ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿ ಆಗಿದೆ. ಎಂ.ಎಸ್. ಪಾಳ್ಯದ ಮುನೇಶ್ವರ ಲೇಔಟ್‌ನಲ್ಲಿ ರಸ್ತೆ ಗುಂಡಿಗೆ ಬಿದ್ದು ಅಪಘಾತ ಸಂಭವಿಸಿದೆ. ಜಲಮಂಡಳಿ ಅಗೆದಿದ್ದ ರಸ್ತೆಗುಂಡಿಗೆ ಬಿದ್ದು ಅಶ್ವಿನ್ ಎಂಬವರಿಗೆ ಗಾಯವಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಶ್ವಿನ್ (27) ಸಾವನ್ನಪ್ಪಿದ್ದಾರೆ. ತಗ್ಗು ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಗುಂಡಿಗೆ ಬಿದ್ದು, ಅಪಘಾತ ಸಂಭವಿಸಿ ಬೈಕ್ ಸವಾರ ಅಶ್ವಿನ್ ಮೃತಪಟ್ಟ ಜಾಗದಲ್ಲಿ ಅಶ್ವಿನ್ ಸ್ನೇಹಿತರು ಜಮಾಯಿಸಿದ್ದಾರೆ. ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಅಂತ ಆಕ್ರೋಶ ಕೇಳಿಬಂದಿದೆ.
ನಿನ್ನೆ (ಮಾರ್ಚ್ 13) ರಾತ್ರಿ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಅಶ್ವಿನ್ ಸಾವನ್ನಪ್ಪಿದ್ದಾರೆ. ಅಶ್ವಿನ್, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ತಾಯಿಗೆ ಒಬ್ಬನೇ ಮಗ ಅಶ್ವಿನ್. ಮೂಲತಃ ಹಾವೇರಿಯವರು ಎಂದು ತಿಳಿದುಬಂದಿದೆ.
ಅಲ್ಲದೆ, ಅಪಘಾತ ಸಂಭವಿಸಿ ರಕ್ತದ ಮಡುವಿನಲ್ಲಿ ಬಿದ್ದು, ಒದ್ದಾಡ್ತಿದ್ದರೂ ಆಂಬ್ಯೂಲೆನ್ಸ್ ಸ್ಥಳಕ್ಕೆ ಬಂದಿಲ್ಲ ಎಂದು ಆರೋಪ ಕೇಳಿಬಂದಿದೆ. ಒಂದು ಘಂಟೆಯಿಂದ ಆಂಬ್ಯೂಲೆನ್ಸ್ಗೆ ಕಾಲ್ ಮಾಡಿದ್ರೂ ಆಂಬ್ಯೂಲೆನ್ಸ್ ಸ್ಥಳಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ನಂತರ ಸ್ಥಳೀಯರೇ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿದ್ದಾರೆ ಎಂದು ತಿಳಿದುಬಂದಿದೆ.
ಇತರ ಅಪಘಾತ ಸುದ್ದಿಗಳು
ತುಮಕೂರು: ಪಾವಗಡ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡೀಸೆಲ್ ತುಂಬಿದ್ದ ಟ್ಯಾಂಕರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಡೀಸಲ್ ರಸ್ತೆ ಪಾಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ ಅನಾಹುತ ಸಂಭವಿಸದಂತೆ ಅಗ್ನಿಶಾಮಕ ಸಿಬ್ಬಂದಿ ಡೀಸೆಲ್ ಮೇಲೆ ಮಣ್ಣು ಹಾಕಿದ್ದಾರೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಪಾವಗಡ ತಾಲೂಕಿನ ಪೋತಗಾನಹಳ್ಳಿಯಲ್ಲಿ ಮರಳುದಿಬ್ಬ ಕುಸಿದುಬಿದ್ದು ಮಂಜುನಾಥ್ (35) ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಮನೆ ನಿರ್ಮಾಣಕ್ಕೆ ಮರಳು ತೆಗೆಯುತ್ತಿದ್ದಾಗ ಘಟನೆ ನಡೆದಿದೆ. ವೈ.ಎನ್. ಹೊಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿಜಯಪುರ: ಇಲ್ಲಿನ ಸಿಂದಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಲಾರಿ, ಬೈಕ್ ಮಧ್ಯೆ ಡಿಕ್ಕಿ ಆಗಿದ್ದು, ಸವಾರ ಅಂಬರೀಶ್ ಮೋರೆ (18) ಸಾವನ್ನಪ್ಪಿದ್ದಾರೆ. ಲಾರಿ, ಚಾಲಕನನ್ನು ಸಿಂದಗಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ: ಹಿರಿಯೂರು ತಾಲೂಕಿನ ಗೊರಲಡಕು ಗ್ರಾಮದ ಬಳಿ ಲಾರಿಗೆ, ಟಿಟಿ ಡಿಕ್ಕಿ ಆಗಿ ಒಬ್ಬ ದುರ್ಮರಣವನ್ನಪ್ಪಿದ ಘಟನೆ ನಡೆದಿದೆ. ಟಿಟಿ ವಾಹನದಲ್ಲಿದ್ದ ಆರಿಕ್ಯದಾಸ್ (25) ಸಾವನ್ನಪ್ಪಿದ್ದಾರೆ. 11 ಜನ ಗಾಯಾಳುಗಳಿಗೆ ಹಿರಿಯೂರು ತಾಲೂಕು ಆಸ್ಪತ್ರೆ, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಲಬುರಗಿ: ಇಲ್ಲಿನ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಶೀಲವಂತಿ ಸಾಲಿ (18) ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಮಾದನಹಿಪ್ಪರಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ತೆರಳುವ ವೇಳೆ ಕಾರು- ಬೈಕ್ ನಡುವೆ ಅಪಘಾತ; ದಂಪತಿ ದುರ್ಮರಣ
ಇದನ್ನೂ ಓದಿ: ತುಮಕೂರಿನಲ್ಲಿ ತಾಯಿ ಎದುರೇ 17 ವರ್ಷದ ಮಗಳ ಅಪಹರಣ! ಬಾಗಿಲು ಮುರಿದು ಮನೆಗೆ ನುಗ್ಗಿ ಬಾಲಕಿ ಕಿಡ್ನ್ಯಾಪ್
Published On - 9:41 am, Mon, 14 March 22