ಬೆಂಗಳೂರು: ವಿಶ್ವಾದ್ಯಂತ ಒಮಿಕ್ರಾನ್ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಒಂದೆರಡು ದಿನದಲ್ಲಿ ಶೇ. 100ರಷ್ಟು ಕೊರೊನಾ ಲಸಿಕೆಯ ಎರಡನೇ ಡೋಸ್ ವಿತರಣೆಯಾಗಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ. ಒಮಿಕ್ರಾನ್ ಅಥವಾ ಕೊವಿಡ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಡೆಲ್ಟಾದಷ್ಟು ಈ ಒಮಿಕ್ರಾನ್ ಆತಂಕಕಾರಿಯಲ್ಲ. ಈಗಾಗಲೇ ಬೆಂಗಳೂರಿನಲ್ಲಿ ದಿನವೂ ಸಾಕಷ್ಟು ಕೊವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಒಂದು ಅಥವಾ ಎರಡು ದಿನದೊಳಗೆ ಶೇ. 100ರಷ್ಟು ಎರಡನೇ ಡೋಸ್ ಕೊವಿಡ್ ಲಸಿಕೆ ವಿತರಣೆಯಾಗಲಿದೆ. ಕೊವಿಡ್ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರದಿಂದ ಹೊಸ ವರ್ಷಾಚರಣೆಗೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ರೆಸ್ಟೋರೆಂಟ್, ಸಾರ್ವಜನಿಕ ಸ್ಥಳ, ಕ್ಲಬ್ಗಳಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ, ಸಂಪೂರ್ಣವಾಗಿ ಎರಡು ಡೋಸ್ ಕೊವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪಾರ್ಟಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.
ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ, ರಾಜ್ಯದಲ್ಲಿ ಹೊಸ ವರ್ಷಾಚರಣೆ ವೇಳೆ ಜನ ಗುಂಪುಗೂಡುವಂತಿಲ್ಲ. ಆದರೆ, ಚರ್ಚ್ ಗಳಲ್ಲಿ ಕ್ರಿಸ್ ಮಸ್ ಪ್ರಾರ್ಥನೆಗೆ ಯಾವುದೇ ನಿರ್ಬಂಧವಿಲ್ಲ. ನ್ಯೂ ಇಯರ್ ಪಾರ್ಟಿ ನೆಪದಲ್ಲಿ ಬಹಿರಂಗ ಪಾರ್ಟಿಗೆ ಅವಕಾಶವಿರುವುದಿಲ್ಲ. ಡಿಸೆಂಬರ್ 30 ರಿಂದ ಜನವರಿ 2ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಯಾವುದೇ ಪಾರ್ಟಿಗಳನ್ನು ಮಾಡುವಂತಿಲ್ಲ. ಅಪಾರ್ಟ್ಮೆಂಟ್ಗಳಲ್ಲಿ ಜನರನ್ನ ಸೇರಿಸಿ ಪಾರ್ಟಿ ಮಾಡುವಂತಿಲ್ಲ. ಬಾರ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿಗೆ ಎರಡು ಡೋಸ್ ವ್ಯಾಕ್ಸಿನೇಷನ್ ಕಡ್ಡಾಯ. ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜನೆ ಮಾಡುವಂತಿಲ್ಲ.
ಬೆಂಗಳೂರು ನಗರ ಸೇರಿದಂತೆ ಮೂರು ಜಿಲ್ಲೆಗಳು ಶೇ. 100ರಷ್ಟು ಗುರಿ ಸಾಧಿಸಿದ್ದು, ರಾಜ್ಯದ ಸರಾಸರಿ ಶೇ. 96 ರಷ್ಟು ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಒಟ್ಟಾರೆ ಮೊದಲ ಡೋಸ್ ವಿತರಣೆ ಶೇ. 96ರಷ್ಟಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ 4.9 ಕೋಟಿ ಜನರಲ್ಲಿ ಸುಮಾರು 4.7 ಕೋಟಿ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಬೇರೆಲ್ಲ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಅತಿಹೆಚ್ಚು ಜನರು ಕೊವಿಡ್ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ: New Year 2022 Guidelines: ಹೊಸ ವರ್ಷಾಚರಣೆ, ಕ್ರಿಸ್ಮಸ್ ಆಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
ಇಲ್ಲಿಯವರೆಗೆ 3 ದೇಶಗಳಲ್ಲಿ ಒಮಿಕ್ರಾನ್ ಸಾವುಗಳು ವರದಿಯಾಗಿವೆ; ಹೆಚ್ಚಿನ ಸಾವುನೋವುಗಳ ಬಗ್ಗೆ ಎಚ್ಚರಿಸಿದ ತಜ್ಞರು