ಮೊದಲ ದಿನವೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್​ವೇ ಟೋಲ್​ನಲ್ಲಿ ತಾಂತ್ರಿಕ ಸಮಸ್ಯೆ, ವಾಹನ ಸವಾರರ ಆಕ್ರೋಶ

|

Updated on: Mar 14, 2023 | 10:06 AM

Bengaluru-Mysore National Highway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್​ನಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು ವಾಹನ ಸವಾರರು ಆಕ್ರೋಶಗೊಂಡಿದ್ದಾರೆ.

ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ(Bengaluru Mysuru Expressway) ನಲ್ಲಿ ಟೋಲ್ ಸಂಗ್ರಹ ಇಂದಿನಿಂದ(ಮಾರ್ಚ್ 14) ಆರಂಭವಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹಿಸಲಾಗುತ್ತಿದ್ದು ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದ್ರೆ ಟೋಲ್ ವಿರುದ್ಧ ವಾಹನ ಸವಾರರು ಗರಂ ಆಗಿದ್ದಾರೆ. ಟೋಲ್ ಸಂಗ್ರಹ ಆರಂಭವಾದ ಮೊದಲ ದಿನವೇ ಬೆಳ್ಳಂ ಬೆಳಗ್ಗೆಯೇ ಟೋಲ್ ಸಿಬ್ಬಂದಿ ವಿರುದ್ಧ ವಾಹನ ಸವಾರರು ಸಿಡಿಮಿಡಿಗೊಂಡಿದ್ದಾರೆ.

ಟೋಲ್‌ ವಿರುದ್ಧ ವಾಹನ ಸವಾರರ ಆಕ್ರೋಶ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಟೆಕ್ನಿಕಲ್ ಎರರ್ ಆಗುತ್ತಿದೆ. ಫಾಸ್ಟ್ಯಾಗ್ ಇದ್ರೂ ಟೋಲ್ ಪ್ಲಾಜಾ ಸ್ಕ್ಯಾನ್ ತೆಗೆದುಕೊಳ್ಳುತ್ತಿಲ್ಲ. ಸ್ಕ್ಯಾನ್ ಆಗೋದ್ರಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಟೋಲ್ ಕಂಬಿ ಕೂಡ ಸರಿಯಾಗಿ ವರ್ಕ್ ಆಗುತ್ತಿಲ್ಲ. ಸ್ಕ್ಯಾನ್ ಆಗಿ ವಾಹನ ಚಲಿಸುವಾಗಲೇ ವಾಹನದ ಮೇಲೆ ಕಂಬಿ ಬೀಳುತ್ತಿದೆ. ಹೀಗಾಗಿ ವಾಹನ ಚಾಲಕರು ಗರಂ ಆಗುತ್ತಿದ್ದಾರೆ. ಸಿದ್ಧತೆ ಮಾಡಿಕೊಳ್ಳದೇ ಯಾಕೆ ಟೋಲ್‌ ತಗೋತಿರಿ ಅಂತ ‌ಅವಾಜ್ ಹಾಕುತ್ತಿದ್ದಾರೆ.

ಇನ್ನು ಈ ಬಗ್ಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಕೆ ಬಳಿ ಮಾತನಾಡಿದ ವಾಹನ ಸವಾರರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಸಿದ್ಧತೆಯಿಲ್ಲದೇ ಟೋಲ್‌ ದರ ಸಂಗ್ರಹಿಸಲಾಗುತ್ತಿದೆ. ಸರಿಯಾದ ವ್ಯವಸ್ಥೆ ಇಲ್ಲ, ಟೋಲ್ ಕೂಡ ಸರಿಯಾಗಿ ವರ್ಕ್ ಆಗ್ತಿಲ್ಲ. ಟೋಲ್ ಕಂಬಿ ಕಾರಿನ ಮೇಲೆ ಬೀಳುತ್ತಿದೆ, ಗ್ಲಾಸ್ ಒಡೆದು ಹೋದ್ರೆ ಏನ್ಮಾಡಬೇಕು. ಮೊದಲು ಟೋಲ್ ವ್ಯವಸ್ಥೆ ಸರಿ‌ ಮಾಡಲಿ. ಟೋಲ್ ತಗೋತಾರೆ ಅನ್ನೋದೆ ಗೊತ್ತಿರಲಿಲ್ಲ. ನಿನ್ನೆ ಸಂಜೆಯೇ ಇಲ್ಲಿಂದ ಹೋಗಿದ್ದೀನಿ. ನಿನ್ನೆನೇ ಮಾಹಿತಿ ನೀಡಬೇಕಿತ್ತು. ಕೊನೆ ಪಕ್ಷ ಮುಂದೆ ನೊಟೀಸ್ ಆದ್ರೂ ಹಾಕಬೇಕಿತ್ತು ಎಂದು ಟೋಲ್ ವಿರುದ್ಧ ವಾಹನ ಸವಾರ ಸತೀಶ್ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಬೆಂಗ​ಳೂರು-ಮೈಸೂರು ಹೆದ್ದಾರಿ ಟೋಲ್‌ ಸಂಗ್ರಹ: ಕಾಂಗ್ರೆಸ್, ಕನ್ನಡ ಸಂಘಟನೆಗಳಿಂದ ಪ್ರತಿಭಟನೆ, ಸ್ಥಳದಲ್ಲಿ ಬಿಗುವಿನ ವಾತಾವರಣ

ಮತ್ತೊಂದೆಡೆ ರೈತ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ರಾಮನಗರಕ್ಕೆ ಹೋಗಬೇಕು. ಒಂದೇ‌ ಏಟಿಗೆ 250‌ ರೂ ಟೋಲ್ ಕಟ್ಟಬೇಕಂತೆ. ಇಷ್ಟು ದುಡ್ಡಲ್ಲಿ ಒಂದ್ ಆಳ್ ಕೆಲಸ ಮಾಡೋಕೆ ಬರ್ತಾರೆ. ಇಲ್ಲಿಂದಿಲ್ಲಿಗೆ ನಾವು ಇಷ್ಟು ಹಣ ಎಲ್ಲಿಂದ ತರೋದು. ಕುಮಾರಣ್ಣ ಇದರ ಬಗ್ಗೆ ಮಾತಾಡಬೇಕು. ನಮಗೆ ಸಪರೇಟ್ ಲೈನ್ ಬೇಕು. ಇವತ್ತು ಗಲಾಟೆ ಮಾಡಿದಕ್ಕೆ ಹಾಗೆಯೇ ಬಿಟ್ಟಿದ್ದಾರೆ. ನಾನು ಟೋಲ್ ಕಟ್ಟಿಲ್ಲ ಎಂದು ಕಣಮಿಣಕೆ ಟೋಲ್ ಪ್ಲಾಜಾ ಬಳಿ ರೈತ ರಾಜಣ್ಣ ಅಸಮಾಧಾನ ಹೊರ ಹಾಕಿದ್ದಾರೆ.

ಯಾವುದಕ್ಕೆ ಎಷ್ಟು ಶುಲ್ಕ?

    • ಕಾರು, ಜೀಪ್​​, ವ್ಯಾನ್​ಗೆ ಏಕಮುಖ ಸಂಚಾರಕ್ಕೆ 135 ರೂ ದರ
    • ಕಾರು, ಜೀಪ್​​​, ವ್ಯಾನ್​​ಗೆ​ ಎರಡು ಕಡೆ ಸಂಚಾರಕ್ಕೆ 205 ರೂ.
    • ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂ. ನಿಗದಿ
    • ಕಾರು, ಜೀಪ್​​​, ವ್ಯಾನ್​​ಗಳಿಗೆ ತಿಂಗಳ ಪಾಸ್​​ ದರ 4,425 ರೂ.
    • ಲಘು ಸರಕುವಾಹನ, ಮಿನಿ ಬಸ್​ಗಳ ಏಕಮುಖ ಸಂಚಾರಕ್ಕೆ 220 ರೂ
    • ಲಘು ಸರಕುವಾಹನ, ಮಿನಿ ಬಸ್​ಗಳ ಎರಡು ಕಡೆ ಸಂಚಾರಕ್ಕೆ 330 ರೂ
    • ಲಘು ಸರಕುವಾಹನ, ಮಿನಿ ಬಸ್​ಗಳಿಗೆ ತಿಂಗಳ ಪಾಸ್​ ದರ 7315 ರೂ
    • ಟ್ರಕ್‌/ಬಸ್‌ ಏಕಮುಖ ಸಂಚಾರಕ್ಕೆ ಟೋಲ್​ ದರ 460 ರೂ. ನಿಗದಿ
    • ಟ್ರಕ್‌/ಬಸ್‌ ಎರಡು ಕಡೆ ಸಂಚಾರಕ್ಕೆ 690 ರೂಪಾಯಿ ನಿಗದಿ
    • ಟ್ರಕ್‌/ಬಸ್​​ಗಳ ತಿಂಗಳ ಟೋಲ್ ಪಾಸ್​ ದರ 15,325 ರೂ. ನಿಗದಿ
    • 3 ಆಕ್ಸೆಲ್‌ ವಾಣಿಜ್ಯ ವಾಹನ ಏಕಮುಖ ಸಂಚಾರ ₹500, ಎರಡು ಕಡೆ ₹750
    • ಅತಿ ಭಾರದ ವಾಹನಗಳು ಏಕಮುಖ ಸಂಚಾರಕ್ಕೆ 880 ರೂ. ನಿಗದಿ
    • ಅತಿ ಭಾರದ ವಾಹನಗಳು ಎರಡು ಕಡೆ ಸಂಚಾರಕ್ಕೆ ₹1315 ದರ ನಿಗದಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ