ಬೆಂಗಳೂರು ಈಗ ಐಟಿ ಕ್ಯಾಪಿಟಲ್ ಅಲ್ಲ, ಗುಂಡಿಗಳ ನಗರ: ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ ತರಾಟೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 01, 2022 | 12:17 PM

2015-16ರಲ್ಲಿ ಮೋಸ್ಟ್ ಡೈನಾಮಿಕ್ ಸಿಟಿ ಆಗಿದ್ದ ಬೆಂಗಳೂರು, ಮುಳುಗುತ್ತಿರುವ ನಗರ ಆಗಿದೆ. ಈಗ ಬೆಂಗಳೂರು ಮಾನ್ಯತೆ ಪ್ರಪಂಚದಲ್ಲಿ ಮುಳುಗುತ್ತಿದೆ ಎಂದು ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದರು.

ಬೆಂಗಳೂರು ಈಗ ಐಟಿ ಕ್ಯಾಪಿಟಲ್ ಅಲ್ಲ, ಗುಂಡಿಗಳ ನಗರ: ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ ತರಾಟೆ
ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ
Follow us on

ಬೆಂಗಳೂರು: ಬೆಂಗಳೂರು ಡ್ರಗ್ಸ್ ಕ್ಯಾಪಿಟಲ್, ಪಾಟಹೋಲ್ ಕ್ಯಾಪಿಟಲ್ ಆಗ್ತಿದೆ. ಬೆಂಗಳೂರು ಐಟಿ ಕ್ಯಾಪಿಟಲ್‌ ಸ್ಟಾರ್ಟಪ್ ಕ್ಯಾಪಿಟಲ್ ಆಗಿದ್ದ ನಗರ. 2015-16ರಲ್ಲಿ ಮೋಸ್ಟ್ ಡೈನಾಮಿಕ್ ಸಿಟಿ ಆಗಿದ್ದ ಬೆಂಗಳೂರು, ಮುಳುಗುತ್ತಿರುವ ನಗರ ಆಗಿದೆ. ಈಗ
ಬೆಂಗಳೂರು ಮಾನ್ಯತೆ ಪ್ರಪಂಚದಲ್ಲಿ ಮುಳುಗುತ್ತಿದೆ ಎಂದು ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದರು. ನಗರದಲ್ಲಿ ಆಯೋಜಿಸಿದ್ದ ಕೆಪಿಸಿಸಿ ಪ್ರೆಸ್ ಮೀಟ್​ನಲ್ಲಿ ಅವರು ಮಾತನಾಡಿದರು. ದಿನ ಬೆಳಗಾದರೆ ಆ ಮೈದಾನ ಈ ಮೈದಾನ ಅಂತ ಟೆನ್ಶನ್ ಕ್ಯಾಪಿಟಲ್ ಆಗ್ತಿದೆ. ಬೆಂಗಳೂರಿಗೆ ಅವಶ್ಯಕತೆ ಇರುವ ಆಡಳಿತವೇ ಇಲ್ಲ. ಬೆಂಗಳೂರಿನ ಆಡಳಿತ ವ್ಯವಸ್ಥೆ ಇದೆಯಾ? ಯಾರು ಅಕೌಂಟೆಬಲ್ ಇದಕ್ಕೆ. ಸಿಎಂ ಇಡೀ ರಾಜ್ಯವನ್ನು ನೋಡಬೇಕು, ಯಾರು ಬೆಂಗಳೂರಿಗೆ ಉಸ್ತುವಾರಿ ಎಂದು ಪ್ರಶ್ನಿಸಿದರು.

ಉಸ್ತುವಾರಿ ಸಚಿವರನ್ನೇ ಮಾಡುವುದಕ್ಕೆ ಆಗಿಲ್ಲ ಇವರ ಕೈಲಿ. ಇದಕ್ಕೆ ಬಿಜೆಪಿ ಸಚಿವರ ಒಳಗಿನ ಮುಸುಕಿನ ಗುದ್ದಾಟ ಕಾರಣವೆಂದರು. ಬಿಜೆಪಿಯವರಿಗೆ ದುಡ್ಡು ಹುಟ್ಟಿಸುವುದಕ್ಕೆ ಅಧಿಕಾರಿಗಳನ್ನು ತಂದು ಕೂರ್ಸಿದ್ದಾರೆ. ದುರಾಡಳಿತದ ತಾಂಡವ ನೃತ್ಯದಿಂದ ಬೆಂಗಳೂರು ಮುಳುಗುತ್ತಿರುವ ನಗರ ಆಗಿದೆ. 40% ಕಮಿಷನ್ ನೇರವಾಗಿ ಇದಕ್ಕೆ ಕಾರಣ. 50% ಲಂಚ ತೆಗೆದುಕೊಂಡ ಮೇಲೆ ಯಾವ ಕಾಲುವೆ ಉಳಿಯುತ್ತದೆ? ಯಾವ ರಸ್ತೆ ಉಳಿಯುತ್ತದೆ? ಇಷ್ಟು ದುಡ್ಡು ತಿಂದ ಮೇಲೆ ಉಳಿದ ದುಡ್ಡಲ್ಲಿ ಏನು ಕೆಲಸ ಮಾಡಲಿಕ್ಕೆ ಸಾಧ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪಿಯು ಪಠ್ಯ ಪರಿಷ್ಕರಣೆ ವಿವಾದ: ಸರ್ಕಾರಕ್ಕೆ ಮತ್ತೆ ಟಾಂಗ್ ಕೊಟ್ಟ ರೋಹಿತ್ ಚಕ್ರತೀರ್ಥ

ಹಳೆ ಕಲ್ಲೂ ಹೊಸ ಬಿಲ್ಲು:

ಯಾರು ಉಡಾಫೆಯಿಂದ ಮಾತಾಡ್ತಾರೋ ಅವರಿಗೆ ಬೆಂಗಳೂರಿನ ನರಕ ದರ್ಶನ ಆಗ್ತಾ ಇದೆ. ಪ್ರಪಂಚಕ್ಕೆ ಮುಕುಟ ಆಗಿದ್ದ ಬೆಂಗಳೂರು ಈಗ ಎಲ್ಲ ಅನಾಹುತಗಳಿಗೂ ವಿದ್ಯಮಾನಗಳಿಗೆ ಸಾಕ್ಷಿ ಆಗ್ತಿದೆ. ಒಂದು ಕಡೆ 50% ಭ್ರಷ್ಟಾಚಾರ ಆದ್ರೆ, ಬರುವ ಅನುದಾನವನ್ನೆಲ್ಲ ತೆಗೆದು ಬರೀ ರಸ್ತೆಗೆ ಟಾರ್ ಹಾಕೋದಕ್ಕೆ ಸುರಿಯುತ್ತಾರೆ. ಹಳೆ ಕಲ್ಲೂ ಹೊಸ ಬಿಲ್ಲು ಎಂಬ ಮಾತಿದೆ. ಬರೀ ಹಳೆ ಡ್ರೈನ್​ನ ಕಿತ್ತು ಹೊಸ ಕಲ್ಲು ಹಾಕೋದು. ಒಂದೊಂದೆ ಕೆಲಸಕ್ಕೆ ಎರಡೆರಡು ಬಿಲ್ ಮಾಡಿ ಲೂಟಿ ಹೊಡೆಯೋದು ಎಂದರು.

ಪ್ರಧಾನಿ ಮೋದಿ ಅರ್ಧ ದಿನದ ಕಾರ್ಯಕ್ರಮಕ್ಕೆ 26ಕೋಟಿ ರೂ.

ಕೆಲವು ಕಲಾವಿದರು ನೂರಕ್ಕೆ ನೂರು ದುಡ್ಡೂ ಹೊಡಿತಾರೆ. ಮೂಲಭೂತ ಸೌಕರ್ಯ ನಿರ್ಲಕ್ಷ್ಯ ಮಾಡಿದ್ದರಿಂದ ಇಂಥ ದುಸ್ಥಿತಿ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಎಷ್ಟು ಫ್ಲೈ ಓವರ್ ಕಾಮಗಾರಿ ಹೊಸದಾಗಿ ಪ್ರಾರಂಭ ಆಗಿದೆ ಹೇಳಿ. ಬೆಂಗಳೂರು ನಗರ ಬಿಜೆಪಿಯವರಿಗೆ ಕ್ಯಾಶ್ ಫ್ಲೋ ದುಡ್ಡು ಹುಟ್ಟುವಳಿ ಮಾಡುವ ಸಿಟಿ ಮಾತ್ರ. ಇದರಿಂದ ಜನ ಬೀದಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ಮುಕ್ಕಾಲುಪಾಲು ತೊಂದರೆಗೆ ಸಿಲುಕಿಕೊಂಡಿದೆ. ಪ್ರಧಾನಿ ಮೋದಿ ಅರ್ಧ ದಿನದ ಕಾರ್ಯಕ್ರಮಕ್ಕೆ 26ಕೋಟಿ ಖರ್ಚು ಮಾಡ್ತಾರೆ. ಜನರ ಸಮಸ್ಯೆ ಕೇಳಿದರೆ ಬರೀ ಸುಳ್ಳು ಭರವಸೆ ಬಿಟ್ಟರೆ ಬೇರೆನೂ ಇಲ್ಲ. ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿ ಪಡಿಸಲು ನಿಮ್ಮ ಹತ್ರ ದುಡ್ಡಿಲ್ವಾ? ಈ ಬಿಜೆಪಿ ಸರ್ಕಾರಕ್ಕೆ ಮೋದಿ ಅಮಿತ್ ಶಾ ಅಭಯ ಹಸ್ತದ ರಕ್ಷಣೆ ಕಾರಣ ಎಂದು ಹೇಳಿದರು.

ಅಧಿಕಾರದ ಅಮಲಿನಲ್ಲಿ ಬಿಜೆಪಿ ಮುಳುಗಿದೆ:

ಭ್ರಷ್ಟಾಚಾರ ಆಕಾಶಕ್ಕೆ‌ ಮುಟ್ಟಿದೆ. ಪ್ರಶ್ನೆ ಕೇಳಬೇಕಾದವರೇ ಬಿಜೆಪಿಯ ಭ್ರಷ್ಟರ ರಕ್ಷಣೆಗೆ ನಿಂತು ಬಿಟ್ಟಿದ್ದಾರೆ. ಮೋದಿ ಅಮಿತ್ ಶಾ ಸ್ಪಾನ್ಸರ್ ಶಿಪ್​ನಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ. ಮುಳುಗಿ ಹೋಗುತ್ತಿರುವ ಬೆಂಗಳೂರಿಗರ ರಕ್ಷಣೆ ಮಾಡಿ ಮೊದಲು. ಭ್ರಷ್ಟಾಚಾರಕ್ಕೆ ರಸೀದಿ ಕೊಡಿ ಸಿಎಂ ಸರ್, ಆಗ ನಾವೂ ದಾಖಲೆ ಕೊಡ್ತೇವೆ. ಅಧಿಕಾರದ ಅಮಲಿನಲ್ಲಿ ಮುಳುಗಿದ್ದಾರೆ ಬಿಜೆಪಿಯವರು. ಕಷ್ಟದಲ್ಲಿದ್ದೀವಿ ಅಂದ್ರೆ ಕಷ್ಟಕ್ಕೂ ಸಾಕ್ಷಿ ಕೊಡಿ ಎನ್ನುವಷ್ಟು ದುರಹಂಕಾರ ಅವರಿಗೆ. ರಾಜಕಾರಣದಲ್ಲಿ ನೈತಿಕತೆ ಕೇವಲ ಹೆಸರಿಗೆ ಮಾತ್ರ ಉಳಿದಿದೆ. ಬಿಜೆಪಿಯವರಿಗೆ 50% ಏನ್ರಿ 100% ತಿಂದ್ರೂ ಯಾರೂ ಏನೂ ಮಾಡಲ್ಲ ಅನ್ನೋ ದುರಹಂಕಾರ ಬಂದಿದೆ ಎಂದು ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:16 pm, Thu, 1 September 22