AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Skydeck: ಬೆಂಗಳೂರು ನೈಸ್ ರಸ್ತೆ ಬಳಿ ಅತಿ ಎತ್ತರದ ಸ್ಕೈಡೆಕ್; ಇಲ್ಲಿದೆ ಮಾಹಿತಿ

ಬೆಂಗಳೂರು ಸ್ಕೈಡೆಕ್: ಸಿಲಿಕಾನ್ ಸಿಟಿಯ ಪ್ರವಾಸಿ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು 250 ಮೀಟರ್ ಎತ್ತರದ ಬೃಹತ್ ಸ್ಕೈಡೆಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಬೆಂಗಳೂರಿನ ಎಲ್ಲ ಜನಪ್ರತಿನಿಧಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಸ್ಕೈಡೆಕ್ ಎಲ್ಲಿ ನಿರ್ಮಾಣವಾಗಲಿದೆ? ಏನದರ ವಿಶೇಷತೆ? ಮಾಹಿತಿ ಇಲ್ಲಿದೆ.

Bengaluru Skydeck: ಬೆಂಗಳೂರು ನೈಸ್ ರಸ್ತೆ ಬಳಿ ಅತಿ ಎತ್ತರದ ಸ್ಕೈಡೆಕ್; ಇಲ್ಲಿದೆ ಮಾಹಿತಿ
ಬೆಂಗಳೂರು ನೈಸ್ ರಸ್ತೆ ಬಳಿ ಅತಿ ಎತ್ತರದ ಸ್ಕೈಡೆಕ್ (ಸಾಂದರ್ಭಿಕ ಚಿತ್ರ)
Ganapathi Sharma
|

Updated on: Jul 29, 2024 | 8:16 AM

Share

ಬೆಂಗಳೂರು, ಜುಲೈ 29: ಬೆಂಗಳೂರಿನ ನೈಸ್ ರಸ್ತೆಯ ಬಳಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣದೊಂದಿಗೆ ದೇಶದ ಸಿಲಿಕಾನ್ ಸಿಟಿ ಇನ್ನಷ್ಟು ಸುಂದರವಾಗಲಿದೆ. ಸ್ಕೈಡೆಕ್‌ಗೆ ಸ್ಥಳ ನೀಡಲು ವಿರೋಧ ಪಕ್ಷದ ನಾಯಕರು ಮತ್ತು ಬಿಜೆಪಿ ಶಾಸಕರು ಒಪ್ಪಿಗೆ ನೀಡಿದ್ದಾರೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಕಟಿಸಿದ್ದಾರೆ. ವಿಧಾನಸೌಧದಲ್ಲಿ ಸರ್ವಪಕ್ಷಗಳ ಬೆಂಗಳೂರಿನ ಜನಪ್ರತಿನಿಧಿಗಳ ಸಭೆ ನಡೆಸಿದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಸ್ಕೈಡೆಕ್ ಯೋಜನೆಗೆ ಸುಮಾರು 25 ಎಕರೆ ಜಮೀನು ಬೇಕಾಗುತ್ತದೆ, ಪ್ರಸ್ತುತ ನೈಸ್ ರಸ್ತೆ ಅದನ್ನು ಹೊಂದಿದೆ ಎಂದಿದ್ದಾರೆ.

ಸ್ಕೈಡೆಕ್‌ಗೆ ಸುಮಾರು 25 ಎಕರೆ ಅಗತ್ಯವಿದೆ. ಪ್ರತಿಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಬೆಂಗಳೂರಿನ ಎಲ್ಲಾ ಚುನಾಯಿತ ಪ್ರತಿನಿಧಿಗಳು ನೈಸ್ ರಸ್ತೆಯ ಸ್ಥಳವನ್ನು ಒಪ್ಪಿಕೊಂಡಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ.

ಭೂಮಿ ಹಸ್ತಾಂತರಿಸಲು ನೈಸ್​ಗೆ ನಿರ್ದೇಶನ

ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ, ಸುಪ್ರೀಂ ಕೋರ್ಟ್‌ನ ಆದೇಶದಂತೆ ಸುಮಾರು 200 ಎಕರೆಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲು ನೈಸ್ ಆಡಳಿತಕ್ಕೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಸುಮಾರು 200 ಎಕರೆ ಜಾಗವನ್ನು ನೈಸ್ ಆಡಳಿತವು ಸರ್ಕಾರಕ್ಕೆ ವರ್ಗಾಯಿಸಬೇಕಾಗಿದೆ. ಹೀಗಾಗಿ ನೈಸ್ ರಸ್ತೆಯಲ್ಲಿ ನಿವೇಶನ ಅಂತಿಮಗೊಳಿಸಿದ್ದೇವೆ. ಅಲ್ಲಿಯೇ ಸ್ಕೈಡೆಕ್ ನಿರ್ಮಾಣವಾಗಲಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಎಲ್ಲಿ ನಿರ್ಮಾಣವಾಗಲಿದೆ ಸ್ಕೈಡೆಕ್?

ಬೈಯಪ್ಪನಹಳ್ಳಿಯಲ್ಲಿರುವ ಎನ್‌ಜಿಇಎಫ್‌ ಭೂಮಿ, ಯಶವಂತಪುರ ಬಳಿಯ ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ಮತ್ತು ಕೊಮ್ಮಘಟ್ಟದಲ್ಲಿ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೆ ಬಳಸಲಾಗಿದ್ದ ಜಾಗ ಸ್ಕೈಡೆಕ್​​ಗೆ ಪರಿಗಣನೆಯಲ್ಲಿದ್ದವು. ಆದಾಗ್ಯೂ, ಬೆಂಗಳೂರಿನ ನೈಋತ್ಯ ಪ್ರದೇಶದ ನೈಸ್ ರಸ್ತೆಯ ಬಳಿ ಇರುವ ಹೆಮ್ಮಿಗೆಪುರದಲ್ಲಿ 25 ಎಕರೆ ಜಮೀನನ್ನೇ ಸ್ಕೈಡೆಕ್​ಗೆ ಬಹುತೇಕ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಆದರೆ, ಅಲ್ಲಿಯೇ ನಿರ್ಮಾಣವಾಗಲಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿಲ್ಲ.

ಆದಾಗ್ಯೂ, ಸ್ಕೈಡೆಕ್‌ಗೆ ನಿಖರವಾದ ಸ್ಥಳವನ್ನು ನಿರ್ದಿಷ್ಟಪಡಿಸಿಲ್ಲ. ಈ ಯೋಜನೆಗಾಗಿ ಸುಮಾರು 10 ಸ್ಥಳಗಳನ್ನು ಪರಿಗಣಿಸಿದ್ದೇವೆ. ಆದರೆ ಸ್ಕೈಡೆಕ್‌ನ ಎತ್ತರದಿಂದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಬಳಿಯೂ ಚರ್ಚಿಸಬೇಕಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ನೈಸ್ ರಸ್ತೆ ಬಳಿಯೇ ಯಾಕೆ ಸ್ಕೈಡೆಕ್?

ಮೈಸೂರು ಮತ್ತು ಕೊಡಗಿಗೆ ಹೋಗುವ ಜನರಿಗೆ ಇದು ಸುಲಭವಾಗಿ ತಲುಪಬಲ್ಲ ತಾಣವಾಗಿದೆ. ಅದೇ ರೀತಿ ಇತರ ಪ್ರದೇಶಗಳಿಗೆ ತೆರಳುವವರೂ ನೈಸ್ ರಸ್ತೆಯನ್ನು ಅವಲಂಬಿಸುತ್ತಾರೆ. ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವಾದ ನಂತರ ನೈಸ್ ರಸ್ತೆ ಪ್ರವೇಶವನ್ನು ಸುಧಾರಿಸಲು ಯೋಜಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

ಪ್ರಮುಖ ಪ್ರವಾಸಿ ಆಕರ್ಷಣೆಯಾಗಲಿದೆ ಸ್ಕೈಡೆಕ್

850 ಕೋಟಿ ರೂ.ಗಳ ಅಂದಾಜು ಮೊತ್ತದ ಸ್ಕೈಡೆಕ್ ಯೋಜನೆಯು ಬೆಂಗಳೂರಿನ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಲಿದೆ. ಇದು ಸ್ಕೈ ಲಾಬಿ, ಸ್ಪೆಕ್ಟೇಕ್ಯುಲರ್ ಸಿಟಿ ಪನೋರಮಾಗಳು, ಥಿಯೇಟರ್, ಡಿಸ್​​ಪ್ಲೇ ಹಾಲ್, ವಿಶೇಷ ವಿಐಪಿ ವಿಭಾಗ ಮತ್ತು ಶಾಪಿಂಗ್ ಮಾರ್ಗಗಳು ಸೇರಿದಂತೆ ಹಲವಾರು ಘಟಕಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಶುಲ್ಕ ವಿವರ ಘೋಷಿಸದೆ ಖಾಸಗಿ ಶಾಲೆಗಳ ಉದ್ಧಟತನ: ಶಿಕ್ಷಣ ಇಲಾಖೆಯ ಆದೇಶಕ್ಕೂ ಡೋಂಟ್ ಕೇರ್

ಸದ್ಯ ವಿಧಾನಸೌಧ ಮತ್ತು ನೆಹರು ತಾರಾಲಯ ಬೆಂಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇವುಗಳ ಹೊರತಾಗಿ ಪ್ರವಾಸಿ ಆಕರ್ಷಣೆಯ ಕೊರತೆ ನಗರಕ್ಕಿದೆ. ಅದನ್ನು ಸ್ಕೈಡೆಕ್ ನೀಗಲಿದೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ