ಬೆಂಗಳೂರು: ನಿಯಮ ಪಾಲಿಸದ ಶಾಲಾ ವಾಹನಗಳನ್ನು ಸೀಜ್ ಮಾಡಿದ RTO ಅಧಿಕಾರಿಗಳು

| Updated By: ಆಯೇಷಾ ಬಾನು

Updated on: Aug 22, 2023 | 10:59 AM

ವೈಟ್​​ಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ಕುರಿತು ದೂರು ಬಂದ ಹಿನ್ನೆಲೆ ಇಂದು ಶಾಲಾ ವಾಹನಗಳನ್ನ ತಡೆದು RTO ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಅನಧಿಕೃತವಾಗಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ನಿಯಮ ಪಾಲಿಸದ ಶಾಲಾ ವಾಹನಗಳನ್ನು ಸೀಜ್ ಮಾಡಿದ RTO ಅಧಿಕಾರಿಗಳು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆ.22: ಅನಧಿಕೃತವಾಗಿ ಒಮ್ನಿ ಕಾರುಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಬೆಂಗಳೂರಿನಲ್ಲಿ RTO ಅಧಿಕಾರಿಗಳು 15ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ವೈಟ್​​ಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ಕುರಿತು ದೂರು ಬಂದ ಹಿನ್ನೆಲೆ ಇಂದು ಶಾಲಾ ವಾಹನಗಳನ್ನ ತಡೆದು RTO ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಅನಧಿಕೃತವಾಗಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಸುರಕ್ಷತೆ ಇಲ್ಲದ ವಾಹನಗಳಲ್ಲಿ ಮಕ್ಕಳನ್ನ ಕರೆದೊಯ್ಯಲು ಅವಕಾಶ ಇಲ್ಲ

ಇನ್ನು ಘಟನೆ ಸಂಬಂಧ ಆರ್​ಟಿಓ ಜಂಟಿ ಆಯುಕ್ತೆ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ ಮಕ್ಕಳ ಸುರಕ್ಷತೆ, ಸಂಚಾರ ಬಗ್ಗೆ ಕಾರ್ಯಾಚರಣೆ ಮಾಡಲಾಗ್ತಿದೆ. ಸುರಕ್ಷತೆ ಇಲ್ಲದ ವಾಹನಗಳಲ್ಲಿ ಮಕ್ಕಳನ್ನ ಕರೆದೊಯ್ಯಲು ಅವಕಾಶ ಇಲ್ಲ. ಅದಕ್ಕೆ ರೇಡ್ ಮಾಡಿ ಅನಧಿಕೃತ ವಾಹನಗಳನ್ನ ಸೀಜ್ ಮಾಡಿದ್ದೇವೆ. ಮಕ್ಕಳ ಸುರಕ್ಷತೆ ವಿಚಾರವಾಗಿ ಕೆಲ ಕ್ರಮ ಕೈಗೊಳ್ಳಬೇಕು. ದಾಖಲಾತಿ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಟ್ಯಾಕ್ಸ್ ಕಟ್ಟಿಲ್ಲ. ಶಾಲಾ ಮಕ್ಕಳನ್ನ ಪಿಕ್ ಮಾಡಲು ಹಾಗೂ ಡ್ರಾಪ್ ಮಾಡಲು ಕೆಲವು ಸೂಚನೆಗಳಿವೆ. ಅವೆಲ್ಲವನ್ನ ಉಲ್ಲಂಘನೆ ಮಾಡಲಾಗಿದೆ. ವಾಹನಕ್ಕೆ FC ಇಲ್ಲ, ಪರ್ಮಿಟ್ ಇಲ್ಲ ಆದರೂ ಇವ್ರು ಮಕ್ಕಳನ್ನ ಕರೆದೊಯ್ತಿದ್ರು. ಸಾರಿಗೇತರ ವಾಹನಗಳನ್ನು ಅನಧಿಕೃತವಾಗಿ ಬಳಸಿದ್ದಾರೆ. ಪೋಷಕರು ಕೂಡ ಈ ಬಗ್ಗೆ ಗಮನವಹಿಸಬೇಕು ಎಂದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಪೊಲೀಸರ ಕಟ್ಟುನಿಟ್ಟಿನ ಕ್ರಮ: ಅಪಘಾತ ಸಂಖ್ಯೆ ಇಳಿಮುಖ

ಕೊರೊನಾದಿಂದ ನಾವು ಪುನರ್ಜನ್ಮ ಪಡೆದಿದ್ದೇವೆ

ಮತ್ತೊಂದೆಡೆ RTO ಅಧಿಕಾರಿಗಳ ರೇಡ್ ಸಂಬಂಧ ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಸಂಘದ ಅಧ್ಯಕ್ಷ ಸೋಮಶೇಖರ್ ಕೂಡ ಮಾತನಾಡಿದ್ದು, ಮೂರು ದಿನದಿಂದ ನಾವು ಕಮಿಷನರ್ ಜೊತೆಗೆ ಮಾತಾಡ್ತಿದ್ವಿ. RTO ಅಧಿಕಾರಿಗಳು ಏಕಾಏಕಿ ಬಂದು ರೇಡ್ ಮಾಡಿದ್ದಾರೆ. ನಮಗೆ ಸಮಯ ಬೇಕು, ಪರ್ಮಿಷನ್ ಗಾಗಿ ನಾವು ಮಾತಾಡಿದ್ವಿ. ನಾಳೆ 10.30ಕ್ಕೆ ಬರೋಕೆ ಹೇಳಿದ್ರು, ಆದ್ರೆ ಇವ್ರು ಏಕಾ ಏಕಿ ಹೀಗೆ ಮಾಡಿದ್ದಾರೆ. ಎಲ್ಲೋ ಬೋರ್ಡ್ ಗೆ ನಾವು ಅರ್ಜಿ ಹಾಕಿದ್ವಿ, ಪರ್ಮಿಷನ್ ಕೊಡ್ತಿಲ್ಲ. ಕೊರೊನಾದಿಂದ ನಾವು ಪುನರ್ಜನ್ಮ ಪಡೆದಿದ್ದೇವೆ. ಡ್ರೈವರ್​ಗಳಿಗೆ ಎಷ್ಟು ಕಷ್ಟ ಇರುತ್ತೆ. ಏಕಾ ಏಕಿ ಈ ರೀತಿ ರೇಡ್ ಮಾಡಿ ವಾಹನಗಳ ವಶಕ್ಕೆ ಪಡೆದಿದ್ದಾರೆ. ಮಕ್ಕಳನ್ನ ಶಾಲೆಯಿಂದ ವಾಪಾಸ್ ಮನೆಗೆ ಬಿಡುವುದು ಹೇಗೆ? ಇಂದು ನಮ್ಮ ವಾಹನಗಳನ್ನ ಬಿಡದಿದ್ರೆ ನಾಳೆ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕ್ತೀವಿ. ಸೋಮವಾರದವರೆಗೂ ನಮಗೆ ಸಮಯ ಬೇಕು ಎಂದು ತಮ್ಮ ಕಷ್ಟಗಳನ್ನು ಹೇಳಿಕೊಂಡರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ