗಿದೆ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ.
ಕೋರಮಂಗಲದ ಸಿದ್ಧಾರ್ಥ್ ಎಂಬುವವರು ತಮ್ಮ ಸ್ನೇಹಿತನ ಮನೆಗೆ ಪಾರ್ಟಿಗೆ ಹೋದಾಗ ಅಲ್ಲಿನ ಸಾಕುನಾಯಿ ಇವರನ್ನು ಕಚ್ಚಿದೆ. ನಾಯಿ ವ್ಯಾಕ್ಸಿನೇಟೆಡ್ ಆಗಿದ್ದರೂ ರಿಸ್ಕ್ ತೆಗೆದುಕೊಳ್ಳದ ಸಿದ್ಧಾರ್ಥ್ ತಕ್ಷಣ ಲಸಿಕೆಗಾಗಿ ಹುಡುಕಾಡಿದ್ದಾರೆ. ಕೇವಲ 1 ಕಿ.ಮೀ ದೂರದಲ್ಲಿದ್ದ ‘ಕ್ಲಿನಿಕ್’ ಎಂಬ ಸೆಂಟರ್‌ನಲ್ಲಿ ಇವರಿಗೆ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ (Walk-in) ತಕ್ಷಣವೇ ಅಗ್ಗದ ದರದಲ್ಲಿ ರೇಬಿಸ್ ಲಸಿಕೆ ಲಭ್ಯವಾಗಿದೆ.
ಇಲ್ಲಿದೆ ನೋಡಿ ಪೋಸ್ಟ್:

ಇದೇ ಸಂದರ್ಭದಲ್ಲಿ ಸಿದ್ಧಾರ್ಥ್ ತಮ್ಮ ಸ್ನೇಹಿತರೊಬ್ಬರಿಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಎದುರಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಶ್ವಾನ ಕಡಿತಕ್ಕೊಳಗಾದ ಅವರ ಸ್ನೇಹಿತನಿಗೆ 10 ಮೈಲಿ ವ್ಯಾಪ್ತಿಯಲ್ಲಿ ಎಲ್ಲೂ ರೇಬಿಸ್ ಲಸಿಕೆ ಸಿಕ್ಕಿರಲಿಲ್ಲ! “ನಮ್ಮ ದೇಶದಲ್ಲಿ ನಾವು ಇಂತಹ ಸೌಲಭ್ಯಗಳನ್ನು ಸಹಜವೆಂದು ಭಾವಿಸುತ್ತೇವೆ, ಆದರೆ ಇದು ನಮ್ಮ ಸೌಭಾಗ್ಯ” ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 1,2,3,4,5,6,7 ಈ ದಿನದಂದು ಮಧ್ಯಾಹ್ನದ ನಂತರ ಬರಲಿದೆ ಗುಡುಗು ಸಹಿತ ಮಳೆ; ಎಲ್ಲೆಲ್ಲಿ ಮಳೆಯಾಗಬಹುದು?
ಈ ಪೋಸ್ಟ್ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೆಲವು ನೆಟ್ಟಿಗರು ಭಾರತದ ಆರೋಗ್ಯ ವ್ಯವಸ್ಥೆಯ ಲಭ್ಯತೆಯನ್ನು ಕೊಂಡಾಡಿದ್ದರೆ, ಇನ್ನು ಕೆಲವರು “ಕೋರಮಂಗಲದಲ್ಲಿ ಸೌಲಭ್ಯ ಸಿಗುವುದು ಸುಲಭ, ಆದರೆ ಗ್ರಾಮೀಣ ಭಾಗದ ಸ್ಥಿತಿ ಇಂದಿಗೂ ಸುಧಾರಿಸಬೇಕಿದೆ” ಎಂದು ಕಮೆಂಟ್ ಮಾಡಿದ್ದಾರೆ. ಅಮೆರಿಕದಲ್ಲಿ ನಾಯಿಗಳಿಗೆ ರೇಬಿಸ್ ಇಲ್ಲದಿರುವ ಕಾರಣ ಅಲ್ಲಿ ಲಸಿಕೆ ಸುಲಭವಾಗಿ ಸಿಗದಿರಬಹುದು ಎಂಬ ತರ್ಕವನ್ನೂ ಕೆಲವರು ಮಂಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
