ಶುಲ್ಕ ವಿವರ ಘೋಷಿಸದೆ ಖಾಸಗಿ ಶಾಲೆಗಳ ಉದ್ಧಟತನ: ಶಿಕ್ಷಣ ಇಲಾಖೆಯ ಆದೇಶಕ್ಕೂ ಡೋಂಟ್ ಕೇರ್

ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜೊತೆ ಚಲ್ಲಾಟವಾಡುತ್ತಿವೆ. ಪೋಷಕರ ನೂರಾರು ಕನಸುಗಳನ್ನು ನುಚ್ಚು ನೂರು ಮಾಡುತ್ತಿವೆ. ಮನಸಿಗೆ ಬಂದಹಾಗೆ ಶುಲ್ಕ ಏರಿಕೆ ಮಾಡಿಕೊಂಡು, ಶುಲ್ಕ ಪಟ್ಟಿ ನೀಡುವಂತೆ ಸರ್ಕಾರ ಹೇಳಿದರೂ ಕ್ಯಾರೇ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಖಾಸಗಿ ಶಾಲೆಗಳ ಒಕ್ಕೂಟ, ಪೋಷಕರು ಹೇಳುವುದೇನು ಎಂಬ ಮಾಹಿತಿ ಇಲ್ಲಿದೆ.

ಶುಲ್ಕ ವಿವರ ಘೋಷಿಸದೆ ಖಾಸಗಿ ಶಾಲೆಗಳ ಉದ್ಧಟತನ: ಶಿಕ್ಷಣ ಇಲಾಖೆಯ ಆದೇಶಕ್ಕೂ ಡೋಂಟ್ ಕೇರ್
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Jul 29, 2024 | 7:08 AM

ಬೆಂಗಳೂರು, ಜುಲೈ 29: ಪ್ರತಿ ವರ್ಷವೂ ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಶುಲ್ಕ ಏರಿಕೆ ಮಾಡಿ ಬರೆ ಎಳೆಯಲು ಮುಂದಾಗುತ್ತಿವೆ. ಹೀಗಾಗಿ ಕಂಗಾಲಾಗಿರುವ ಪೋಷಕರು ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಕಾಯ್ದೆ ಜಾರಿ ಮಾಡುವಂತೆ ಒತ್ತಾಯ ಶುರು ಮಾಡಿದ್ದರು. ನಂತರ ಎಚ್ಚೆತ್ತ ಶಾಲಾ ಶಿಕ್ಷಣ ಇಲಾಖೆ, ಶುಲ್ಕ ವಿವರವನ್ನು ಶಾಲೆಗಳಲ್ಲಿ ಘೋಷಣೆ ಮಾಡಬೇಕು. ಶಾಲೆಗಳ ವೆಬ್​​​ಸೈಟ್​​​ನಲ್ಲಿ ಪ್ರಕಟ ಮಾಡಬೇಕು ಎಂದು ಸೂಚಿಸಿತ್ತು. ಆದರೆ ಖಾಸಗಿ ಶಾಲೆಗಳು ಇದನ್ನು ಕ್ಯಾರೇ ಮಾಡುತ್ತಿಲ್ಲ. ಶುಲ್ಕ ಮಾಹಿತಿ ಪ್ರಕಟಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರದ ಸುತ್ತೋಲೆಗೆ ಕವಡೆ ಕಾಸಿನ ಬೆಲೆ ನೀಡಿದ ಖಾಸಗಿ ಶಾಲೆಗಳು ವಿರುದ್ಧ ಪೋಷಕರು ಗರಂ ಆಗಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ಆದೇಶದಲ್ಲೇನಿದೆ?

ಶುಲ್ಕ ವಿವರವನ್ನು ಶಾಲೆಗಳ ವೆಬ್​​​ಸೈಟ್​​​ನಲ್ಲಿ ಪ್ರಕಟ ಮಾಡಬೇಕು. ಯಾವ ಶಾಲೆಗಳು ಶುಲ್ಕದ ವಿವರವನ್ನು SATS PORT, ವೆಬ್​​ಸೈಟ್ ಹಾಗೂ ಶಾಲೆಯಲ್ಲಿ ಅಳವಡಿಸುವುದಿಲ್ಲವೋ ಆ ಶಾಲೆಗಳ ಆರ್​​ಆರ್ ನವೀಕರಣ ಮಾಡದಂತೆ ರಾಜ್ಯದ ಎಲ್ಲ ಬಿಇಒ ಹಾಗೂ ಡಿಡಿಪಿಐಗಳಿಗೆ ಶಾಲಾ ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡಿದೆ. ಇಷ್ಟಾದರೂ ಯಾವುದೇ ಖಾಸಗಿ ಶಾಲೆಗಳು ಮಾಹಿತಿ ಪ್ರಕಟಿಸುತ್ತಿಲ್ಲ.

ಇದುವರೆಗೂ ರಾಜ್ಯದಲ್ಲಿ ಶೇ 5ರಷ್ಟು ಖಾಸಗಿ ಶಾಲೆಗಳು ಮಾತ್ರ ಶುಲ್ಕದ ಮಾಹಿತಿ ಪ್ರಕಟಿಸಿವೆ. ಹೀಗಾಗಿ ಇತಂಹ ಶಾಲೆಗಳ ಆರ್​ಆರ್​​ ನವೀಕರಣ ಮಾಡದಂತೆ ರಾಜ್ಯ ಪೋಷಕರ ಸಮನ್ವಯ ಸಮಿತಿ ಒತ್ತಾಯಿಸಿದೆ ಎಂದು ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ತಿಳಿಸಿದ್ದಾರೆ.

ಪೋಷಕರು ಶುಲ್ಕ ವಿವರ ನೀಡದ ಶಾಲೆಗಳ ಮಾನ್ಯತೆ ರದ್ದತಿಗೆ ಒತ್ತಾಯ ಮಾಡಿದ್ದು, SATS PORT ನಲ್ಲಿ ಮಾಹಿತಿ ನೀಡದ ಶಾಲೆಗಳ ಆರ್​ಆರ್ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ಶಾಲಾ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಇನ್ನು ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಮಾತ್ರ ಶಾಲಾ ಶಿಕ್ಷಣ ಇಲಾಖೆಯ ಆದೇಶ ಸ್ವಾಗತರ್ಹ. ನಾವು ಶುಲ್ಕದ ವಿವರವನ್ನ ಘೋಷಣೆ ಮಾಡಿ ವೆಬ್​​ಸೈಟ್​​ನಲ್ಲಿ ಪ್ರಕಟಿಸುತ್ತೇವೆ ಎಂದಿದೆ. ಈ ಬಗ್ಗೆ ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶೀಘ್ರವೇ ಸೀಟ್ ಮ್ಯಾಟ್ರಿಕ್ಸ್ ಪ್ರಕಟ: ಸಚಿವ ಎಂ.ಸಿ.ಸುಧಾಕರ್

ಒಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಯಾವುದನ್ನೂ ಲೆಕ್ಕಿಸದೇ ಪ್ರತಿ ವರ್ಷ ಶುಲ್ಕ ಏರಿಕೆ ಮಾಡಿಕೊಂಡು ವೆಬ್​ಸೈಟ್ ನಲ್ಲಿಯೂಮಾಹಿತಿ ನೀಡಿದರೆ ಪೋಷಕರ ಅಸಮಾಧಾನಕ್ಕೆ ಕಾರಣವಾಗಿವೆ. ಇನ್ನಾದರೂ ಶಾಲಾ ಶಿಕ್ಷಣ ಇಲಾಖೆ ಈ ಬಗ್ಗೆ ಕೊಂಚ ಗಮನ ಹರಿಸಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ