ಗ್ಯಾಸ್ ಕಂಪನಿಯ ಡೀಲರ್ ಶಿಪ್ ಸಿಗುತ್ತೆಂದು ನಂಬಿ 45 ಲಕ್ಷ ರೂ. ಕಳೆದುಕೊಂಡ ನಿವೃತ್ತ ಪ್ರಾಂಶುಪಾಲ
ಖಾಸಗಿ ಗ್ಯಾಸ್ ಕಂಪನಿಯ ಡೀಲರ್ ಶಿಪ್ ಕೊಡಿಸುವುದಾಗಿ ಭರವಸೆ ನೀಡಿ ನಿವೃತ್ತ ಪ್ರಾಂಶುಪಾಲ ನಾಗೇಂದ್ರಪ್ಪ ಅವರ ಬಳಿ ಪದೇ ಪದೇ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ. ನಗೇಂದ್ರಪ್ಪನವರು 45,80,300 ರೂ.ಗಳನ್ನು ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಮಾಹಿತಿ ಹಂಚಿಕೊಂಡ ನಿವೃತ್ತ ಪ್ರಾಂಶುಪಾಲ ನಾಗೇಂದ್ರಪ್ಪ ಅವರು, ನಾನು ನನ್ನ ಎಲ್ಲಾ ಹಣವನ್ನು ಕಳೆದುಕೊಂಡಿದ್ದೇನೆ. ನನ್ನ ಬಳಿ ಈಗ ಏನೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು,ಅ.03: ಹೊಸಪೇಟೆಯ ಐಟಿಐ ಸಂಸ್ಥೆಯೊಂದರ ನಿವೃತ್ತ ಪ್ರಾಂಶುಪಾಲರೊಬ್ಬರಿಗೆ (61) ಮುಂಬೈನಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿ ಕರೆ ಮಾಡಿದ್ದ ವ್ಯಕ್ತಿ 45,80,300 ರೂ.ಗಳನ್ನು ವಂಚಿಸಿರುವ ಘಟನೆ ನಡೆದಿದೆ. ಖಾಸಗಿ ಗ್ಯಾಸ್ ಕಂಪನಿಯ ಡೀಲರ್ ಶಿಪ್ (Private Gas Company Dealership) ಕೊಡಿಸುವುದಾಗಿ ಭರವಸೆ ನೀಡಿ ನಿವೃತ್ತ ಪ್ರಾಂಶುಪಾಲ ನಾಗೇಂದ್ರಪ್ಪ (Ex-principal) ಅವರ ಬಳಿ ಪದೇ ಪದೇ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ. ಘಟನೆ ಸಂಬಂಧ ಸೆಪ್ಟೆಂಬರ್ 30 ರಂದು ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ಅಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ 2008 ಮತ್ತು ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಘಟನೆ ಸಂಬಂಧ ಮಾಹಿತಿ ಹಂಚಿಕೊಂಡ ನಿವೃತ್ತ ಪ್ರಾಂಶುಪಾಲ ನಾಗೇಂದ್ರಪ್ಪ ಅವರು, ನಾನು ನನ್ನ ಎಲ್ಲಾ ಹಣವನ್ನು ಕಳೆದುಕೊಂಡಿದ್ದೇನೆ. ನನ್ನ ಬಳಿ ಈಗ ಏನೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಗೋ ಗ್ಯಾಸ್‌ನ ಡೀಲರ್‌ಶಿಪ್ ಸಿಗುತ್ತದೆ. ನನ್ನ ಹಳ್ಳಿಯಲ್ಲಿ ವ್ಯಾಪಾರದ ಮೂಲಕ ಉತ್ತಮ ಹಣವನ್ನು ಗಳಿಸಬಹುದು ಎಂಬ ಆಸೆಯಿಂದ ನಾನು ನನ್ನಲ್ಲಿದ್ದ ಎಲ್ಲಾ ಹಣವನ್ನು ವಂಚಕನಿಗೆ ವರ್ಗಾಯಿಸಿದ್ದೇನೆ ಎಂದರು.
ಇದನ್ನೂ ಓದಿ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ, 2 ವರ್ಷದ ಪುಟ್ಟ ಮಗು ಸೇರಿ ಇಬ್ಬರು ಸಾವು
ನಾಗೇಂದ್ರಪ್ಪ ವಂಚನೆಗೆ ಒಳಗಾಗಿದ್ದು ಹೇಗೆ?
ಕೆಲಸದಿಂದ ನಿವೃತ್ತಿ ಪಡೆದಿದ್ದ ನಾಗೇಂದ್ರಪ್ಪ ಅವರು ಆನ್‌ಲೈನ್‌ನಲ್ಲಿ ಮಾಹಿತಿ ಕಲೆ ಹಾಕಿದ್ದರು. ಆಗ ಮುಂಬೈನಲ್ಲಿರುವ ಗೋ ಗ್ಯಾಸ್ ಕಂಪನಿಗೆ ಕರ್ನಾಟಕದಲ್ಲಿ ಡೀಲರ್‌ಶಿಪ್ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಆಗಸ್ಟ್ 21 ರಂದು ಆನ್‌ಲೈನ್‌ನಲ್ಲಿ ಸಿಕ್ಕ ನಂಬರ್ಗೆ ಕಾಲ್ ಮಾಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಮುಂಬೈನಿಂದ ಶಶಿಕಾಂತ್ ತಿವಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ತಾನು ಡೀಲರ್‌ಶಿಪ್ ಕೊಡಿಸುವುದಾಗಿ ನಂಬಿಸಿ ಆರ್‌ಟಿಜಿಎಸ್ ಮೂಲಕ ಹಣವನ್ನು ವರ್ಗಾಯಿಸಲು ಹೇಳಿದ್ದಾನೆ. ಬಳಿಕ Google Pay ಅಥವಾ RTGS ಮೂಲಕ NOC ಪಡೆಯಲು, ಅನುಮತಿಗಾಗಿ ಎಂದು ವಿವಿಧ ಕಾರಣಗಳಿಗಾಗಿ ಹಣವನ್ನು ವರ್ಗಾಯಿಸಲು ಪದೇ ಪದೇ ಕರೆ ಬಂದಿದೆ. ಒಂದು ತಿಂಗಳ ಕಾಲ ಬೇರೆ ಬೇರೆ ದಿನ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಬೇಗ ಕೆಲಸ ಆಗಲೆಂದು ನಾನು ಕೂಡ ಹಣ ವರ್ಗಾವಣೆ ಮಾಡಿದೆ. ಸೆ.22ರಂದು ಕೊನೆಯ ಕಂತು ಎಂದು 5 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡರು. ಅದಾದ ನಂತರ, ಕರೆ ಮಾಡಿದವರ ಸಂಖ್ಯೆ ಸ್ವಿಚ್ ಆಫ್ ಆಯಿತು.
ಬಳಿಕ ಒಂದು ವಾರ ಶಶಿಕಾಂತ್ ತಿವಾರಿ ನಂಬರ್ಗೆ ಪದೇ ಪದೇ ಕರೆ ಮಾಡಿದೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಆಗ ನನಗೆ ನಾನು ಮೋಸ ಹೋಗಿದ್ದೇನೆ ಎಂದು ಅರಿವಾಯಿತು. ಹೀಗಾಗಿ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದೆ ಎಂದು ವಂಚನೆಗೊಳಗಾದ ನಾಗೇಂದ್ರಪ್ಪ ಅವರು ತಿಳಿಸಿದರು. ವಹಿವಾಟುಗಳಿಗೆ ಬಳಸಿದ ಬ್ಯಾಂಕ್ ಖಾತೆ ಸಂಖ್ಯೆಯ ಮೂಲಕ ಕಳ್ಳರನ್ನು ಪತ್ತೆಹಚ್ಚುವುದಾಗಿ ಪೊಲೀಸರು ನನಗೆ ಭರವಸೆ ನೀಡಿದ್ದಾರೆ ಎಂದು ನಾಗೇಂದ್ರಪ್ಪ ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ