
ಬೆಂಗಳೂರು, ಫೆ.3: ಬೆಂಗಳೂರಿನಲ್ಲಿ ಅನುಮಾನಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ನಗರದಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯನಗರದಲ್ಲಿ ಈ ಘಟನೆ ನಡೆದಿದೆ. ಚಂದ್ರು ಎಂಬುವವರ ಮಾಲೀಕತ್ವದ 100×100 ಅಳತೆಯ ಸೈಟ್‌ನಲ್ಲಿ ಬಂಡೆ ಒಡೆಯಲು ಅನುಮತಿ ಇಲ್ಲದೆ ಜಿಲೆಟಿನ್ ಕಡ್ಡಿಗಳನ್ನು (Bengaluru explosives seizure) ಬಳಸಲಾಗುತ್ತಿತ್ತು. ಮಧ್ಯಾಹ್ನ 10:30 ರಿಂದ 2 ಗಂಟೆಯ ಅವಧಿಯಲ್ಲಿ ಜನನಿಬಿಡ ಪ್ರದೇಶದಲ್ಲೇ ಈ ಸ್ಫೋಟ ನಡೆಸಲಾಗುತ್ತಿತ್ತು. ವಿಷಯ ತಿಳಿದ ತಕ್ಷಣ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಿಂದ 15 ಜಿಲೆಟಿನ್ ಕಡ್ಡಿಗಳು ಮತ್ತು 30 ಡಿಟೋನೇಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಘಟನಾ ಸ್ಥಳದಲ್ಲಿದ್ದ ಒಂದು ಟ್ರ್ಯಾಕ್ಟರ್ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೆಲ್ಲರೂ ಪರಾರಿಯಾಗಿದ್ದಾರೆ. ಹುಳಿಮಾವು ಪೊಲೀಸರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ.
ಇದನ್ನೂ ಓದಿ: ಕಟ್ಟಡ ಮಾಲೀಕರಿಗೆ ಬಿಗ್ ಶಾಕ್ ನೀಡಿದ GBA: 437 ಕೋಟಿ ರೂ. ತೆರಿಗೆ ಬಾಕಿ
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಬಾಂಬ್ ಸ್ಕ್ವಾಡ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸೈಟ್ ಮಾಲೀಕ ಚಂದ್ರು ಎಂಬುವವರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಸಂಗ್ರಹಿಸಿ ಬಳಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಯಾವುದೇ ಮುನ್ನೆಚ್ಚರಿಕೆ ಹಾಗೂ ಪರವಾನಗಿ ಇಲ್ಲದೆ ಅಪಾಯಕಾರಿ ಸ್ಫೋಟಕಗಳನ್ನು ಬಳಸಿದ್ದಕ್ಕಾಗಿ ಸೈಟ್ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಬಾಂಬ್ ಸ್ಕ್ವಾಡ್ ಪರಿಶೀಲನೆಯ ನಂತರ ಸ್ಫೋಟಕಗಳ ಮೂಲದ ಬಗ್ಗೆ ವರದಿ ಸಲ್ಲಿಕೆಯಾಗಲಿದ್ದು, ಅದರ ಆಧಾರದ ಮೇಲೆ ನ್ಯಾಯಾಲಯದ ವಿಚಾರಣೆ ಮುಂದುವರಿಯಲಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ