ಬೆಂಗಳೂರು, ಡಿಸೆಂಬರ್ 09: ಬೆಂಗಳೂರಿನ (Bengaluru) ರಸ್ತೆಗಳಲ್ಲಿ ಸದಾ ಒಂದಿಲ್ಲೊಂದು ಕಿರಿಕಿರಿ ವಾಹನ ಸವಾರರನ್ನು ಕಂಗಾಲಾಗಿಸುತ್ತೆ. ಪಣತ್ತೂರು ಮುಖ್ಯರಸ್ತೆ ಇದೀಗ ವಾಹನ ಸವಾರರಿಗೆ ನಿತ್ಯ ನರಕ ದರ್ಶನ ಮಾಡಿಸ್ತಿದ್ದು, ಅವೈಜ್ಞಾನಿಕ ಚರಂಡಿ ಕಾಮಗಾರಿ ಸವಾರರ ಜೀವಕ್ಕೆ ಕಂಟಕ ತಂದಿಡುತ್ತಿದೆ. ಹಲವು ದಿನಗಳಿಂದ ಕಿತ್ತೋಗಿದ್ದ ರಸ್ತೆಗೆ ಇತ್ತೀಚೆಗಷ್ಟೇ ವೈಟ್ ಟಾಪಿಂಗ್ ಮಾಡಲಾಗಿತ್ತು. ಆದರೆ, ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟಿರುವುದು ವಾಹನ ಸವಾರರ ಜೀವಕ್ಕೆ ಕಂಟಕವಾಗಿವೆ. ಆಕ್ಸಿಡೆಂಟ್ ಸ್ಪಾಟ್ ಆಗಿ ಬದಲಾಗಿಬಿಟ್ಟಿದೆ.
ಮೊದಲೇ ಕಿರಿದಾಗಿರುವ ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ, ಅವೈಜ್ಞಾನಿಕ ಚರಂಡಿಯಿಂದ ಮತ್ತಷ್ಟು ಆಪತ್ತು ಎದುರಾಗಿದೆ. ಒಂದೆಡೆ ಟ್ರಾಫಿಕ್ ಜಾಮ್, ಮತ್ತೊಂದೆಡೆ ಅವೈಜ್ಞಾನಿಕ ಚರಂಡಿ, ಇನ್ನೂ ಮುಂದೆ ಹೋದರೆ ಅದೇ ಕಿತ್ತೋದ ರಸ್ತೆಯ ಮಧ್ಯೆ ಸಿಲುಕಿ ಜನರು ಕಂಗಾಲಾಗಿಬಿಟ್ಟಿದ್ದಾರೆ. ರಸ್ತೆ ಬದಿಯಿರುವ ಚರಂಡಿಗೆ ದಿನ ಒಂದಿಲ್ಲೊಂದು ಕಾರಿನ ಚಕ್ರ ಸಿಲುಕಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುತ್ತಿದ್ದು, ಜನರು ಬೇಸತ್ತು ಹೋಗಿದ್ದಾರೆ.
ಇದನ್ನೂ ಓದಿ: ಪಾಲಿಕೆ ನಿರ್ಲಕ್ಷ್ಯದಿಂದ ಶಿಥಿಲಗೊಂಡ ಕಾಂಪೌಂಡ್ ಕುಸಿತ: ಕೂದಲೆಳೆ ಅಂತರದಲ್ಲಿ ಬಾಲಕ ಜಸ್ಟ್ ಮಿಸ್
ರಾಜಧಾನಿಯ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತೇವೆ, ಸುಗಮ ಸಂಚಾರ ಬೆಂಗಳೂರು ಮಾಡುತ್ತೇವೆ ಅಂತ ಕೋಟಿ ಕೋಟಿ ರೂಪಾಯಿ ಮೀಸಲಿರುವ ಪಾಲಿಕೆ, ಇಂತಹ ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ಸಂಕಷ್ಟ ತಂದಿಟ್ಟಿರುವುದು ಖೇದರದ ಸಂಗತಿಯಾಗಿದೆ.
ಸದ್ಯ ತಾತ್ಕಾಲಿಕವಾಗಿ ಕೊಚ್ಚೆ ತುಂಬಿದ ಜಾಗಕ್ಕೆ ಸ್ಥಳೀಯರೇ ಮಣ್ಣು ತುಂಬಿ ಅಪಾಯವನ್ನು ಕೊಂಚ ತಗ್ಗಿಸುವ ಕೆಲಸ ಮಾಡಿದ್ದಾರೆ. ರಾಜಧಾನಿಯ ರಸ್ತೆಗಳನ್ನ ಅಭಿವೃದ್ಧಿ ಮಾಡುತ್ತೇವೆ ಅಂತ ಬರೀ ಮಾತಲ್ಲಿ ಹೇಳಿ ಸೈಲೆಂಟ್ ಆಗುವ ಪಾಲಿಕೆ, ಇದೀಗ ಅವೈಜ್ಞಾನಿಕ ಕಾಮಗಾರಿಯ ಮೂಲಕ ವಾಹನ ಸವಾರರಿಗೆ ನಿತ್ಯ ನರಕದರ್ಶನ ಮಾಡುವಂತೆ ಮಾಡಿದ್ರೆ, ಇತ್ತ ಟ್ರಾಫಿಕ್ ಜಾಮ್ ಸಂಕಷ್ಟ ಕೂಡ ಜನರ ಜೀವ ಹಿಂಡುತಿದೆ. ಪಾಲಿಕೆ ಈಗಲಾದರೂ ಎಚ್ಚೆತ್ತುಕೊಳ್ಳುತ್ತ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ