ಬೆಂಗಳೂರು: ನಿರ್ವಹಣೆಯಿಲ್ಲದೇ ಸೊರಗಿದ ನೀರಿನ ಕಾರಂಜಿಗಳು, ಡೆಂಗ್ಯೂ – ಮಲೇರಿಯಾಗೂ ಇದೇ ಹಾಟ್​​ಸ್ಪಾಟ್

| Updated By: Ganapathi Sharma

Updated on: Jun 24, 2024 | 7:32 AM

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದ್ದ ಬೆಂಗಳೂರಿನ ಅನೇಕ ಕಾರಂಜಿಗಳು ಈಗ ನಿರ್ವಹಣೆ ಇಲ್ಲದೆ ಕೊಳಚೆ ನೀರಿನ ಆಗರವಾಗಿವೆ. ಡೆಂಗ್ಯೂ, ಮಲೇರಿಯಾ ಹರಡುವ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿವೆ. ಈ ಬಗ್ಗೆ ಸಾರ್ವಜನಿಕರಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪರಿಸ್ಥಿತಿಗೆ ಕಾರಣವೇನು? ನಗರದ ಯಾವೆಲ್ಲ ಕಾರಂಜಿಗಳ ಸ್ಥಿತಿ ಏನಿವೆ? ಇಲ್ಲಿದೆ ವಿವರ.

ಬೆಂಗಳೂರು: ನಿರ್ವಹಣೆಯಿಲ್ಲದೇ ಸೊರಗಿದ ನೀರಿನ ಕಾರಂಜಿಗಳು, ಡೆಂಗ್ಯೂ - ಮಲೇರಿಯಾಗೂ ಇದೇ ಹಾಟ್​​ಸ್ಪಾಟ್
ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿದ ಕಾರಂಜಿ
Follow us on

ಬೆಂಗಳೂರು, ಜೂನ್ 24: ಬೆಂಗಳೂರು (Bengaluru) ನಗರದ ಅಂದ ಹೆಚ್ಚಿಸುವುದರ ಜೊತೆಗೆ ವಾಯುಮಾಲಿನ್ಯ ತಗ್ಗಿಸುವುದಕ್ಕೆಂದು ಪ್ರಮುಖ ಪ್ರದೇಶಗಳಲ್ಲಿ ನಿರ್ಮಿಸಿದ್ದ ಕಾರಂಜಿಗಳು (Water fountains) ನಿರ್ವಹಣೆಯಿಲ್ಲದೇ ಸೊರಗಿವೆ. ಕೆಆರ್ ಸರ್ಕಲ್ (KR Circle), ಕೆಂಪೇಗೌಡ ರಸ್ತೆ ಸೇರಿದಂತೆ ಕೆಲವು ಭಾಗಗಳಲ್ಲಿರುವ ಕಾರಂಜಿಗಳು ದುಸ್ಥಿತಿಗೆ ತಲುಪಿದ್ದು, ಲಕ್ಷ ಲಕ್ಷ ರೂಪಾಯಿ ಹಣ ಖರ್ಚು ಮಾಡಿ, ನಿರ್ವಹಣೆ ಮರೆತ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುರಿದು ಬಿದ್ದ ಜಂಕ್ಷನ್ ಬೋರ್ಡ್​​ಗಳು, ಬಲ್ಬ್​​ಗಳಿಲ್ಲದೇ ಮಾಸಿದ ಬೋರ್ಡ್​ಗಳು, ನೀರಿಲ್ಲದೇ ಭಣಗುಟ್ಟುತ್ತಿರುವ ಕಾರಂಜಿ. ಇದು ಸಿಲಿಕಾನ್ ಸಿಟಿಯ ಅಂದ ಹೆಚ್ಚಿಸುವುದಕ್ಕಾಗಿ ಪಾಲಿಕೆ ನಿರ್ಮಿಸಿದ್ದ ನೀರಿನ ಕಾರಂಜಿಗಳ ದುಸ್ಥಿತಿ. 2021 ರಲ್ಲಿ ಬಿಜಿಪಿ ಸರ್ಕಾರದ ಅವಧಿಯಲ್ಲಿ ಕೆಆರ್ ಸರ್ಕಲ್ ಬಳಿ ನೀರಿನ ಕಾರಂಜಿ ನಿರ್ಮಿಸಿದ್ದರು. ಐ ಲವ್ ಬೆಂಗಳೂರು ಎಂಬ ಬರಹದ ಜೊತೆಗೆ ಸೈಲ್ಫಿ ಸ್ಪಾಟ್ ಕೂಡ ನಿರ್ಮಿಸಲಾಗಿತ್ತು, ಆದರೆ ಇದೀಗ ಈ ಕಾರಂಜಿ ಕೊಳಚೆ ನೀರು ತುಂಬಿ ಸೊಳ್ಳೆಗಳ ತವರಾಗಿ ಬದಲಾಗಿದೆ.

ನಗರದಲ್ಲಿ ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ 42 ಜಂಕ್ಷನ್‌ಗಳಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ನೀರಿನ ಕಾರಂಜಿಗಳನ್ನು ನಿರ್ಮಿಸಲು ಬಿಬಿಎಂಪಿ 2021 ರಲ್ಲಿ ಪ್ಲಾನ್ ಮಾಡಿತ್ತು. ಇದೇ ವೇಳೆ ಕೆಆರ್ ಸರ್ಕಲ್ ನಲ್ಲೂ ಕೂಡ ನೀರಿನ ಕಾರಂಜಿ ನಿರ್ಮಿಸಿ ಹೈಟೆಕ್ ಟಚ್ ನೀಡಿದ್ದರು. ಆದರೆ, ಇದೀಗ ನಿರ್ವಹಣೆಯಿಲ್ಲದೇ ಕಾರಂಜಿ ಸೊರಗಿನಿಂತಿದೆ. ಜನರ ತೆರಿಗೆ ಹಣ ಬಳಸಿ ಕಟ್ಟಿದ್ದ ಕಾರಂಜಿ ಹದಗೆಟ್ಟಿರೋದಕ್ಕೆ ಸಿಟಿಮಂದಿ ಕಿಡಿಕಾರುತ್ತಿದ್ದಾರೆ.

ಇತ್ತ ಮೆಜೆಸ್ಟಿಕ್ ಕಡೆ ತೆರಳುವ ಕೆಂಪೇಗೌಡ ರಸ್ತೆಯಲ್ಲಿರೋ ಕಾರಂಜಿ ಕೂಡ ದುಸ್ಥಿತಿಗೆ ತಲುಪಿದೆ. 2010 ರಲ್ಲಿ ಸಿಟಿಸೆಂಟರ್ ಮಾಲ್ ಸಮೀಪದ ಸರ್ಕಲ್​ನಲ್ಲಿ ಪಾಲಿಕೆ ಕಾರಂಜಿ ನಿರ್ಮಿಸಿತ್ತು. ಬಳಿಕ ಇದೇ ಕಾರಂಜಿ ಬಳಿ ರಾಜ್ ಕುಮಾರ್ ಅಭಿಮಾನಿಗಳ ಸಂಘ ಡಾ.ರಾಜ್ ಕುಮಾರ್ ಅವರ ಪುತ್ಥಳಿ ನಿರ್ಮಿಸಿತ್ತು. ಆದರೆ ಇದೀಗ ಈ ಕಾರಂಜಿ ಕೂಡ ನೀರಿಲ್ಲದೇ ಭಣಗುಡುತ್ತಿದೆ. ನೀರಿನ ವ್ಯವಸ್ಥೆ ಇಲ್ಲದೇ ಸೊರಗಿದ ಕಾರಂಜಿಗೆ ಮರುಜೀವ ಕೊಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿಗೆ ಚಾಲಕರ ಕೊರತೆ, 7 ವರ್ಷಗಳಿಂದ ಆಗಿಲ್ಲ ನೇಮಕಾತಿ: ಶಕ್ತಿ ಯೋಜನೆ ಜಾರಿಗೊಳಿಸುವ ಸಂಸ್ಥೆಗೇ ಇಲ್ಲ ಶಕ್ತಿ!

ಒಟ್ಟಿನಲ್ಲಿ, ಬೆಂಗಳೂರಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬೇಕಿದ್ದ ಕಾರಂಜಿಗಳು ನೀರಿಲ್ಲದೇ, ನಿರ್ವಹಣೆಯಿಲ್ಲದೇ ಧೂಳು ಹಿಡಿದು ನಿಂತಿದ್ದು ನಗರದ ಅಂದಗೆಡಿಸುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ