ಬೆಂಗಳೂರು, ನವೆಂಬರ್ 15: ಪ್ರಪ್ರಥಮ ಭಾರಿಗೆ ಬೆಂಗಳೂರಿನಲ್ಲಿ ನವೆಂಬರ್ 25, 26 ರಂದು ಬೆಂಗಳೂರು ಕಂಬಳ (Kambala) ನಡೆಯಲಿದೆ. ನಗರದ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ಕಂಬಳ ನಡೆಸಲು 151ಮೀಟರ್ ಉದ್ದದ ಟ್ರ್ಯಾಕ್ ನಿರ್ಮಾಣದ ತಯಾರಿ ಮಾಡಲಾಗುತ್ತಿದೆ. ಕಂಬಳದ ಸ್ಥಳಕ್ಕೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಪೀಕರ್ಗೆ ಪುತ್ತೂರು ಶಾಸಕ ಅಶೋಕ್ ರೈ, ಗುಣರಂಜನ್ ಶೆಟ್ಟಿ, ಗುರು ಕಿರಣ್, ಬೆಂಗಳೂರು ತುಳುಕೂಟದ ಅಧ್ಯಕ್ಷ ಸುಂದರ್ ರೈ ಸಾಥ್ ನೀಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿಯ ಜನರಿಗೆ ಕಂಬಳ ಅಂದ್ರೆ ಜೀವ, ಭಾವ, ಒಂದು ರೀತಿ ಆಚರಣೆ. ಇಂಥಾ ದೇಸಿ ಕ್ರೀಡೆ ಇದೀಗ ರಾಜಧಾನಿ ಬೆಂಗಳೂರಿನ್ನೂ ರಂಜಿಸೋಕೆ ರೆಡಿ ಆಗ್ತಿದೆ.. ಕೋಣಗಳನ್ನ ಹಿಡಿದು ಗದ್ದೆಯಲ್ಲಿ ಸವಾರಿ ಮಾಡೋಕೆ ಸಾರಥಿಗಳು ಸಜ್ಜಾಗಿದ್ದಾರೆ. ತುಳುಕೂಟಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಇದೇ ಮೊಟ್ಟ ಮೊದಲು ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಮಾಡಲು ತುಳು ಕೂಟ ನಿರ್ಧರಿಸಿದೆ. ಅರಮನೆ ಮೈದಾನದಲ್ಲಿ ಜಾಗ ಗುರುತಿಸಿದ್ದು, ನವೆಂಬರ್ 25, 26 ಮೂರು ದಿನಗಳ ಕಾಲ ಕಂಬಳ ನಡೆಯಲಿದೆ.
ಇದನ್ನೂ ಓದಿ: ತುಳುಕೂಟಕ್ಕೆ 50 ವರ್ಷದ ಸಂಭ್ರಮ: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಕಂಪು, ನೆರವೇರಿದ ಪೂಜೆ
ಕಂಬಳಕ್ಕೆ 150 ಜೋಡಿ ಕೋಣಗಳು ಬರಲಿವೆಯಂತೆ. ಕಂಬಳಕ್ಕೆ ಬರುವ ಕೋಣಗಳನ್ನ ವಾಹನಗಳಲ್ಲಿ ತರಿಸಲಿದ್ದು, ಸಕಲೇಶಪುರ, ಹಾಸನ, ನೆಲಮಂಗಲ ಮೂರು ಕಡೆ ವಿಶ್ರಾಂತಿಗೆ ಅವಕಾಶ ವ್ಯವಸ್ಥೆ ಮಾಡಲಾಗ್ತಿದೆ. ಬೆಂಗಳೂರಿಗೆ ಒಂದು ದಿನ ಮುಂಚೆಯೇ ಕೋಣಗಳು ಎಂಟ್ರಿ ಕೊಡಲಿವೆ. ಕಂಬಳಕ್ಕೆ ಬೇಕಾದ ಕೆಸರು ಗದ್ದೆ ರೆಡಿ ಮಾಡಲು ಮಣ್ಣು, ನೀರಿನ ಟೆಸ್ಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ನಟಿ ಅನುಷ್ಕಾ ಶೆಟ್ಟಿ ಸೇರಿ ಹಲವರು ಕಂಬಳಕ್ಕೆ ಬರಲಿದ್ದಾರಂತೆ.
ಇಷ್ಟು ದಿನ ಕರಾವಳಿ ಭಾಗದಲ್ಲಿ ಕಂಬಳ ನಡೆಯೋದನ್ನ ನೋಡುತ್ತಿದ್ದೆವು. ಈಗ ನಮ್ಮ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವುದು ಬಹಳ ವಿಶೇಷವಾಗಿದೆ. ಆ ದಿನಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.