ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸ್ಮರ ಜೋರಾಗಿದೆ. ಅಭಿವೃದ್ಧಿ ಚರ್ಚೆ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತಾನೆ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ಅವನು ಅಧ್ಯಕ್ಷನಾಗಲು ಲಾಯಕ್ಕಿಲ್ಲ, ರಾಜಕೀಯ ಮಾಡುವುದಕ್ಕೆ ನಾಲಾಯಕ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ವಿರುದ್ದ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ಟಿಪ್ಪು ವರ್ಸಸ್ ರಾಣಿ ಅಬ್ಬಕ್ಕ ಅಂತಾ ಹೇಳಿದ್ದಾರೆ. ಬಿಜೆಪಿ ನಾಯಕರು ಸಮಾಜದ ಸಾಮರಸ್ಯವನ್ನು ಕೆಡಿಸುತ್ತಿದ್ದಾರೆ. ಬಿಜೆಪಿಯವರಂತೆ ಒಳಗೊಂದು ಹೊರಗೊಂದು ನಾವು ಹೇಳೋದಿಲ್ಲ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ಒಳ್ಳೆಯ ವಾತಾವರಣ ಇದೆ. ಹಾಗಾಗಿ ಹಲವರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಬೇರೆ ಪಕ್ಷಗಳ ಬಹಳ ಶಾಸಕರ ಜೊತೆಗೆ ಮಂತ್ರಿಯಾಗಿದ್ದ ಕೆಲವರು ಕಾಂಗ್ರೆಸ್ ಪಕ್ಷ ಸೇರುವ ಸಂಭವ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ವಿರುದ್ದ ಮಾಜಿ ಡಿಸಿಎಂ ಜಿ.ಪರಮೇಶ್ವರ್ ವಾಗ್ದಾಳಿ
ಸಮಾಜದ ಶಾಂತಿ ಕದಡಲಾಗುತ್ತಿದೆ. ಮೊದಲಿನಿಂದಲೂ ಬಿಜೆಪಿ ಧರ್ಮಗಳ ನಡುವೆ ಒಡಕು ಮೂಡಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಅವರು ಎಲ್ಲಾ ವರ್ಗಗಳ ವಿರೋಧಿಗಳು, ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರಲಿದೆ. ನಮ್ಮ ನಾಯಕರು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಅಲ್ಲಿ ನಿರೀಕ್ಷೆಮೀರಿ ಜನರಿಂದ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಬಿಜೆಪಿ ವಿರುದ್ಧ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ