
ಬೆಂಗಳೂರು, ಅಕ್ಟೋಬರ್ 21: ಮೈಸೂರಿನಲ್ಲಿ ನಾಡಹಬ್ಬ ದಸರಾ ವೈಭವ ಮನೆಮಾಡಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ನಿನ್ನೆ (ಅ.20) ಮಧ್ಯಾಹ್ನ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದೆ ಎಂದು ಊಹಾ ಪೋಹಗಳು ಹರಿದಾಡುತ್ತಿವೆ. ಈ ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಎಚ್ಚೆತ್ತಿರುವ ಪೊಲೀಸರು, ಕಟ್ಟಡದ ಮಾಲೀಕರು ಹಾಗೂ ಗುತ್ತಿಗೆದಾರನ (ಕಂಟ್ರಾಕ್ಟರ್) ವಿರುದ್ಧ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಐಇಡಿ (IED) ಸ್ಫೋಟಕಕ್ಕೆ ಸಂಬಂಧಿಸಿದ ಕೆಲವು ಶಂಕಿತ ವಸ್ತುಗಳು ಪತ್ತೆಯಾಗಿರುವುದು ಭಾರೀ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಪುಲಕೇಶಿನಗರದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬ್ಯಾಗ್ ಒಂದನ್ನು ಇರಿಸಲಾಗಿತ್ತು. ಅದರೊಳಗಿನ ಬ್ಯಾಟರಿ ಮಾದರಿಯ ವಸ್ತುವೊಂದು ಏಕಾಏಕಿ ಸ್ಫೋಟಗೊಂಡಿದೆ. ಇದೇ ವೇಳೆ ಕಟ್ಟಡದೊಳಗಿದ್ದ ಸೂರಜ್ ಹಾಗೂ ಅಲ್ಲಾವುದ್ದೀನ್ ಎಂಬ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ನಗರದ ಆಸ್ಪತ್ರೆಗೆ ಸೇರಿಸಲಾಗಿದೆ.ಎಂದು ಹೇಳಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು, “ಸದ್ಯ ಪ್ರಕರಣವು ತನಿಖಾ ಹಂತದಲ್ಲಿದ್ದು, ಮಧ್ಯಾಹ್ನದ ಬಳಿಕ ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಲಿದೆ. ಸಾರ್ವಜನಿಕರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ” ಎಂದು ಮನವಿ ಮಾಡಿದ್ದಾರೆ. ರಾಸಾಯನಿಕ ಪ್ರತಿಕ್ರಿಯೆಯಿಂದ ಬ್ಲಾಸ್ಟ್ ಆಗಿದೆಯೋ ಅಥವಾ ನಿಜಕ್ಕೂ ಐಇಡಿ ಸ್ಫೋಟವೇ ಎಂಬುದು ಎಫ್‌ಎಸ್‌ಎಲ್ (FSL) ವರದಿ ಬಂದ ಬಳಿಕವಷ್ಟೇ ಅಧಿಕೃತವಾಗಿ ತಿಳಿದುಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸರ ಸಮಗ್ರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
ಸ್ಥಳದಲ್ಲಿ ದೊರೆತ ಎಲ್ಲಾ ಮಾದರಿಗಳನ್ನು (ಸ್ಯಾಂಪಲ್ಸ್) ಪೊಲೀಸರು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಫೊರೆನ್ಸಿಕ್) ಕಳುಹಿಸಿಕೊಟ್ಟಿದ್ದಾರೆ. ಎರಡು ದಿನಗಳ ಹಿಂದೆಯೇ ಈ ಐಇಡಿ ಅಥವಾ ಸ್ಫೋಟಕ ಸಾಮಾಗ್ರಿಗಳನ್ನು ಇಲ್ಲಿ ತಂದು ಇಡಲಾಗಿತ್ತೇ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯಾರು ಮತ್ತು ಯಾವ ಉದ್ದೇಶಕ್ಕಾಗಿ ಇದನ್ನು ನಿರ್ಮಾಣ ಹಂತದ ಕಟ್ಟಡದಲ್ಲಿ ತಂದಿಟ್ಟಿದ್ದರು ಎಂಬ ಗಂಭೀರ ಕೋನದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಬ್ಯಾಗ್ ಇಟ್ಟಿದ್ದು ಯಾರು? ಅದಲ್ಲಿದ್ದ ಬ್ಯಾಟರಿ ಮಾದರಿಯ ವಸ್ತು ಸ್ಫೋಟಗೊಂಡಿದ್ದಾದರೂ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿದ್ದು, ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಉತ್ಸವಕ್ಕೆ ಅಡ್ಡಿಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ