“ವಾಸ್ತು ಹೇಳುವ ನೆಪದಲ್ಲಿ ನನ್ನ ಎದೆಯ ಭಾಗ ಮುಟ್ಟಿದ್ದಾರೆ”: ಮಹಿಳೆಯ ಗಂಭೀರ ಆರೋಪ, ಇದು ಹನಿಟ್ರಾಪ್ ಎಂದ ಮಾಲೀಕ!
ಬೆಂಗಳೂರಿನ ವಿಜಯನಗರದಲ್ಲಿ ವಾಸ್ತು ಸಲಹೆಗಾರರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಆದರೆ, ಆರೋಪಿ ಸಲಹೆಗಾರ, ಹಣಕ್ಕಾಗಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಮರುದೂರು ನೀಡಿದ್ದಾರೆ. ಸಂತ್ರಸ್ತ ಮಹಿಳೆಯು ವಾಸ್ತು ಸಲಹೆ ಕೇಳಲು ಹೋಗಿದ್ದಾಗ ಈ ಘಟನೆ ನಡೆದಿದೆ. ಇಬ್ಬರ ದೂರುಗಳನ್ನು ಆಧರಿಸಿ ಗೋವಿಂದರಾಜನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಏ.18: ನಗರದ ವಿಜಯನಗರದಲ್ಲಿರುವ ‘ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್’ ಕಚೇರಿಯಲ್ಲಿ ನಡೆದ ಘಟನೆಯೊಂದು ಈಗ ಪೊಲೀಸ್ ಮೆಟ್ಟಿಲೇರಿದೆ. ವಾಸ್ತು ಕೇಳಲು ಹೋದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ, ಇದು ಹಣಕ್ಕಾಗಿ ನಡೆಸಿದ ಬ್ಲ್ಯಾಕ್‌ಮೇಲ್ ತಂತ್ರ ಎಂದು ಆರೋಪಿಗಳು ಮರುದೂರು ನೀಡಿದ್ದಾರೆ.
ಸಂತ್ರಸ್ತ ಮಹಿಳೆಯು ಏಪ್ರಿಲ್ 4ರಂದು ತನ್ನ ಮನೆಯ ವಾಸ್ತು ಕೇಳಲು ಶಾಂತಕುಮಾರ್ ಎಂಬುವವರ ಕಚೇರಿಗೆ ತೆರಳಿದ್ದರು. ಈ ವೇಳೆ ಶಾಂತಕುಮಾರ್ ಅವರು ವಾಸ್ತು ಹೇಳುವ ನೆಪದಲ್ಲಿ ತನ್ನ ಎದೆಯ ಭಾಗ ಹಾಗೂ ಹೊಟ್ಟೆಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅಲ್ಲಿದ್ದ ಭರತ್, ಶಾಂತಕುಮಾರ್ ಪತ್ನಿ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಾಸ್ತು ಸಲಹೆಗಾಗಿ 15 ಸಾವಿರ ರೂಪಾಯಿ ನಗದು ಪಡೆದೂ ದೌರ್ಜನ್ಯ ಎಸಗಿದ್ದಾರೆ ಎಂಬುದು ಇವರ ಆರೋಪ.
ಇದನ್ನೂ ಓದಿ: ಹಾಸನ ಪೊಲೀಸರ ಭರ್ಜರಿ ಕಾರ್ಯಾಚರಣೆ: 15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿ ಗೋವಾದಲ್ಲಿ ಅರೆಸ್ಟ್!
ಮಹಿಳೆಯ ಆರೋಪವನ್ನು ತಳ್ಳಿಹಾಕಿರುವ ಶಾಂತರಾಜು, ಇದೊಂದು ವ್ಯವಸ್ಥಿತ ಬ್ಲ್ಯಾಕ್‌ಮೇಲ್ ದಂಧೆ ಎಂದು ದೂರಿದ್ದಾರೆ. ಸುನೀಲತಾ ಎಂಬ ಮಹಿಳೆ ತನ್ನನ್ನು ಮೀಡಿಯಾ ಮತ್ತು ಪೊಲೀಸ್ ಎಂದು ಪರಿಚಯಿಸಿಕೊಂಡು, ಜಮಾಲ್ ಮತ್ತು ಅಮೃತಲಿಂಗಂ ಎಂಬುವವರ ಜೊತೆ ಬಂದು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಶಾಂತರಾಜು ಅವರ ಪತ್ನಿಯ ಮೇಲೆಯೂ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗೋವಿಂದರಾಜನಗರ ಪೊಲೀಸರು ಎರಡೂ ಕಡೆಯ ದೂರುಗಳನ್ನು ಆಧರಿಸಿ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಒಂದು ಕಡೆ ಲೈಂಗಿಕ ದೌರ್ಜನ್ಯದ ಆರೋಪವಿದ್ದರೆ, ಮತ್ತೊಂದು ಕಡೆ ಸುಲಿಗೆ, ಹಲ್ಲೆ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳಿವೆ.
ವರದಿ: ವಿಕಾಸ್ ಟಿವಿ9 ಕ್ರೈಂ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Sat, 18 April 26




