ಬೆಂಗಳೂರು, ಅ.03: ಮಂಗಳವಾರ ನಸುಕಿನ ಜಾವ ನಮ್ಮ ಮೆಟ್ರೊ (Namma Metro) ಹಸಿರು ಮಾರ್ಗದಲ್ಲಿ ರೀ ರೈಲು ಹಳಿ ತಪ್ಪಿದೆ. ಹೀಗಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ ಉಂಟಾಗಿದೆ. ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ಬಳಸುವ ರೀ ರೈಲು ರಾಜಾಜಿನಗರ ನಿಲ್ದಾಣದ ಟ್ರಾಕ್ ನಲ್ಲಿ ಹಳಿ ತಪ್ಪಿದೆ. ಇದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬೆಳಗ್ಗೆ ಕೆಲಸಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ಟ್ರ್ಯಾಕ್ ನಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ರೀ ರೈಲ್ ಅನ್ನು ಹಳಿಗೆ ತರಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸಂಜೆಯ ವರೆಗೂ ಇದೇ ಸ್ಥಿತಿ ಇರಲಿದೆ ಎಂದು ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳು ತಿಳಿಸಿದ್ದಾರೆ.
ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆಯವರೆಗೆ ಎರಡೂ ಲೈನ್ಗಳಲ್ಲಿ ಮಾತ್ರ ಮೆಟ್ರೊ ಸಂಚರಿಸುತ್ತಿವೆ. ಅಲ್ಲೂ ನಿಗದಿತ ಸಮಯಕ್ಕೆ ಮೆಟ್ರೊ ಸಂಚಾರ ನಡೆಸುತ್ತಿಲ್ಲ. ಇನ್ನು ಮಂತ್ರಿ ಸ್ಕ್ವೇರ್‌ನಿಂದ ಯಶವಂತಪುರ ತನಕ ಒಂದು ಮಾರ್ಗದಲ್ಲಿ ಅರ್ಧ ತಾಸಿಗೆ ಒಂದು ಮೆಟ್ರೊ ಸಂಚರಿಸುತ್ತಿದ್ದು ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದೆ. ಒಂದು ಲೈನ್ ಅಲ್ಲಿ ಮೆಟ್ರೋ ಸಂಚಾರದ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಪೀಕ್ ಅವರ್ ಆದ ಕಾರಣ ಸಿಂಗಲ್ ಲೈನ್ ಅಲ್ಲಿ ಸಂಚಾರ ಮಾಡಿಸಲು ಪ್ರಯತ್ನ ಮಾಡಲಾಗುತ್ತಿದೆ. ರೀ ರೈಲು ಸರಿಪಡಿಸುವವರೆಗೆ ಸಂಚಾರ ವ್ಯತ್ಯಯ ಆಗಲಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣವನ್ನ ಸದ್ಯ ಮುಚ್ಚಲಾಗಿದೆ. ಮೆಟ್ರೋ ನಿಲ್ದಾಣಕ್ಕೆ ಬಂದು ಪ್ರಯಾಣಿಕರು ವಾಪಾಸ್ ಹೋಗುತ್ತಿದ್ದಾರೆ.
ಇನ್ನು ಕಳೆದ 7-8 ಗಂಟೆಗಳಿಂದ ದುರಸ್ತಿ ಕಾರ್ಯ ನಡೆಯುತ್ತಿದ್ದು ಹಳಿತಪ್ಪಿದ ರೀ ರೈಲ್ ಸರಿಪಡಿಸಲು ಇಂಜಿನಿಯರ್ಗಳು ಹರಸಾಹಸ ಪಡುತ್ತಿದ್ದಾರೆ. ಹೈಡ್ರಾಲಿಕ್ ಪವರ್ ಬಳಸಿ ರೀ ರೈಲ್ ಟ್ರ್ಯಾಕ್ಗೆ ಕೂರಿಸಲು ಪ್ರಯತ್ನ ನಡೆಯುತ್ತಿದೆ. ಮೆಟ್ರೋ ಹಳಿ ಬದಿಯ ಗೋಡೆಗೆ ತಾಗಿ ರೀ ರೈಲ್ ನಿಂತಿದೆ. ಸದ್ಯಕ್ಕೆ ಒಂದೇ ಟ್ರ್ಯಾಕ್ನಲ್ಲಿ ಮೆಟ್ರೋ ಸಂಚರಿಸುತ್ತಿದ್ದು ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿ ತಿರುವಿನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ಹಳಿ ತಪ್ಪಿದ ರೀ ರೈಲ್: ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯ
ನಾಗಸಂಧ್ರದಿಂದ ಸಿಲ್ಕ್ ರೋಡ್ ಗೆ ಹೋಗ್ತಿದ್ದ ಗ್ರೀನ್ ಲೈನ್ ಮೆಟ್ರೋ ಇಂದು ಮಾತ್ರ ಯಶವಂತಪುರದಿಂದ ನಾಗಸಂಧ್ರ ಕಡೆಗೆ ಪ್ರಯಾಣಿಸಲಿದೆ. ಯಶವಂತಪುರ ಮೆಟ್ರೋ ನಿಲ್ದಾಣ ಸಂಪೂರ್ಣ ಫುಲ್ ಆಗಿದ್ದು ಫ್ಲಾಟ್ ಫಾರಂ ನಲ್ಲಿ ಜನ ನಿಲ್ಲೋದಕ್ಕೂ ಜಾಗವಿಲ್ಲದಂತಾಗಿದೆ. ಸದ್ಯ ಹೆಚ್ಚಿನ ಪ್ರಯಾಣಿಕರು ನುಗ್ಗುತ್ತಿರುವ ಹಿನ್ನೆಲೆ ಗಲಾಟೆ, ಗದ್ದಲಗಳಾಗಿವೆ. ಮೆಟ್ರೋ ಪ್ರವೇಶ ದ್ವಾರವನ್ನ ಒದ್ದು ಪ್ರವೇಶದ್ವಾರದ ಗ್ಲಾಸ್ ದಾಟಿ ಪ್ರಯಾಣಿಕರು ಮೆಟ್ರೋ ರೈಲು ಹಿಡಿಯಲು ಓಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಮೆಟ್ರೋ ಸಿಬ್ಬಂದಿ ಯಶವಂತಪುರ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ (ಶರ್ಟರ್) ಗಳನ್ನ ಕ್ಲೋಸ್ ಮಾಡಿದ್ದಾರೆ.
ಟ್ರ್ಯಾಕ್ ಯಿಂದ ರೀ ರೈಲಿನ ಒಂದು ಭಾಗ ಸಂಪೂರ್ಣ ಕೆಳಗಿಳಿದಿರುವ ಹಿನ್ನೆಲೆ ಸರಿಪಡಿಸಲು ಹೆಚ್ಚಿನ ಕಾಲಾವಕಾಶ ಬೇಕಿದೆ. ಸದ್ಯ ಇನ್ನೂ ಹೆಚ್ಚಿನ ಸಿಬ್ಬಂದಿ ಜೊತೆಗೆ ಟೆಕ್ನಿಕಲ್ ಎಕ್ಸ್ಪರ್ಟ್ಸ್ ಗಳು ಕೂಡಲೇ ಸ್ಥಳಕ್ಕೆ ತೆರಳುವಂತೆ ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಸಂಪೂರ್ಣ ಕಾರ್ಯಚರಣೆ ಮುಗಿಸಿ ರೈಲು ಸಂಚಾರ ಆರಂಭಕ್ಕೆ ಸಂಜೆಯಾಗುವ ಸಾಧ್ಯತೆ ಇದೆ ಎಂದು ಟಿವಿ9ಗೆ ಮೆಟ್ರೋ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಳಿ ತಪ್ಪಿರುವ ರೀ ರೈಲ್ ವೆಹಿಕಲ್ ಹಳಿಗೆ ತರುವ ಬಗ್ಗೆ ಹಿರಿಯ ಇಂಜಿನಿಯರ್ ಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹೇಗೆ ಟ್ರ್ಯಾಕ್ ಗೆ ತರೋದು ಅನ್ನೋ ಬಗ್ಗೆ ದೆಹಲಿ ಎಕ್ಸ್ ಪರ್ಟ್ ಗಳ ಜೊತೆ ವರ್ಚುವಲ್ ಸಭೆ ನಡೆಸಿ ಸಮಾಲೋಚನೆ ನಡೆಸಲಾಗುತ್ತಿದೆ. ಹಳಿಗೆ ಸಮಸ್ಯೆಯಾಗದಂತೆ ಟ್ರ್ಯಾಕ್ ಗೆ ಇಳಿಸೋ ಚರ್ಚೆ ನಡೆಯುತ್ತಿದೆ. ಈಗಾಗಲೇ ಬೆಂಗಳೂರು ಇಂಜಿನಿಯರ್ ಗಳಿಂದ ಬೆಳಗ್ಗೆಯಿಂದ ಸತತ ಪ್ರಯತ್ನ ನಡೆಯುತ್ತಲೇ ಇದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:36 am, Tue, 3 October 23