
ಬೆಂಗಳೂರು, ಜೂನ್ 02: ನಗರದಲ್ಲಿ ರಾಜ್ಯಪಾಲರ (Governor) ಸಂಚಾರದ ವೇಳೆ ವಿಐಪಿ ಟ್ರಾಫಿಕ್ ತಡೆದಿದ್ದಕ್ಕೆ ಆಕ್ರೋಶಗೊಂಡು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದ ಯುವಕನ ಪ್ರಕರಣ ಇದೀಗ ಭಾರಿ ಟ್ವಿಸ್ಟ್ ಪಡೆದುಕೊಂಡಿದೆ. ಪೊಲೀಸರ ಪ್ರಾಥಮಿಕ ತನಿಖೆ ಮತ್ತು ವಿಚಾರಣೆಯ ವೇಳೆ ಪ್ರತಿಭಟನೆ ನಡೆಸಿದ ವ್ಯಕ್ತಿ ಸಾರ್ವಜನಿಕವಾಗಿ ಹೈಡ್ರಾಮಾ ಮಾಡಿರುವುದು ಬೆಳಕಿಗೆ ಬಂದಿದೆ. ಆತನ ಕಾರಿನಲ್ಲಿ ಆ ಸಮಯದಲ್ಲಿ ಯಾವ ಗರ್ಭಿಣಿಯೂ ಇರಲಿಲ್ಲ ಎಂಬ ಸತ್ಯವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಹೆಚ್‌ಎಎಲ್ (HAL) ಠಾಣೆಯ ಪೊಲೀಸರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದ ಮೋಹಿತ್ ಎಂಬ ಯುವಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಸುಳ್ಳು ಹೇಳಿದ್ದಾಗಿ ಮೋಹಿತ್ ಒಪ್ಪಿಕೊಂಡಿದ್ದಾನೆ.
ಪ್ರತಿಭಟನೆಯ ಸಮಯದಲ್ಲಿ ಮೋಹಿತ್ ಜೊತೆ ಕಾರಿನಲ್ಲಿ ಆತನ ಪತ್ನಿ ಇರಲಿಲ್ಲ. ಆತ ಒಂಟಿಯಾಗಿಯೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ನಾನು ಹೆಚ್‌ಎಎಲ್ ಇಸ್ರೋ (ISRO) ಜಂಕ್ಷನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಕಾಯುತ್ತಿದ್ದೆ. ವಿಐಪಿ ಮೂವ್‌ಮೆಂಟ್‌ನಿಂದಾಗಿ ವಾಹನಗಳನ್ನು ತಡೆ ಹಿಡಿಯಲಾಗಿತ್ತು. ನನಗೆ ಮನೆಗೆ ಹೋಗಲು ತಡವಾಗುತ್ತಿತ್ತು ಮತ್ತು ಮನೆಯಲ್ಲಿದ್ದ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ತುರ್ತು ಪರಿಸ್ಥಿತಿ ಇತ್ತು. ಆ ಒತ್ತಡದಲ್ಲಿ ಸಿಟ್ಟು ಬಂದು, ಪೊಲೀಸರು ದಾರಿ ಬಿಡಲಿ ಎಂಬ ಕಾರಣಕ್ಕೆ ಕಾರಿನಲ್ಲೇ ಪತ್ನಿ ಇದ್ದಾಳೆ ಎಂದು ಸುಳ್ಳು ಹೇಳಿ ವಾಗ್ವಾದ ನಡೆಸಿದೆ ಎಂದು ಮೋಹಿತ್ ತಿಳಿಸಿದ್ದಾನೆ. ಪೊಲೀಸರ ಮೇಲೆ ತನಗೆ ಯಾವುದೇ ವೈಯಕ್ತಿಕ ಟಾರ್ಗೆಟ್ ಇರಲಿಲ್ಲ ಎಂದು ಆತ ಸ್ಪಷ್ಟಪಡಿಸಿದ್ದಾನೆ.
ಇದನ್ನೂ ಓದಿ ಗವರ್ನರ್ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಯುವಕನ ಹೈಡ್ರಾಮಾದಿಂದಾಗಿ ಇಡೀ ಪೊಲೀಸ್ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುವಂತಾಗಿತ್ತು. ಆದರೆ ಸದ್ಯಕ್ಕೆ ಪೊಲೀಸರು ಮೋಹಿತ್ ವಿರುದ್ಧ ಯಾವುದೇ ಅಧಿಕೃತ ಪ್ರಕರಣ ದಾಖಲಿಸಿಲ್ಲ. ಆತನ ಲಿಖಿತ ಹೇಳಿಕೆಯನ್ನು ದಾಖಲಿಸಿಕೊಂಡು, ಇನ್ನು ಮುಂದೆ ಇಂತಹ ಕೃತ್ಯಗಳನ್ನು ಎಸಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಹೆಚ್‌ಎಎಲ್ ಪೊಲೀಸರು ಆತನನ್ನು ಕಳುಹಿಸಿಕೊಟ್ಟಿದ್ದಾರೆ. ವಿಐಪಿ ಟ್ರಾಫಿಕ್ ಕಿರಿಕಿರಿಯ ನಡುವೆಯೂ ಸಾರ್ವಜನಿಕರು ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.