ದುಡಿದ ಸಂಬಳ ಕೇಳಿದ್ದೇ ತಪ್ಪಾಯ್ತಾ?: ಚಾಲಕನ ತಲೆಗೆ ರಾಡ್‌ನಿಂದ ಹೊಡೆದು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಮಾಲೀಕ

ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಚಾಲಕ ಮೋಹನ್ ಬಾಕಿ ಸಂಬಳ ಕೇಳಿದ್ದಕ್ಕೆ ಮಾಲೀಕ ಶ್ರೀನಿವಾಸ್‌ನಿಂದ ಅಪಹರಣ ಮತ್ತು ಮಾರಣಾಂತಿಕ ಹಲ್ಲೆಗೊಳಗಾಗಿದ್ದಾರೆ. ಏಳು ತಿಂಗಳ ಸಂಬಳ ಬಾಕಿ ಉಳಿಸಿಕೊಂಡಿದ್ದ ಮಾಲೀಕ, ದೂರು ನೀಡಲು ಮುಂದಾಗಿದ್ದ ಚಾಲಕನ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಅಪಹರಿಸಿದ್ದ. ಮೋಹನ್ ಚಾಣಾಕ್ಷತನದಿಂದ ತಪ್ಪಿಸಿಕೊಂಡು ದೂರು ನೀಡಿದಾಗ, ಜೀವನ್ ಭೀಮಾ ನಗರ ಪೊಲೀಸರು ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ದುಡಿದ ಸಂಬಳ ಕೇಳಿದ್ದೇ ತಪ್ಪಾಯ್ತಾ?: ಚಾಲಕನ ತಲೆಗೆ ರಾಡ್‌ನಿಂದ ಹೊಡೆದು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಮಾಲೀಕ
ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಚಾಲಕ
Image Credit source: Tv9 kannada
Edited By:

Updated on: Nov 15, 2026 | 8:58 PM

ಬೆಂಗಳೂರು, ನ.15: ದುಡಿದ ಕೆಲಸಕ್ಕೆ ಬಾಕಿ ಸಂಬಳ ಕೇಳಿದ್ದಲ್ಲದೆ, ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದ ವಾಟರ್ ಟ್ಯಾಂಕರ್ ಚಾಲಕನನ್ನು ಮಾಲೀಕನೇ ತನ್ನ ಸಹಚರರೊಂದಿಗೆ ಸೇರಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಜೀವನ್ ಭೀಮಾ ನಗರ ಪೊಲೀಸರು, ಮಾಲೀಕ ಶ್ರೀನಿವಾಸ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಲ್ಲೆಗೊಳಗಾದ ಯುವಕ ಮೋಹನ್, ಕಳೆದ ಎರಡೂವರೆ ವರ್ಷಗಳಿಂದ ಶ್ರೀನಿವಾಸ್ ಎಂಬುವವರ ಬಳಿ ವಾಟರ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಕಳೆದ ಏಳು ತಿಂಗಳಿಂದ ಶ್ರೀನಿವಾಸ್ ಸಂಬಳ ನೀಡದೆ ಸತಾಯಿಸುತ್ತಿದ್ದು, ಬರೋಬ್ಬರಿ 2 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ.

Loading...

ಸಂಬಳ ಸಿಗದೆ ಬೇಸತ್ತ ಮೋಹನ್ ಒಂದೂವರೆ ತಿಂಗಳ ಹಿಂದೆ ಕೆಲಸ ಬಿಟ್ಟು, ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದ. ಕೆಲ ದಿನಗಳ ಹಿಂದೆ ದೂರಿನ ವಿಚಾರಣೆಗಾಗಿ ಪೊಲೀಸರು ಕರೆದಿದ್ದಾರೆ ಎಂದು ಠಾಣೆಗೆ ಹೋಗಲು ಮೋಹನ್ ಮನೆಯ ಬಳಿ ಸಿದ್ಧನಾಗುತ್ತಿದ್ದಾಗ, ಮಾಲೀಕ ಶ್ರೀನಿವಾಸ್ ಮತ್ತು ಮೂವರು ಸಹಚರರು ಅಲ್ಲಿಗೆ ಬಂದಿದ್ದಾರೆ. ಮಾತುಕತೆಗೆ ಬಂದಿರಬಹುದು ಎಂದು ಮೋಹನ್ ಭಾವಿಸುತ್ತಿದ್ದಂತೆಯೇ, ಆರೋಪಿಗಳು ಏಕಾಏಕಿ ಆತನ ತಲೆಗೆ ಹಿಂಬದಿಯಿಂದ ರಾಡ್‌ನಿಂದ ಹಲ್ಲೆ ನಡೆಸಿ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ಆತ್ಮೀಯ ಸ್ನೇಹಿತರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾವೇರಿ ಯುವಕರ ಅಂತ್ಯಕ್ರಿಯೆ ಒಟ್ಟಿಗೇ ನೆರವೇರಿಸಿದ ಪೋಷಕರು

ಡಿಕ್ಕಿಯಲ್ಲಿ ತುಂಬಿ ಹಲ್ಲೆ; ಆರೋಪಿಗಳು ಮದ್ಯಪಾನ ಮಾಡುವಾಗ ತಪ್ಪಿಸಿಕೊಂಡ ಚಾಲಕ

ಕಾರಿನಲ್ಲಿ ಅಪಹರಿಸಿಕೊಂಡು ಹೋಗುವಾಗ ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನದಿಂದ ಆರೋಪಿಗಳು ಮೋಹನ್‌ನನ್ನು ಕಾರಿನ ಡಿಕ್ಕಿಯಲ್ಲಿ ತುಂಬಿ, ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸಿ ಮನಬಂದಂತೆ ಥಳಿಸಿದ್ದಾರೆ. ತೀವ್ರ ಹಲ್ಲೆಯಿಂದ ಮೋಹನ್ ಪ್ರಜ್ಞೆ ತಪ್ಪಿದ್ದು, ಆತ ಮೃತಪಟ್ಟಿರಬಹುದು ಎಂದು ಭಾವಿಸಿದ ಆರೋಪಿಗಳು ರೈಲ್ವೇ ಹಳಿಯ ಸಮೀಪ ಕಾರು ನಿಲ್ಲಿಸಿ ಹಿಂಭಾಗದಲ್ಲಿ ಕುಳಿತು ಮದ್ಯಪಾನ (ಎಣ್ಣೆ ಹೊಡೆಯಲು) ಮಾಡಲು ಶುರುಮಾಡಿದ್ದಾರೆ.

ಇದೇ ವೇಳೆ ಪ್ರಜ್ಞೆ ಮರಳಿದ ಮೋಹನ್, ಆರೋಪಿಗಳು ಮದ್ಯದ ನಶೆಯಲ್ಲಿದ್ದ ಸಮಯವನ್ನು ಬಳಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಜೀವನ್ ಭೀಮಾ ನಗರ ಪೊಲೀಸರು ಮಾಲೀಕ ಶ್ರೀನಿವಾಸ್, ಭುವನ್ ಸೇರಿದಂತೆ ಮೂವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ. ಹಲ್ಲೆಗೊಳಗಾದ ಮೋಹನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us