ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ದ್ವಿಚಕ್ರ ವಾಹನಗಳಿಗೆ ನೈಸ್​​ ರಸ್ತೆ ಶೀಘ್ರ ಟೋಲ್​​ ಮುಕ್ತ?

ಬೆಂಗಳೂರಿನ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ರದ್ದುಪಡಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ವಿಧಾನ ಪರಿಷತ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ. ಇದು ಬೆಂಗಳೂರಿನ ದ್ವಿಚಕ್ರ ವಾಹನ ಸವಾರರಿಗೆ ಶುಭ ಸುದ್ದಿಯಾಗಿದ್ದು, ಗೃಹ ಸಚಿವರ ಅಧ್ಯಕ್ಷತೆಯಲ್ಲಿ ರಚನೆಯಾದ ಉಪ ಸಮಿತಿ ವರದಿ ಸಲ್ಲಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ದ್ವಿಚಕ್ರ ವಾಹನಗಳಿಗೆ ನೈಸ್​​ ರಸ್ತೆ ಶೀಘ್ರ ಟೋಲ್​​ ಮುಕ್ತ?
ನೈಸ್​ ರಸ್ತೆ
Image Credit source: google

Updated on: Mar 12, 2026 | 10:12 AM

ಬೆಂಗಳೂರು, ಮಾರ್ಚ್​​ 12: ನಗರದ ಪ್ರಮುಖ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಆಗಿರುವ ನೈಸ್​​ ರಸ್ತೆಯು, ಸಂಚಾರ ದಟ್ಟಣೆಯನ್ನು ತಪ್ಪಿಸಲು ಮತ್ತು ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಬಹಳ ಉಪಯುಕ್ತ ಎಂದೇ ಭಾವಿಸಲಾಗಿದೆ. ಮೈಸೂರು ರಸ್ತೆಯ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿಯ PES ಕಾಲೇಜು ಬಳಿ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ರೋಡ್​​ ಶೀಘ್ರದಲ್ಲೇ ಉದ್ಘಾಟನೆಯಾಗುವ ನಿರೀಕ್ಷೆ ಇರುವ ನಡುವೆ ರಾಜ್ಯ ಸರ್ಕಾರ ಮತ್ತೊಂದು ಗುಡ್​​ ನ್ಯೂಸ್​​ ನೀಡಿದೆ. ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಂದ ಟೋಲ್ ವಸೂಲಿ ಮಾಡುವುದನ್ನು ರದ್ದುಪಡಿಸುವ ಕುರಿತು ಚಿಂತನೆ ನಡೆದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ರಾಮೋಜಿ ಗೌಡ ಅವರು ನೈಸ್ ರಸ್ತೆ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ವಿಷಯವನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ. ನೈಸ್ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತು ಅಪಘಾತಗಳು ಹೆಚ್ಚುತ್ತಿವೆ. ಜೊತೆಗೆ ರಸ್ತೆ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ರಾಮೋಜಿ ಗೌಡ ಆರೋಪಿಸಿದ್ದು, ರಾಜ್ಯ ಸರ್ಕಾರ ಮತ್ತು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ನಡುವೆ ಮಾಡಿಕೊಂಡಿರುವ ಒಪ್ಪಂದ ಅವಧಿ ಮುಕ್ತಾಯವಾಗುತ್ತಿದೆ. ಹೀಗಿದ್ದರೂ ಭೂಮಿ ನೀಡಿದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಒಪ್ಪಂದದಲ್ಲಿ ಯಾವ ಯಾವ ಷರತ್ತುಗಳನ್ನು ವಿಧಿಸಲಾಗಿತ್ತು ಮತ್ತು ಅದನ್ನು ನವೀಕರಿಸಲಾಗಿದೆಯೇ ಎಂಬುದರ ಕುರಿತು ಮಾಹಿತಿ ನೀಡಿ ಎಂದಿದ್ದರು. ಜೊತೆಗೆ ಟೋಲ್ ದರ ಹೆಚ್ಚಳಕ್ಕೆ ಕಂಪನಿಗೆ ಸರ್ಕಾರದ ಅನುಮೋದನೆ ಪಡೆದಿದೆಯೇ ಹಾಗೂ ನೈಸ್ ರಸ್ತೆಯನ್ನು ಸರ್ಕಾರದ ವ್ಯಾಪ್ತಿಗೆ ತರಲು ಸರ್ಕಾರ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವರು ಕೇಳಿದ್ದರು.

ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ; ಫ್ರೀಡಂ ಪಾರ್ಕ್​​ ಸುತ್ತಮುತ್ತ ಇಂದು ಸಂಚಾರ ಮಾರ್ಗ ಬದಲಾವಣೆ

ಇದಕ್ಕೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, ಗೃಹ ಸಚಿವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಚಿವ ಸಂಪುಟದ ಉಪ ಸಮಿತಿ ಯೋಜನೆಯ ಸ್ಥಿತಿ, ಒಪ್ಪಂದದ ಷರತ್ತುಗಳು, ಟೋಲ್ ವಸೂಲಿ ಸೇರಿದಂತೆ ವಿವಿಧ ವಿಷಯಗಳನ್ನು ಪರಿಶೀಲಿಸಲಿದೆ. ಉಪ ಸಮಿತಿ ತನ್ನ ವರದಿ ಸಲ್ಲಿಸಿದ ಬಳಿಕ ದ್ವಿಚಕ್ರ ವಾಹನಗಳಿಗೆ ಟೋಲ್ ರದ್ದುಪಡಿಸುವ ಯೋಜನೆ ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:09 am, Thu, 12 March 26

Follow Us