ಶಿವಮೊಗ್ಗ ದಸರಾ ಅಂಬಾರಿ ಆನೆ ಸೋಮಣ್ಣ ಭಯಗೊಂಡು ಓಡಿದ್ದೇಕೆ? ತನಿಖಾ ವರದಿಯಲ್ಲಿ ಅಚ್ಚರಿಯ ಸಂಗತಿಗಳು ಬಹಿರಂಗ
ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ವಿಚಲಿತಗೊಂಡು ಓಡಿದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಆಂತರಿಕ ತನಿಖಾ ವರದಿ ಪ್ರಮುಖ ಕಾರಣವನ್ನು ಬಹಿರಂಗಪಡಿಸಿದೆ. ಜನಸಂದಣಿ ಹಾಗೂ ನಿಧಾನಗತಿಯ ನಡಿಗೆಯಿಂದಾಗಿ ಆನೆ ಪಕ್ಕಕ್ಕೆ ತಿರುಗಿದಾಗ ಹಿಂದೆ ಬರುತ್ತಿದ್ದ ಇತರ ಆನೆಗಳನ್ನು ನೋಡಿ ಆತಂಕಗೊಂಡಿತ್ತು. ವರದಿಯಲ್ಲಿ ಇಲಾಖೆಯ ನಿರ್ಲಕ್ಷ್ಯ ಕಂಡುಬಂದಿಲ್ಲ.

ಶಿವಮೊಗ್ಗ, ಅ.24: ಶಿವಮೊಗ್ಗ ದಸರಾ ಮೆರವಣಿಗೆಯ ವೇಳೆ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಢೀರನೇ ವಿಚಲಿತಗೊಂಡು ಜಿಗಿದು ಓಡಿ ಆತಂಕ ಸೃಷ್ಟಿಸಿದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ನಡೆಸಿದ ಆಂತರಿಕ ತನಿಖಾ ವರದಿ ಈಗ ಬಹಿರಂಗವಾಗಿದೆ. ಶಿವಮೊಗ್ಗ ಸಿಸಿಎಫ್ (CCF) ಕೆ.ಟಿ. ಹನುಮಂತಪ್ಪ ಅವರು ಸರ್ಕಾರಕ್ಕೆ ಸಲ್ಲಿಸಿರುವ ಈ ವರದಿಯಲ್ಲಿ ಆನೆ ಭಯಗೊಳ್ಳಲು ಪ್ರಮುಖ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ವರದಿಯಲ್ಲಿ ಬಹಿರಂಗವಾಗಿರುವ ಪ್ರಮುಖ ಕಾರಣ
ತರಬೇತಿ ಮತ್ತು ಸಿದ್ಧತೆ:
ಸರ್ಕಾರದ ಅನುಮತಿ ಪಡೆದು ಅಕ್ಟೋಬರ್ 7ರಿಂದಲೇ ಸಕ್ರೆಬೈಲು ಆನೆ ಬಿಡಾರದಲ್ಲಿ ಸೋಮಣ್ಣ, ಬಹದ್ದೂರ್ ಹಾಗೂ ಸಾಗರ ಆನೆಗಳಿಗೆ ಪ್ರತಿನಿತ್ಯ ನಾಲ್ಕು ಕಿಲೋಮೀಟರ್ ನಡೆಸಿ ತಾಲೀಮು ಹಾಗೂ ಪೌಷ್ಟಿಕ ಆಹಾರ ನೀಡಲಾಗಿತ್ತು. ಅಕ್ಟೋಬರ್ 15ರಂದು ಶಿವಮೊಗ್ಗಕ್ಕೆ ಆಗಮಿಸಿದ ಈ ಆನೆಗಳಿಗೆ ಅಕ್ಟೋಬರ್ 16ರಿಂದ ನಗರದಲ್ಲೂ ತರಬೇತಿ ನೀಡಲಾಗಿತ್ತು. ಪಶುವೈದ್ಯರು ಹಾಗೂ ಅನುಭವಿ ಜಮೆದಾರರ ತಂಡ ಚರ್ಚಿಸಿಯೇ ಸೋಮಣ್ಣ ಆನೆಯನ್ನು ಅಂಬಾರಿಗೆ ಆಯ್ಕೆ ಮಾಡಿತ್ತು.
ಇಲ್ಲಿದೆ ನೋಡಿ ವಿಡಿಯೋ:
ಜನಸ್ತೋಮ ಹಾಗೂ ನಡಿಗೆ ನಿಧಾನ:
ಪ್ರತಿ ವರ್ಷದ ವಾಡಿಕೆಯಂತೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಸಮೀಪ ಮೆರವಣಿಗೆ ಸಾಗುವಾಗ ಜನಸ್ತೋಮ ವಿಪರೀತವಾಗಿ ಹೆಚ್ಚಾಗಿತ್ತು. ಇದರಿಂದಾಗಿ ಮೆರವಣಿಗೆಯ ಜನರ ನಡಿಗೆ ನಿಧಾನಗೊಂಡ ಪರಿಣಾಮ, ಅಂಬಾರಿ ಹೊತ್ತ ಸೋಮಣ್ಣ ಆನೆಯ ನಡಿಗೆಯೂ ನಿಧಾನವಾಯಿತು.
ಇದನ್ನೂ ಓದಿ: ಶಿವಮೊಗ್ಗ ದಸರಾ: ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ
ಸೋಮಣ್ಣ ಆನೆ ಬೆದರಲು ಅಸಲಿ ಕಾರಣ ಏನು?:
ನಡಿಗೆ ನಿಧಾನವಾದಾಗ ಆನೆ ಪಕ್ಕಕ್ಕೆ ತಿರುಗಲು ಆರಂಭಿಸಿದೆ. ಆ ಸಂದರ್ಭದಲ್ಲಿ ಆನೆ ಮೂತ್ರ ವಿಸರ್ಜನೆಗೆ ಸ್ಥಳಾವಕಾಶ ಮಾಡಿಕೊಳ್ಳುತ್ತಿದೆ ಎಂದು ಮಾವುತ ಮತ್ತು ಕಾವಾಡಿಗರು ಭಾವಿಸಿದ್ದರು. ಆದರೆ, ಸೋಮಣ್ಣ ಆನೆ ತಿರುಗಿದಾಗ ಹಿಂದೆ ಬರುತ್ತಿದ್ದ ಸಾಗರ ಮತ್ತು ಬಹದ್ದೂರ್ ಆನೆಗಳನ್ನು ನೋಡಿ ಏಕಾಏಕಿ ಆತಂಕಗೊಂಡಿದೆ. ತಕ್ಷಣ ಹೂಂಕರಿಸಿ, ಬಾಲ ಎತ್ತಿ ಗಾಬರಿಗೊಂಡು, ಆ ಎರಡೂ ಆನೆಗಳನ್ನು ತಳ್ಳಿ ಅಂಬಾರಿ ಸಮೇತ ಅಲ್ಲಿಂದ ಓಡಿದೆ.
ಸೋಮಣ್ಣ ಆನೆ ಕಾಡುಪ್ರಾಣಿಯಾಗಿರುವುದರಿಂದ ಜನರ ದಟ್ಟಣೆ ಹಾಗೂ ಇತರೆ ಆನೆಗಳನ್ನು ಕಂಡು ದಿಢೀರ್ ವಿಚಲಿತಗೊಂಡು ಈ ರೀತಿ ಮಾಡಿದೆ ಹೊರತು, ವರದಿಯಲ್ಲಿ ಎಲ್ಲಿಯೂ ಅರಣ್ಯ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳ ನಿರ್ಲಕ್ಷ್ಯ ಕಂಡುಬಂದಿಲ್ಲ. ಹೀಗಾಗಿ ಯಾವುದೇ ಸಿಬ್ಬಂದಿಯ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



