40% ಕಮಿಷನ್ ಹಗರಣ: ವರದಿ ಸಲ್ಲಿಸಲು 45 ದಿನ ಡೆಡ್ಲೈನ್ ನೀಡಿದ ಹೈಕೋರ್ಟ್
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಕಾಮಗಾರಿಗಳ ಗುತ್ತಿಗೆಗೆ ಸಂಬಂಧಿಸಿ ಬಂದಿರುವ ನೂರಾರು ದೂರುಗಳನ್ನು ಆಧರಿಸಿ ಕಾಂಗ್ರೆಸ್ ಸರ್ಕಾರ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಿದ್ದು, ಇದೀಗ ಹೈಕೋರ್ಟ್, ವರದಿ ಸಲ್ಲಿಸಲು ಆಯೋಗಕ್ಕೆ ಡೆಡ್ಲೈನ್ ನೀಡಿದೆ.
ಬೆಂಗಳೂರು, (ಡಿಸೆಂಬರ್ 13): ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದ 40 ಪರ್ಸೆಂಟ್ ಕಮಿಷನ್ (40 percent Commission) ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆ ಮಾಡಲು ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ (Retired judge B Veerappa) ನೇತೃತ್ವದಲ್ಲಿ ಆಯೋಗವನ್ನು ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಆದ್ರೆ, ಈ ಸಂಬಂಧ ಹೈಕೋರ್ಟ್, 45 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚನೆ ನೀಡಿದೆ.
ಅಕ್ರಮವಿಲ್ಲದ ಕಾಮಗಾರಿಗಳಿಗೆ ಶೇ.75ರಷ್ಟು ಬಿಲ್ ಪಾವತಿಸಲಾಗುವುದು. ಆರೋಪಗಳಿರುವ ಗುತ್ತಿಗೆದಾರರಿಗೆ ಶೇ.50ರಷ್ಟು ಬಿಲ್ ಪಾವತಿಸಲಾಗುವುದು ಎಂದು ಹೈಕೋರ್ಟ್ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದು,ನ್ಯಾ.ನಾಗಮೋಹನದಾಸ್ ಆಯೋಗದ ತನಿಖೆಗೆ ಕಾಲಾವಕಾಶ ನೀಡಲು ಮನವಿ ಮಾಡಿದರು.
ಆದ್ರೆ, 45 ದಿನಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ವರದಿ ನೀಡಲು ಸೂಚನೆ ನೀಡಿರುವ ಹೈಕೋರ್ಟ್, ಸಂಬಂಧಪಟ್ಟ ದಾಖಲೆ ಪರಿಶೀಲಿಸಿ, ಅಹವಾಲು ಆಲಿಸಬೇಕು ಎಂದು ತಿಳಿಸಿ. ಫೆಬ್ರವರಿ 6ಕ್ಕೆ ವಿಚಾರಣೆ ನಿಗದಿಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಕಾಮಗಾರಿಗಳ ಗುತ್ತಿಗೆಗೆ (Work Contract) ಸಂಬಂಧಿಸಿ ಬಂದಿರುವ ನೂರಾರು ದೂರುಗಳನ್ನು ಆಧರಿಸಿ 40% ಕಮಿಷನ್ ಹಗರಣದ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತನಿಖೆ ನಡೆಸಿ ವರದಿ ನೀಡುವವರೆಗೆ ಹಳೇ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಮಾಡುವುದಿಲ್ಲ (Old bills will not be paid) ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದರು.
Published On - 8:16 pm, Wed, 13 December 23