ಬೆಂಗಳೂರು, ಡಿ.14: ಬೆಂಗಳೂರಿನ ದೊಡ್ಡಾಸ್ಪತ್ರೆಗೆ ಬಂದ್ರೆ ಒಳ್ಳೆಯ ಚಿಕಿತ್ಸೆ ಸಿಗುತ್ತೆ ಅಂತಾ ಅದೆಷ್ಟೋ ಜನರು ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರ್ತಾರೆ. ತಮ್ಮ ಪುಟ್ಟ ಪುಟ್ಟ ಮಕ್ಕಳ ಆರೋಗ್ಯಕ್ಕಾಗಿ ದೂರ ದೂರದ ಊರಿನಿಂದ ಇಂದಿರಾಗಾಂಧಿ ಆಸ್ಪತ್ರೆಗೆ ಬರೋ ಜನರಿಗೆ ನರಕದರ್ಶನವಾಗ್ತಿದೆ (Indira Gandhi Children’s Hospital). ಮಲಗುವ ಜಾಗ, ಶೌಚಾಲಯ, ಕುಡಿಯೋ ನೀರಿಗೂ ಪೋಷಕರು ಪರದಾಡ್ತಿದ್ದಾರೆ. ಟಿವಿ 9 ಕ್ಯಾಮರಾದಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಕರ್ಮಕಾಂಡ ಸೆರೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ,ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಇಲಿ, ಹೆಗ್ಗಣಗಳ ಬಿಲಗಳು ಕಂಡು ಬಂದಿವೆ. ಅಶುಚಿತ್ವ ತಾಂಡವವಾಡುತ್ತಿದೆ. ಎಲ್ಲೆಂದರಲ್ಲಿ ಬೆಡ್ ಶೀಟ್ ಹಾಸಿಕೊಂಡು ಜನರು ಮಲಗುವಂತ ಪರಿಸ್ಥಿತಿ ಇದೆ. ತಮ್ಮ ಮಕ್ಕಳನ್ನು ಕರೆದುಕೊಂಡು ಚಿಕಿತ್ಸೆಗೆ ಬರುವ ಪೋಷಕರಿಗೆ ಯಾವುದೇ ರೀತಿ ಸವಲತ್ತುಗಳಿಲ್ಲ.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಬರುವವರಲ್ಲಿ ಸಾಕಷ್ಟು ಜನರು ಮಧ್ಯಮವರ್ಗ, ಬಡವರ್ಗದ ಜನರೇ ಆಗಿರುತ್ತಾರೆ, ಆದರೆ ತಮ್ಮ ಮಕ್ಕಳಿಗೆ ಉತ್ತಮ ಚಿಕಿತ್ಸೆ ಸಿಗಬಹುದು ಅಂತಾ ಬರೋ ಇವರಿಗೆ ಇಲ್ಲಿ ಮಲಗಲು ಸೂಕ್ತ ಜಾಗವಿಲ್ಲ, ಕುಡಿಯೋ ನೀರು, ಶೌಚಾಲಯ ಬಳಸುವುದಕ್ಕೂ ಹಣ ಕೊಡಬೇಕಿರೋದರಿಂದ ರೋಗಿಗಳ ಜೊತೆ ಬರೋ ಪೋಷಕರು ಹೈರಾಣಾಗಿಬಿಟ್ಟಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 2.55 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ: ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಯಲ್ಲೇ ಹೆಚ್ಚು
ಇನ್ನು ಆಸ್ಪತ್ರೆಯಲ್ಲಿರೋ ಅವ್ಯವಸ್ಥೆಯನ್ನ ಅನಾವರಣ ಮಾಡಲು ಟಿವಿ9 ತಂಡ ತೆರಳಿದಾಗ ಆಸ್ಪತ್ರೆ ಸಿಬ್ಬಂದಿ ಕ್ಯಾತೆ ತೆಗೆದಿದ್ದಾರೆ, ಇಲ್ಲಿ ವಿಡಿಯೋ ಮಾಡೋ ಹಾಗಿಲ್ಲ ಅಂತಾ ತಡೆಹಿಡಿದು ಆಸ್ಪತ್ರೆ ನಿರ್ದೇಶಕರಿಗೆ ಕರೆ ಮಾಡಿದ್ದಾರೆ. ಅತ್ತ ನಿರ್ದೇಶಕರು ಇಲ್ಲಿ ಯಾವ ಸಮಸ್ಯೆ ಇಲ್ಲ, ಜನರಿಗೆ ವಿಶ್ರಾಂತಿಗೃಹ ಇದೆ ಅಂತಾ ಸಬೂಬು ಕೊಟ್ಟಿದ್ದಾರೆ. ಆದರೆ ವಿಶ್ರಾಂತಿಗೃಹ ಎಲ್ಲಿದೆ, ಹೇಗಿದೆ ಅಂತಾ ಕೇಳಿದ್ರೆ ಅದರ ಅವ್ಯವಸ್ಥೆಯ ಬಗ್ಗೆ ಜನರು ಅಸಮಾಧಾನ ಹೊರ ಹಾಕಿದ್ದಾರೆ. ಅವ್ಯವಸ್ಥೆ ಬಿಚ್ಚಿಟ್ಟಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆಯೇನೋ ಸಿಗ್ತಿದೆ. ಆದರೆ ದೂರ ದೂರದ ಊರುಗಳಿಂದ ಬಂದ ಜನರಿಗೆ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ನೀರು, ಮಲಗುವ ಜಾಗಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ಇರೋದು ನಿಜಕ್ಕೂ ದುರದೃಷ್ಟಕರ. ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ