ನಾಗರಬಾವಿ ರಿಂಗ್ ರೋಡ್ ವಕೀಲನ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಾರ್ಟ್ ಅಟ್ಯಾಕ್ ಅಲ್ಲ, ಅದು ಭೀಕರ ಕೊಲೆ

ಬೆಂಗಳೂರಿನಲ್ಲಿ ವಕೀಲ ಶ್ರೀರಾಮ್ ಅವರ ಸಾವು ಆರಂಭದಲ್ಲಿ ಅಸಹಜ ಸಾವು ಎಂದು ಶಂಕಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಪೆಟ್ಟು ಬಿದ್ದು ರಕ್ತ ಹೆಪ್ಪುಗಟ್ಟಿದ ಕಾರಣ ಸಾವು ಸಂಭವಿಸಿರುವುದು ಬಯಲಾಯಿತು. ಬಾಡಿಗೆ ವಿಚಾರದಲ್ಲಿ ಆಟೋ ಚಾಲಕ ಮೇಘರಾಜ್‌ನೊಂದಿಗೆ ನಡೆದ ಗಲಾಟೆ ಕೊಲೆಗೆ ಕಾರಣವಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ನಾಗರಬಾವಿ ರಿಂಗ್ ರೋಡ್ ವಕೀಲನ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಾರ್ಟ್ ಅಟ್ಯಾಕ್ ಅಲ್ಲ, ಅದು ಭೀಕರ ಕೊಲೆ
Bengaluru Lawyer Murder (1)
Edited By:

Updated on: Oct 24, 2026 | 12:04 PM

ಬೆಂಗಳೂರು, ಅ.24: ಆರಂಭದಲ್ಲಿ ಅಸಹಜ ಸಾವು ಹಾಗೂ ಹೃದಯಾಘಾತ ಎಂದು ಶಂಕಿಸಲಾಗಿದ್ದ ವಕೀಲನೊಬ್ಬನ ಸಾವು, ತನಿಖೆಯ ವೇಳೆ ಭೀಕರ ಕೊಲೆ ಎಂಬುದು ಪತ್ತೆಯಾಗಿದೆ. ಆಟೋ ಬಾಡಿಗೆ ವಿಚಾರದಲ್ಲಿ ನಡೆದ ಸಣ್ಣ ಗಲಾಟೆ ವಕೀಲನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ಶ್ರೀರಾಮ್ ಎಂಬುವವರೇ ಕೊಲೆಯಾದ ದುರದೃಷ್ಟಕರ ವ್ಯಕ್ತಿ. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಆಟೋ ಚಾಲಕ ಮೇಘರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ ಹಾಗೂ ಕೊಲೆಯಾದದ್ದು ಹೇಗೆ?:

ಕಳೆದ ಅಕ್ಟೋಬರ್ 09 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನಾಗರಬಾವಿ ರಿಂಗ್ ರೋಡ್ ಬಳಿ ವಕೀಲ ಶ್ರೀರಾಮ್ ಏಕಾಏಕಿ ಅಸ್ವಸ್ಥನಾಗಿ ಬಿದ್ದಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶ್ರೀರಾಮ್ ಮೃತಪಟ್ಟಿದ್ದರು. ಶ್ರೀರಾಮ್ ಸಾವು ಹೃದಯಾಘಾತದಿಂದ ಸಂಭವಿಸಿರಬಹುದು ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಹೀಗಾಗಿ ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮೃತದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ಕುಟುಂಬಸ್ಥರಿಗೆ ಅನುಮಾನ ವ್ಯಕ್ತವಾಗಿ ಪರಿಶೀಲಿಸಿದಾಗ, ಘಟನೆ ನಡೆದ ದಿನ ಶ್ರೀರಾಮ್ ಜೊತೆಗೆ ಆಟೋ ಚಾಲಕನೊಬ್ಬ ಗಲಾಟೆ ಮಾಡಿದ್ದ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ: ಶಿವಮೊಗ್ಗ ದಸರಾ ಅಂಬಾರಿ ಆನೆ ಸೋಮಣ್ಣ ಭಯಗೊಂಡು ಓಡಿದ್ದೇಕೆ? ತನಿಖಾ ವರದಿಯಲ್ಲಿ ಅಚ್ಚರಿಯ ಸಂಗತಿಗಳು ಬಹಿರಂಗ

ಅಂಬೇಡ್ಕರ್ ಕಾಲೇಜು ಬಳಿ ಬಾಡಿಗೆ ಗಲಾಟೆ:

ಅಕ್ಟೋಬರ್ 9ರಂದು ಶ್ರೀರಾಮ್ ಅವರು ಅಂಬೇಡ್ಕರ್ ಕಾಲೇಜು ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮನೆಗೆ ಹೋಗಲು ಆಟೋ ಕೇಳಿದ್ದರು. ಈ ವೇಳೆ ಆಟೋ ಚಾಲಕ ಮೇಘರಾಜನ ಜೊತೆಗೆ ಬಾಡಿಗೆ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಆಟೋ ಬೇಡವೆಂದು ಶ್ರೀರಾಮ್ ಮುಂದೆ ನಡೆದುಕೊಂಡು ಹೊರಟಿದ್ದರು. ಕೋಪಗೊಂಡ ಆಟೋ ಚಾಲಕ ಮೇಘರಾಜ, ತನ್ನ ಸಹಚರರ ಜೊತೆ ಸೇರಿ ಶ್ರೀರಾಮ್‌ ಅವರನ್ನು ಹಿಂದಿನಿಂದ ಬೆನ್ನಟ್ಟಿ ಅವಾಚ್ಯವಾಗಿ ಬೈದು ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ಅಲ್ಲದೆ, ಅವರ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಹಲ್ಲೆಯಿಂದಾಗಿ ತಲೆಗೆ ಪೆಟ್ಟು ಬಿದ್ದು ಮುಂದೆ ನಡೆಯುತ್ತಿದ್ದಂತೆಯೇ ಶ್ರೀರಾಮ್ ಅಸ್ವಸ್ಥಗೊಂಡು ಬಿದ್ದಿದ್ದರು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶ್ರೀರಾಮ್ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸಾವು ಸಂಭವಿಸಿದೆ ಎಂಬ ಸತ್ಯ ಹೊರಬಿದ್ದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆಟೋ ಚಾಲಕ ಮೇಘರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಶ್ರೀರಾಮ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಕೊಲೆ ಎಂದು ಬದಲಾಯಿಸಿಕೊಂಡು, ಮುಖ್ಯ ಆರೋಪಿ ಆಟೋ ಚಾಲಕ ಮೇಘರಾಜನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:29 am, Sat, 24 October 26

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us