ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನ ಈ ಮಾರ್ಗದಲ್ಲಿ 2 ರೈಲುಗಳು ರದ್ದು, 6 ರೈಲುಗಳ ಸಂಚಾರ ಭಾಗಶಃ ರದ್ದು

ಬೆಂಗಳೂರಿನ ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವೆ ನಡೆಯಲಿರುವ ರೈಲ್ವೆ ಇಂಜಿನಿಯರಿಂಗ್ ಕಾಮಗಾರಿಗಳ ಕಾರಣದಿಂದಾಗಿ ಜೂನ್ 7 ಮತ್ತು 8 ರಂದು ಅಶೋಕಪುರಂ ಎಕ್ಸ್‌ಪ್ರೆಸ್ ಸೇರಿದಂತೆ 2 ರೈಲುಗಳನ್ನು ರದ್ದುಗೊಳಿಸಲಾಗಿದ್ದು, 6 ಮೆಮು ರೈಲುಗಳ ಸಂಚಾರ ಭಾಗಶಃ ರದ್ದಾಗಿವೆ. ರದ್ದಾದ ರೈಲುಗಳ ವಿವರ ಇಲ್ಲಿದೆ.

ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನ ಈ ಮಾರ್ಗದಲ್ಲಿ 2 ರೈಲುಗಳು ರದ್ದು, 6 ರೈಲುಗಳ ಸಂಚಾರ ಭಾಗಶಃ ರದ್ದು
ಸಾಂದರ್ಭಿಕ ಚಿತ್ರ
Image Credit source: PTI

Updated on: Jun 04, 2026 | 12:24 PM

ಬೆಂಗಳೂರು, ಜೂನ್ 4: ಬೆಂಗಳೂರಿನ (Bengaluru) ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಡುವೆ ಹಳಿಗಳ ಇಂಜಿನಿಯರಿಂಗ್ ಕಾಮಗಾರಿ (ಲೈನ್ ಬ್ಲಾಕ್) ಹಮ್ಮಿಕೊಳ್ಳಲಾಗಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈಋತ್ಯ ರೈಲ್ವೆ (SWR) ತಿಳಿಸಿದೆ. ಜೂನ್ 7 ಮತ್ತು ಜೂನ್ 8 ರಂದು ಎರಡು ಪ್ರಮುಖ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, 6 ಮೆಮು (MEMU) ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಕಚೇರಿ ಹಾಗೂ ಇತರೆ ಕೆಲಸಗಳಿಗೆ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಕೋರಲಾಗಿದೆ.

ಸಂಚಾರ ರದ್ದಾಗಿರುವ ರೈಲುಗಳ ವಿವರ

ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಜೂನ್ 8 ರಂದು ಸಂಚರಿಸಬೇಕಿದ್ದ ರೈಲು ಸಂಖ್ಯೆ 20623 ಅಶೋಕಪುರಂ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 20624 ಕೆಎಸ್ಆರ್ ಬೆಂಗಳೂರು – ಅಶೋಕಪುರಂ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಜೂನ್ 7 ರಂದು ಭಾಗಶಃ ರದ್ದಾಗುವ ರೈಲುಗಳು

  • ರೈಲು ಸಂಖ್ಯೆ 66533 (ಮರಿಕುಪ್ಪಂ – ಕೆ.ಆರ್. ಪುರಂ ಮೆಮು): ಈ ರೈಲು ವೈಟ್‌ಫೀಲ್ಡ್ ಮತ್ತು ಕೆ.ಆರ್. ಪುರಂ ನಡುವೆ ಭಾಗಶಃ ರದ್ದಾಗಲಿದ್ದು, ವೈಟ್‌ಫೀಲ್ಡ್ ನಿಲ್ದಾಣದಲ್ಲೇ ಪ್ರಯಾಣ ಕೊನೆಗೊಳಿಸಲಿದೆ (Short-terminate).
  • ರೈಲು ಸಂಖ್ಯೆ 66534 (ಕೆ.ಆರ್. ಪುರಂ – ಕುಪ್ಪಂ ಮೆಮು): ಈ ರೈಲು ಕೆ.ಆರ್. ಪುರಂ ಬದಲಿಗೆ ವೈಟ್‌ಫೀಲ್ಡ್ ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
  • ರೈಲು ಸಂಖ್ಯೆ 66560 (ಅನಂತಪುರ – ಕೆಎಸ್ಆರ್ ಬೆಂಗಳೂರು ಮೆಮು): ಚನ್ನಸಂದ್ರ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಈ ರೈಲಿನ ಸಂಚಾರ ಕಡಿತಗೊಳಿಸಲಾಗಿದೆ.
  • ರೈಲು ಸಂಖ್ಯೆ 66520 (ಕೆಎಸ್ಆರ್ ಬೆಂಗಳೂರು – ಮರಿಕುಪ್ಪಂ ಮೆಮು): ಕೆಎಸ್ಆರ್ ಬೆಂಗಳೂರು ಮತ್ತು ವೈಟ್‌ಫೀಲ್ಡ್ ನಡುವೆ ಭಾಗಶಃ ರದ್ದಾಗಲಿದ್ದು, ಬೆಂಗಳೂರು ಬದಲಿಗೆ ವೈಟ್‌ಫೀಲ್ಡ್‌ನಿಂದಲೇ ಸಂಚಾರ ಆರಂಭಿಸಲಿದೆ.

ಜೂನ್ 8 ರಂದು ಭಾಗಶಃ ರದ್ದಾಗುವ ರೈಲುಗಳು

  • ರೈಲು ಸಂಖ್ಯೆ 66519 (ಮರಿಕುಪ್ಪಂ – ಕೆಎಸ್ಆರ್ ಬೆಂಗಳೂರು ಮೆಮು): ಈ ರೈಲು ವೈಟ್‌ಫೀಲ್ಡ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ವೈಟ್‌ಫೀಲ್ಡ್ ನಿಲ್ದಾಣದಲ್ಲೇ ಸ್ಥಗಿತಗೊಳ್ಳಲಿದೆ.
  • ರೈಲು ಸಂಖ್ಯೆ 66546 (ಕೆಎಸ್ಆರ್ ಬೆಂಗಳೂರು – ಮರಿಕುಪ್ಪಂ ಮೆಮು): ಈ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದ ಬದಲಿಗೆ ವೈಟ್‌ಫೀಲ್ಡ್‌ನಿಂದಲೇ ನಿಗದಿತ ಸಮಯಕ್ಕೆ ಮರಿಕುಪ್ಪಂ ಕಡೆಗೆ ಸಂಚರಿಸಲಿದೆ.

ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ತಾತ್ಕಾಲಿಕ ಬದಲಾವಣೆ ಅನಿವಾರ್ಯವಾಗಿದ್ದು, ಪ್ರಯಾಣಿಕರು ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ನೈಋತ್ಯ ರೈಲ್ವೆ ವಿನಂತಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Thu, 4 June 26

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us