
ಬೆಂಗಳೂರು, ನವೆಂಬರ್ 12: ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಲಿದ್ದು, ಈ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನ ಪಿಂಕ್ ಲೈನ್ ಯೋಜನೆಗೆ ಯುಪಿಎ ಸರ್ಕಾರದ ಅವಧಿಯಲ್ಲೇ ಅಡಿಪಾಯ ಹಾಕಲಾಗಿತ್ತು ಎಂದು ನೆನಪಿಸಿದ್ದಾರೆ. ಜತೆಗೆ ಬೆಂಗಳೂರು ಮೆಟ್ರೋ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ಕೊಡುಗೆಗೂ ಸೂಕ್ತ ಗೌರವ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ ಪಿಂಕ್ ಲೈನ್ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ವೇಗ ನೀಡಲಿದೆ. ವಿಶೇಷವಾಗಿ ಬೆಂಗಳೂರು ದಕ್ಷಿಣ ಭಾಗದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಮಾರ್ಗ ಮಹತ್ವದ ಪಾತ್ರ ವಹಿಸಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಯೋಜನೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿರುವ ಅವರು, ಇದರ ಹಿಂದಿನ ಇತಿಹಾಸವನ್ನೂ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
2013-14ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತಾವು ಸಾರಿಗೆ ಸಚಿವ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದೆ ಎಂದು ತಿಳಿಸಿದ್ದಾರೆ. 2014ರ ಜನವರಿ 30ರಂದು ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವ ಸಂಪುಟವು ನಮ್ಮ ಮೆಟ್ರೋದ ಎರಡನೇ ಹಂತಕ್ಕೆ ಅನುಮೋದನೆ ನೀಡಿತ್ತು. ಆಗ ಗೊಟ್ಟಿಗೆರೆ-ನಾಗವಾರ ಮಾರ್ಗವೂ ಯೋಜನೆಯ ಭಾಗವಾಗಿತ್ತು. ಇದೇ ಮಾರ್ಗ ಇದೀಗ ಪಿಂಕ್ ಲೈನ್ ಆಗಿ ಅಭಿವೃದ್ಧಿಯಾಗಿದೆ ಎಂದು ವಿವರಿಸಿದ್ದಾರೆ.
ಇನ್ನು ಪಿಂಕ್ ಲೈನ್ ಯೋಜನೆಯ ಮೂಲ ಅಂದಾಜು ವೆಚ್ಚ 8,730 ಕೋಟಿ ರೂ. ಆಗಿದ್ದರೆ, ಪರಿಷ್ಕೃತ ಅಂದಾಜಿನ ಪ್ರಕಾರ 17,346 ಕೋಟಿ ರೂ.ಗೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸುಮಾರು 12,000 ಕೋಟಿ ರೂ. ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋದ ಮೊದಲ, ಎರಡನೇ, 2A, 2B ಹಾಗೂ ಮೂರನೇ ಹಂತಗಳ ಒಟ್ಟು ಯೋಜನಾ ವೆಚ್ಚ 77,891 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕರ್ನಾಟಕ ಸರ್ಕಾರದ ಕೊಡುಗೆ 65,291 ಕೋಟಿ ರೂ. (ಶೇ. 83.8) ಹಾಗೂ ಕೇಂದ್ರ ಸರ್ಕಾರದ ಪಾಲು 12,600 ಕೋಟಿ ರೂ. (ಶೇ. 16.2) ಎಂದು ಉಲ್ಲೇಖಿಸಿದ್ದಾರೆ.
ಮೆಟ್ರೋ ಅಭಿವೃದ್ಧಿಯ ಹಿಂದೆ ಹಲವು ಸರ್ಕಾರಗಳ ನಿರಂತರ ಪ್ರಯತ್ನ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ಸಹಕಾರವಿದೆ. ಇತಿಹಾಸ ಇದನ್ನು ಮರೆಯಬಾರದು. ನಮ್ಮ ಮೆಟ್ರೋ ಕನ್ನಡಿಗರ ತೆರಿಗೆ ಹಣ ಮತ್ತು ಕರ್ನಾಟಕದ ಆರ್ಥಿಕ ಬದ್ಧತೆಯ ಪ್ರತೀಕ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ, ಕರ್ನಾಟಕ ಬೆಳೆದರೆ ದೇಶ ಬೆಳೆಯುತ್ತದೆ ಎಂಬ ಸಂದೇಶದೊಂದಿಗೆ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ