ಬೆಂಗಳೂರ ಪಿತಾಮಹ ನಾಡಪ್ರಭು ಕೆಂಪೇಗೌಡರು(Kempegowda) ಬೆಂಗಳೂರಿನ ನಾಲ್ಕು ಮೂಲೆಗಳಲ್ಲಿ ಗೋಪುರ ಕಟ್ಟಿ ಅಲ್ಲಿ ಉದ್ಯಾನವನ ನಿರ್ಮಿಸುವ ಕನಸು ಕಂಡಿದ್ದರು. ಅದರಂತೆ ಒಂದು ಗೋಪುರ ಲಾಲ್‌ಬಾಗ್‌ನಲ್ಲಿದ್ದು ಇದು ಈಗ ಭಾರತದ ಐತಿಹಾಸಿಕ ಗಾರ್ಡನ್ ಆಗಿದೆ. 1537ರಲ್ಲಿ ಇಲ್ಲೊಂದು ಹೂವಿನತೋಟ ನಿರ್ಮಾಣ ಮಾಡಿ ಅದಕ್ಕೆ ಕೆಂಪುತೋಟ ಎಂಬ ಹೆಸರು ಇಡಲಾಯಿತು. 34 ಎಕರೆಗಳಷ್ಟಿದ್ದ ಈ ತೋಟದಲ್ಲಿ 1569ರಲ್ಲಿ ನಾಡಪ್ರಭು ಕೆಂಪೇಗೌಡರ ಮಗ ಮಾಗಡಿ ಕೆಂಪೇಗೌಡರು ತೋಟವನ್ನು ಪೋಷಿಸುತ್ತ ಬೆಳೆಸಿದರು. 1722-1759 ಸಮಯದಲ್ಲಿ ಕೆಂಪುತೋಟ ಒಡೆಯರ್ ಸಾಮ್ರಾಜ್ಯದ ಅಧೀನದಲ್ಲಿತ್ತು. ಮರಾಠರನ್ನು ಮೈಸೂರಿನಲ್ಲಿ ಸೋಲಿಸಿ ಕಳುಹಿಸಿದಕ್ಕೆ ಹೈದರಾಲಿಗೆ(Hyder Ali) ಉಡುಗೊರೆಯಾಗಿ ಈ ಕೆಂಪುತೋಟವನ್ನು ನೀಡಲಾಯಿತು. ಮೈಸೂರಿನ ಮಹಾರಾಜರಿಗೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ಸೇನಾಪತಿ ಆಗಿದ್ದ ಹೈದರಾಲಿ ಮುಂದೆ ಈ ತೋಟಕ್ಕೆ ಮತ್ತಷ್ಟು ಜೀವ ಕಳೆ ನೀಡಿದರು.
ಮೊಘಲ್ಲರ ಉದ್ಯಾನವನಗಳಿಂದ ಪ್ರೇರಿತರಾಗಿದ್ದ ಹೈದರಾಲಿ, ಮೈಸೂರು ಮಹಾರಾಜರು ನೀಡಿದ ತೋಟದಲ್ಲಿ ದೊಡ್ಡದೊಂದು ಉದ್ಯಾನವನ ಕಟ್ಟುವ ಕನಸು ಕಂಡಿದ್ದರು. ಅದಕ್ಕಾಗಿಯೇ ಈ ತೋಟವನ್ನು ನೋಡಿಕೊಳ್ಳಲು ತಮಿಳುನಾಡಿನಿಂದ ತಿಗಳ ಸಮುದಾಯವನ್ನು ಕರೆತಂದು ಅದ್ಭುತವಾಗಿ ತೋಟ ನಿರ್ವಹಿಸುವಂತೆ ನೋಡಿಕೊಂಡಿದ್ದರು. 1760 ರಲ್ಲಿ ಉದ್ಯಾನವನ ನಿರ್ಮಾಣ ಕಾರ್ಯ ಆರಂಭವಾಯಿತು. ಬಳಿಕ ಅವರ ಮಗ ಮೈಸೂರು ಹುಲಿ ಟಿಪ್ಪು ಸುಲ್ತಾನ್ ತನ್ನ ತಂದೆಯ ಆಸೆಯಂತೆ ಸೊಗಸಾದ ಸಸ್ಯೋದ್ಯಾನವನ್ನು ಪೂರ್ಣಗೊಳಿಸಿದರು. ಟಿಪ್ಪು ಸುಲ್ತಾನ್ ನಾನಾ ಬಗೆಯ ಹೂವು, ಹಣ್ಣಿನ ಗಿಡಗಳನ್ನು ನೆಡುವಂತೆ ಮಾಡಿ ತೋಟ ನಳನಳಿಸುವಂತೆ ನೋಡಿಕೊಂಡ. ಪರ್ಷಿಯಾ, ಅಫ್ಘಾನಿಸ್ತಾನ್, ಕೇಪ್ ಟೌನ್, ಟರ್ಕಿ, ಫ್ರಾನ್ಸ್‌ನಂತಹ ವಿವಿಧ ದೇಶಗಳಿಂದ ಸಸ್ಯಗಳನ್ನು ತರಿಸಿ ಉದ್ಯಾನವನದ ಸಂಪತ್ತನ್ನು ಹೆಚ್ಚಿಸಿದ. 1760ರಿಂದ 1800ರವರೆಗೆ ಈ ತೋಟ ಸುಲ್ತಾನರ ವೈಯಕ್ತಿಕ ಉದ್ಯಾನವನವಾಗಿತ್ತು. ಆ ಸಮಯದಲ್ಲಿ ಈ ತೋಟಕ್ಕೆ ಸಾರ್ವಜನಿಕ ಪ್ರವೇಶ ಇರಲಿಲ್ಲ.
ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ 1799ರಲ್ಲಿ ಟಿಪ್ಪು ಸುಲ್ತಾನ್ ತೀರಿಕೊಂಡ ನಂತರ ಲಾಲ್‌ಬಾಗ್ ನಿರ್ವಹಣೆ ಹೊಣೆಯನ್ನು ಬ್ರಿಟಿಷರು ಹೊತ್ತುಕೊಂಡರು. ಬೆಂಜಮಿನ್ ಹೀನ್ ಎಂಬಾತನನ್ನು ಉದ್ಯಾನವನ ನಿರ್ವಹಣಾ ಅಧಿಕಾರಿಯನ್ನಾಗಿ ನೇಮಿಸಿದರು. 1856 ರ ವರೆಗೆ ಲಾಲ್ ಬಾಗ್ ಉದ್ಯಾನವನ್ನು ಮಾವಿನ ತೋಪು ಮತ್ತು ಸೈಪ್ರೆಸ್ ಉದ್ಯಾನ ಎಂದು ಕರೆಯಲಾಗುತ್ತಿತ್ತು. ಈ ಉದ್ಯಾನದಲ್ಲಿ ವರ್ಷವಿಡೀ ಅರಳುವ ಕೆಂಪು ಗುಲಾಬಿಗಳ ಸಂಗ್ರಹದಿಂದಾಗಿ ಉದ್ಯಾನಕ್ಕೆ ಲಾಲ್ ಬಾಗ್ ಎಂದು ಹೆಸರಿಸಲಾಯಿತು. ಲಾಲ್‌ಬಾಗಿನಲ್ಲಿ ಪುಷ್ಪ ಪ್ರದರ್ಶನ ಆರಂಭಗೊಂಡಿದ್ದು 1857ರಲ್ಲಿ. ಅಂದು ಮಾಡಲಾದ ಆ ಪುಷ್ಪ ಪ್ರದರ್ಶನ ಎಷ್ಟು ಜನಪ್ರಿಯವಾಯಿತೆಂದರೆ ಶೀಘ್ರದಲ್ಲೇ ವರ್ಷಕ್ಕೆ ಎರಡು ಬಾರಿ ಪುಷ್ಪ ಪ್ರದರ್ಶನ ಆಯೋಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಇದನ್ನೂ ಓದಿ: Lalbagh Flower Show: ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಡೇಟ್ ಫಿಕ್ಸ್, ಈ ವರ್ಷ ಏನೆಲ್ಲಾ ವಿಶೇಷತೆಗಳಿರಲಿವೆ ಗೊತ್ತಾ?
ಇನ್ನು ಲಾಲ್‌ಬಾಗ್‌ನ ಸುವರ್ಣ ಯುಗವನ್ನು 1874 ರಿಂದ ಎಂದು ಗುರುತಿಸಲಾಗುತ್ತೆ. ಏಕೆಂದರೆ ಲಾಲ್‌ಬಾಗ್ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡ ಜಾನ್ ಕ್ಯಾಮೆರಾನ್ ಆಧುನಿಕ ಲಾಲ್‌ಬಾಗ್ ರೂಪಿಸಲು ಅಡಿಗಲ್ಲು ಹಾಕಿದ್ರು. ಇವರ ನಂತರ ಬಂದ ಗುಸ್ತಾವ್ ಹರ್ಮನ್ ಕೃಂಬಿಗಲ್ ಲಾಲ್‌ಬಾಗ್ ಅನ್ನು ಮತ್ತಷ್ಟು ಅದ್ಭುತವಾಗಿ ರೂಪಿಸಿದರು.
ಸುಲ್ತಾನರ ಆಡಳಿತದ ಸಮಯದಲ್ಲಿ ಲಾಲ್‌ಬಾಗ್ ಒಳಗೆ ಯಾವುದೇ ಕಟ್ಟಡಗಳಿರಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಒಂದೊಂದೇ ಕಟ್ಟಡಗಳು ನಿರ್ಮಾಣವಾದವು. ಭಾರತದ ಮೊದಲ ಲಾನ್ ಗಡಿಯಾರವನ್ನು ಹಿಂದೂಸ್ತಾನ್ ಮೆಷಿನ್ ಟೂಲ್ಸ್ (HMT) ಲಾಲ್‌ಬಾಗ್ ಉದ್ಯಾನದಲ್ಲಿಯೇ ಸ್ಥಾಪಿಸಿತು. 1867ರಲ್ಲಿ ಬ್ಯಾಂಡ್‌ಸ್ಟಾಂಡ್ ಕಟ್ಟಡ ನಿರ್ಮಾಣವಾಯಿತು. ಆಗಿನ ಸರ್ಕಾರಿ ಉದ್ಯಾನಗಳ ಅಧೀಕ್ಷಕ ಜೇಮ್ಸ್ ಕ್ಯಾಮರೂನ್ ಲಂಡನ್‌ನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯಲ್ಲಿ ಗಾಜಿನ ಮನೆ ನಿರ್ಮಾಣವನ್ನು ಪ್ರಸ್ತಾಪಿಸಿದ್ದರು. 1888 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಲಾಯಿತು ಮತ್ತು 1890 ರಲ್ಲಿ 75,000 ರೂ ವೆಚ್ಚದಲ್ಲಿ ಗಾಜಿನ ಮನೆಯನ್ನು ಪೂರ್ಣಗೊಳಿಸಲಾಯಿತು.
ಲಾಲ್‌ಬಾಗ್ ಸಸ್ಯೋದ್ಯಾನವು ಭಾರತದಲ್ಲಿಯೇ ಅಪರೂಪವಾದ ಮತ್ತು ಸಸ್ಯಗಳ ದೊಡ್ಡ ಸಂಗ್ರಹ ರಾಶಿಯಾಗಿದೆ. ಇಲ್ಲಿ ಸುಮಾರು ನೂರಕ್ಕೂ ಹೆಚ್ಚು ವರ್ಷಗಳ ಪುರಾತನ ಹಾಗೂ ಅಪರೂಪ ಜಾತಿಯ ಮರಗಳಿವೆ. ಮೊದಲು ಲಾಲ್‌ಬಾಗ್‌ನಲ್ಲಿ ಸಸ್ಯಸಂಕುಲ ಮಾತ್ರವಲ್ಲದೆ ಸಿಂಹ, ಹುಲಿ, ಕರಡಿ, ಜಿಂಕೆ, ನವಿಲುಗಳು, ಹಂಸಗಳು ಮತ್ತು ವಿವಿಧ ಮಂಗಗಳಂತಹ ಕಾಡು ಪ್ರಾಣಿಗಳ ಸಂಗ್ರಹವೂ ಇತ್ತು. 1920 ರಲ್ಲಿ ಲಾಲ್ಬಾಗ್ನಲ್ಲಿದ್ದ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಲಾಯಿತು. ಲಾಲ್ ಬಾಗ್ ಈಗ ಕರ್ನಾಟಕ ಸರ್ಕಾರದ ತೋಟಗಾರಿಕೆ ನಿರ್ದೇಶನಾಲಯದ ಅಡಿಯಲ್ಲಿದೆ. ಸಸ್ಯಗಳ ವೈಜ್ಞಾನಿಕ ಅಧ್ಯಯನ ಮತ್ತು ಅವುಗಳ ಸಂರಕ್ಷಣೆಯ ಕೇಂದ್ರವಾಗಿ ಲಾಲ್ ಬಾಗ್ ಈಗ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಅದರ ವಿನ್ಯಾಸ, ನಿರ್ವಹಣೆ, ವೈಜ್ಞಾನಿಕ ಸಂಪತ್ತು ಮತ್ತು ರಮಣೀಯ ಸೌಂದರ್ಯಕ್ಕಾಗಿ ವಿಶ್ವದ ಅತ್ಯುತ್ತಮ ಉದ್ಯಾನವನಗಳಲ್ಲಿ ಒಂದಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:23 am, Wed, 25 January 23