ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ (minor son) ವರ್ಷದ ಹಿಂದೆ (2022ರಲ್ಲಿ) ದ್ವಿಚಕ್ರ ವಾಹನವನ್ನು 76 ವರ್ಷದ ವೃದ್ಧ ಪಾದಚಾರಿಯೊಬ್ಬರಿಗೆ (pedestrian) ಡಿಕ್ಕಿ ಹೊಡೆದು, ಅವರ ಸಾವಿಗೆ ಕಾರಣವಾಗಿದ್ದ. ಆ ಪ್ರಕರಣದಲ್ಲಿ ತನ್ನ ಮಗನಿಗೆ ಗೇರ್‌ಲೆಸ್ ಸ್ಕೂಟರ್ (gearless scooter) ಕೊಟ್ಟಿದ್ದ ತಾಯಿ ದೋಷಿ ಎಂದು ನಗರದ (Bengaluru metropolitan magistrate traffic court ) ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಟ್ರಾಫಿಕ್ ನ್ಯಾಯಾಲಯವು ಮೊನ್ನೆ ಡಿಸೆಂಬರ್ 11 ರಂದು ತೀರ್ಪು ನೀಡಿದೆ. ಮಹಿಳೆಗೆ 26,000 ರೂ. ದಂಡ ವಿಧಿಸಿದೆ. 38 ವರ್ಷದ ಗೃಹಿಣಿಯ 16 ವರ್ಷದ ಮಗನ ವಿರುದ್ಧ ಬಾಲ ನ್ಯಾಯ ಮಂಡಳಿಯಲ್ಲಿ ಪ್ರಕರಣ ನಡೆಯುತ್ತಿದೆ.
ಕಳೆದ ಡಿಸೆಂಬರ್ 23 ರಂದು ಸಂಜೆ 4.45 ರ ಸುಮಾರಿಗೆ ಹೊಸೂರು ರಸ್ತೆಯ ಕಿದ್ವಾಯಿ ಆಸ್ಪತ್ರೆ ಬಳಿ ಬಾಲಾಪರಾಧಿಯು ರಾಮಕೃಷ್ಣ ಎಂಬಾತನಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ರಾಮಕೃಷ್ಣ ರಸ್ತೆ ದಾಟುತ್ತಿದ್ದರು. ಅಪಘಾತ ಸಂಭವಿಸಿದ ಕೂಡಲೇ ಸವಾರ ಸ್ಥಳದಿಂದ ಪರಾರಿಯಾಗಿದ್ದ. ರಾಮಕೃಷ್ಣ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ನಿಮ್ಹಾನ್ಸ್‌ಗೆ ರವಾನಿಸಲಾಗಿದ್ದು, ನಂತರ ಅವರು ಸಾವನ್ನಪ್ಪಿದ್ದರು.
ಜಯನಗರ ಸಂಚಾರ ಪೊಲೀಸರು ಕಿದ್ವಾಯಿ ಆಸ್ಪತ್ರೆ ಮತ್ತು ಸಮೀಪದ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಸವಾರನನ್ನು ಪತ್ತೆ ಹಚ್ಚಿದ್ದಾರೆ. ಅಪಘಾತದ ದಿನವೇ ಸ್ಕೂಟರ್ ಮತ್ತು ಅದರ ನೋಂದಣಿ ಸಂಖ್ಯೆಯ ವಿವರಗಳನ್ನು ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೂ, ವಾಹನ ಮಾಲೀಕರ ಮನೆಯನ್ನು ಪತ್ತೆ ಹಚ್ಚಲು ಸುಮಾರು ಏಳು ದಿನಗಳನ್ನು ತೆಗೆದುಕೊಂಡಿದ್ದರು. ಏಕೆಂದರೆ ಆರ್‌ಟಿಒ ದಾಖಲೆಗಳಲ್ಲಿ ನಮೂದಿಸಿರುವ ಮಾಲೀಕರ ವಿಳಾಸವೇ ಬೇರೆಯಿತ್ತು. ಜತೆಗೆ ವಾಹನದ ವಿಮೆ ಅವಧಿ ಕೂಡ ಮುಗಿದಿತ್ತು.
ಮೊದಲಿಗೆ, ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದರು. ದ್ವಿಚಕ್ರ ವಾಹನವನ್ನು ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆಯೋ ಆ ಸವಾರ ಮತ್ತು ಅವರ ತಾಯಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅಷ್ಟರಲ್ಲಾಗಲೇ ಗಾಯಗೊಂಡಿದ್ದ ರಾಮಕೃಷ್ಣ ಅವರು ಸಾವನ್ನಪ್ಪಿದ್ದರು. ಪೊಲೀಸರು ಐಪಿಸಿ ಸೆಕ್ಷನ್ 279 (ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ) ಮತ್ತು 304A (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿ ಎಫ್‌ಐಆರ್ ದಾಖಲಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Also Read: ಶಿಕ್ಷಕನ ಕ್ರೌರ್ಯ ಬಾಲಕನಿಗೆ ನರಕಯಾತನೆ, ಖಾಸಗಿ ಶಾಲೆ ನಡೆ ಸಂಶಯಾಸ್ಪದ, ಗದಗ ಪೊಲೀಸರಿಂದ ಎಫ್ಐಆರ್ ಕೂಡ ಇಲ್ಲ
ತನ್ನ ಸ್ನೇಹಿತನನ್ನು ಭೇಟಿಯಾಗಿ ಮನೆಗೆ ಹಿಂದಿರುಗುತ್ತಿದ್ದೆ. ಆ ವೇಳೆ ವಾಹನ ನಿಯಂತ್ರಣ ತಪ್ಪಿ ರಾಮಕೃಷ್ಣ ಅವರಿಗೆ ಡಿಕ್ಕಿ ಹೊಡೆದಿತ್ತು. ಜನ ರೊಚ್ಚಿಗೇಳಬಹುದು ಎಂದು, ಅವರ ಕೋಪಕ್ಕೆ ಹೆದರಿ ನಾನು ವೇಗವಾಗಿ ಸ್ಥಳದಿಂದ ಮರೆಯಾದೆ ಎಂದು ಆರೋಪಿ ಸವಾರ ಪೊಲೀಸರಿಗೆ ತಿಳಿಸಿದ್ದ.
ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಪೊಲೀಸರು ಬಾಲಾಪರಾಧಿ ವಿರುದ್ಧ ಆರೋಪಗಳನ್ನು ದಾಖಲಿಸಿದ್ದರು ಮತ್ತು ದೋಷಾರೋಪ ಪಟ್ಟಿ ಹಾಕಿ ಬಾಲಾಪರಾಧಿ ನ್ಯಾಯಾಲಯಕ್ಕೆ ಹಸ್ತಾಂತರಿಸಿದ್ದರು. ಈ ಮಧ್ಯೆ ಪೊಲೀಸರು ಆತನ ತಾಯಿಯ ವಿರುದ್ಧವೂ ಮೊಕದ್ದಮೆ ದಾಖಲಿಸಿದ್ದರು ಮತ್ತು ಆಕೆ ತಮ್ಮ ಸ್ಕೂಟರ್ ಅನ್ನು ಅಪ್ರಾಪ್ತ ವಯಸ್ಸಿನ ಮಗನಿಗೆ ನೀಡಿದ್ದಾರೆಂದು ಮೋಟಾರು ವಾಹನ ಕಾಯ್ದೆ, 1988 ರ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದರು. ಎರಡು ಚಾರ್ಜ್‌ಶೀಟ್‌ಗಳು 54 ಪುಟಗಳನ್ನು ಹೊಂದಿದ್ದು, 17 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:11 pm, Thu, 14 December 23