ಮಳೆ ನೀರು ನಿಂತು ಬೆಂಗಳೂರಿನ ಹಲವೆಡೆ ಸಂಚಾರಕ್ಕೆ ಅಡ್ಡಿ: ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಕೆ.ಆರ್.ಪುರಂ, ಶಿವಾನಂದ ಸರ್ಕಲ್, ಓಕಳಿಪುರಂ ಸೇರಿದಂತೆ ಹಲವು ಕಡೆ ವಾಹನ ಸಂಚಾರ ನಿಧಾನವಾಗಿದೆ. ಮಳೆ ನೀರು ನಿಂತಿರುವ ಪ್ರಮುಖ ಸ್ಥಳಗಳ ಕುರಿತು ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿರುವ ಸಂಚಾರ ಸಲಹೆ ಇಲ್ಲಿದೆ.

ಮಳೆ ನೀರು ನಿಂತು ಬೆಂಗಳೂರಿನ ಹಲವೆಡೆ ಸಂಚಾರಕ್ಕೆ ಅಡ್ಡಿ: ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಓಕಳಿಪುರಂ ಬಳಿ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು
Image Credit source: Bangalore Traffic Police

Updated on: Oct 06, 2026 | 7:47 AM

ಮುಖ್ಯಾಂಶಗಳು

  • ಬೆಂಗಳೂರಿನ ಹಲವೆಡೆ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ
  • ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ಸಂಚಾರ ನಿಧಾನ
  • ಇಂದೂ ಸಹ ಹಲವೆಡೆ ಟ್ರಾಫಿಕ್ ಜಾಮ್ ಸಾಧ್ಯತೆ

ಬೆಂಗಳೂರು, ಅಕ್ಟೋಬರ್ 6: ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನದಿಂದ ಮಳೆ ಅಬ್ಬರ ಜೋರಾಗಿದ್ದು ತಡರಾತ್ರಿ ವರೆಗೂ ಮಳೆ ಸುರಿದಿದೆ. ಪರಿಣಾಮವಾಗಿ ಹಲವೆಡೆ ರಸ್ತೆಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಮಧ್ಯಾಹ್ನದಿಂದ ಆರಂಭವಾದ ಮಳೆ ಮಧ್ಯರಾತ್ರಿವರೆಗೂ ಬಿಟ್ಟುಬಿಟ್ಟು ಸುರಿದಿದೆ. ರಾತ್ರಿ 9.30ರ ಬಳಿಕ ಸುಮಾರು ಒಂದು ಗಂಟೆ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ಭಾರಿ ಮಳೆಯಿಂದಾಗಿ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು, ತಗ್ಗು ಪ್ರದೇಶಗಳು ಹಾಗೂ ಅಂಡರ್‌ಪಾಸ್‌ಗಳು ಜಲಾವೃತವಾಗಿವೆ. ಕೆ.ಆರ್.ಪುರಂ ಅಂಡರ್‌ಪಾಸ್‌ನಲ್ಲಿ ಸೊಂಟಮಟ್ಟದವರೆಗೆ ನೀರು ನಿಂತು ವಾಹನ ಸವಾರರು ಪರದಾಡಿದರು. ಹೆಣ್ಣೂರು ರಸ್ತೆಯಲ್ಲೂ ಭಾರಿ ಪ್ರಮಾಣದಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.

ಮಾರುಕಟ್ಟೆಯಿಂದ ಮನೆಗೆ ಮರಳಲು ಪರದಾಡಿದ ಜನ

ಹೆಬ್ಬಾಳ ಬಳಿ ರಸ್ತೆಯಲ್ಲಿ ನಿಂತಿದ್ದ ನೀರು ಚರಂಡಿಗೆ ಹರಿದುಹೋಗುವಂತೆ ಮಾಡಲು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಸ್ವತಃ ಕಸಕಡ್ಡಿಗಳನ್ನು ತೆರವುಗೊಳಿಸಿದರು. ಕೆ.ಆರ್. ಮಾರ್ಕೆಟ್‌ನಲ್ಲೂ ಭಾರಿ ಮಳೆಯಿಂದಾಗಿ ವ್ಯಾಪಾರಿಗಳು ಹಾಗೂ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ತೊಂದರೆ ಅನುಭವಿಸಿದರು.

ಶಿವಾನಂದ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮೊಣಕಾಲುದ್ದ ನೀರು ನಿಂತಿದ್ದರೆ, ಓಕಳಿಪುರಂ ಅಂಡರ್‌ಪಾಸ್‌ನಲ್ಲೂ ನೀರು ನಿಂತು ವಾಹನ ಸವಾರರು ಪರದಾಡಿದರು. ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಸಂಚಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಎಲ್ಲೆಲ್ಲಿ ನಿಧಾನಗತಿಯ ಸಂಚಾರ?

ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿರುವ ಸಂಚಾರ ಸಲಹೆಯಂತೆ, ಎನ್‌ಜಿವಿ ಜಂಕ್ಷನ್ ಬಳಿ ಮಳೆ ನೀರು ನಿಂತಿರುವುದರಿಂದ ಸೋನಿ ವರ್ಲ್ಡ್ ಕಡೆಗೆ ನಿಧಾನಗತಿಯ ಸಂಚಾರವಿದೆ. ವೆಂಕಟಾಲ ಮೇಲ್ಸೇತುವೆ ಬಳಿ ಮಳೆ ನೀರು ನಿಂತಿರುವುದರಿಂದ ನಗರದ ಕಡೆಗೆ ಸಂಚಾರ ನಿಧಾನವಾಗಿದೆ.

ಕೋಗಿಲು ಮೇಲ್ಸೇತುವೆ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಮತ್ತು ಮಳೆ ನೀರಿನ ಪರಿಣಾಮ ನಗರದ ಕಡೆಗೆ ನಿಧಾನಗತಿಯ ಸಂಚಾರವಿದೆ. ವಡ್ಡರಹಳ್ಳಿ ಬಳಿ ಮಳೆ ನೀರು ನಿಂತಿರುವುದರಿಂದ ಗೆದ್ದಲಹಳ್ಳಿ ಕಡೆಗೆ ಸಂಚಾರ ನಿಧಾನವಾಗಿದೆ. ಓಕಳಿಪುರಂ ಬಳಿ ನೀರು ನಿಂತಿರುವುದರಿಂದ ಲುಲು ಮಾಲ್ ಕಡೆಗೆ ವಾಹನ ಸಂಚಾರ ನಿಧಾನವಾಗಿದೆ ಎಂದು ಸಂಚಾರ ಪೊಲೀಸರು ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ


ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ಕಾರ್ತಿಕ್‌ನಗರದಿಂದ ಮಹದೇವಪುರ ಕಡೆಗೆ, 17ನೇ ಮುಖ್ಯರಸ್ತೆಯಿಂದ ದೂಪನಹಳ್ಳಿ ಕಡೆಗೆ, ಓಲ್ಡ್ ಉದಯ ಟಿವಿಯಿಂದ ಜಯಮಹಲ್ ಕಡೆಗೆ, ಪಿಜಿಹಳ್ಳಿ ಬಸ್ ನಿಲ್ದಾಣದಿಂದ ಅರಮನೆ ಕ್ರಾಸ್ ಕಡೆಗೆ, ಸಿಎಲ್ ಕ್ರಾಸ್ ಕಂಟೋನ್ಮೆಂಟ್‌ನಿಂದ ಪೂರ್ವ ರಸ್ತೆ ಕಡೆಗೆ ಹಾಗೂ ಸಿಬಿಐ ಜಂಕ್ಷನ್ ಫ್ಲೈಓವರ್‌ನಲ್ಲಿ ನಿಧಾನಗತಿಯ ಸಂಚಾರವಿದೆ.

ಅದೇ ರೀತಿ ಸೆಲಂ ಸೇತುವೆಯಿಂದ ಕಾರ್ತಿಕ್ ನಗರ ಕಡೆಗೆ, ಆಶೀರ್ವಾದಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್ ಕಡೆಗೆ, ಹೆಬ್ಬಾಳ ಫ್ಲೈಓವರ್ ಡೌನ್‌ರಾಂಪ್‌ನಿಂದ ವಿಮಾನ ನಿಲ್ದಾಣದ ಕಡೆಗೆ, ರೇನ್‌ಬೋ ಸರ್ವಿಸ್ ರಸ್ತೆಯಿಂದ ಮಹದೇವಪುರ ಕಡೆಗೆ, ಕಸ್ತೂರಿ ನಗರ ಡೌನ್‌ರಾಂಪ್‌ನಿಂದ ಹೆಬ್ಬಾಳ ಕಡೆಗೆ ಹಾಗೂ ವಿಂಡ್ಸರ್ ಮ್ಯಾನರ್ ಸೇತುವೆಯಿಂದ ಹೈಗ್ರೌಂಡ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ಮುನ್ಸೂಚನೆ: ಕರಾವಳಿ, ಮಲೆನಾಡಿನಲ್ಲಿ ಮಳೆ, 3 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಮಳೆ ನೀರು ನಿಂತಿರುವ ಸ್ಥಳಗಳಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಹಾಗೂ ಸೂಚನೆಗಳನ್ನು ಪಾಲಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us