ಬೆಂಗಳೂರು, ಏಪ್ರಿಲ್ 5: ಒಂದು ಕಾಲದಲ್ಲಿ ಆಹ್ಲಾದಕರ ವಾತಾವರಣ ಹಾಗೂ ಹವಾಮಾನದಿಂದಲೇ ಹೆಸರುವಾಸಿಯಾಗಿದ್ದ ಬೆಂಗಳೂರು (Bengaluru) ನಗರ ಈಗ ಬಿಸಿಲಿನ ಝಳಕ್ಕೆ ಬಾಡಿಹೋಗಿದೆ! ಈ ವರ್ಷ ಗರಿಷ್ಠ ತಾಪಮಾನದಲ್ಲಿ ಮುಂಬೈ ಹಾಗೂ ದೆಹಲಿಯನ್ನೂ ಮೀರಿಸುವುದು ಸನ್ನಿಹಿತವಾಗಿದೆ. ಕಳೆದ ಐದು ವರ್ಷಗಳಲ್ಲೇ ಗರಿಷ್ಠ ತಾಪಮಾನ (Maximum Temperature) ಬೆಂಗಳೂರಿನಲ್ಲಿ ಈ ವರ್ಷ ದಾಖಲಾಗಿದೆ. ಜತೆಗೆ, ದಶಕಗಳಲ್ಲೇ ಭೀಕರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ಮಂಗಳವಾರ ಬೆಂಗಳೂರಿನ ಶಾಪಮಾನವು 37.2 ಡಿಗ್ರಿ ಸೆಲ್ಸಿಯಸ್ಗೆ ಏರಿತು. ಇದು ಸುಮಾರು ಹತ್ತು ವರ್ಷಗಳಲ್ಲಿ ಎರಡನೇ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾದ ದಿನವಾಗಿದೆ.
ಈ ಬೇಸಿಗೆಯಲ್ಲಿ ಕರ್ನಾಟಕದ ಉತ್ತರ ಭಾಗಗಳು ಉಷ್ಣಮಾರುತದ ಪ್ರಭಾವವನ್ನು ಮೊದಲು ಅನುಭವಿಸಿದರೆ, ಬೆಂಗಳೂರು ಸೇರಿದಂತ ಇಡೀ ರಾಜ್ಯವು ಈಗ ತಾಪಮಾನದ ಮಟ್ಟದಲ್ಲಿ ನಿರಂತರ ಏರಿಕೆಯನ್ನು ಅನುಭವಿಸುತ್ತಿದೆ. ಮುಂದಿನ ಕೆಲವು ದಿನಗಳವರೆಗೆ (ಏಪ್ರಿಲ್ 4-7) ನಗರದ ಹಗಲಿನ ತಾಪಮಾನವು ಸುಮಾರು 37 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಇದು ಮುಂಬೈಗಿಂತಲೂ ಹೆಚ್ಚಿನ ಗರಿಷ್ಠ ಉಷ್ಣಾಂಶವಾಗಿದೆ. ಜತೆಗೆ ನವದೆಹಲಿಯ ಶಾಖವನ್ನೂ ಮೀರಿಸಿದ್ದಾಗಿದೆ.
ರಾತ್ರಿಯ ವೇಳೆ ತುಸು ಉಷ್ಣಾಂಶ ಕಡಿಮೆಯಾದರೂ ಸುಮಾರು 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ಬೆಂಗಳೂರಿನ ಹಗಲಿನ ತಾಪಮಾನವು ಈಗ ಬೇಸಿಗೆಯಲ್ಲಿ ಚೆನ್ನೈಯ ತಾಪಮಾನಕ್ಕೆ ಹೊಂದಿಕೆಯಾಗುವಂತಾಗಿದೆ. ಎತನ್ಮಧ್ಯೆ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಂತಹ ನಗರಗಳು 40 ಡಿಗ್ರಿ ಸೆಲ್ಸಿಯಸ್ ಗಡಿಯ ದಾಟುವ ಹಾದಿಯಲ್ಲಿವೆ. ಹೈದರಾಬಾದ್ ಈಗಾಗಲೇ ಈ ಮಿತಿಯನ್ನು ದಾಟಿದೆ.
ಉತ್ತರದ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ ಮತ್ತು ವಿಜಯಪುರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಶಾಖದ ವರಿಸ್ಥಿತಿಯು ಕಡಿಮೆ ಇದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ತಾನಮಾನವು 40-42 ಡಿಗ್ರಿ ಸೆಲ್ಸಿಯಸ್ಗೆ ತಲುಪುವ ಸಾಧ್ಯತೆ ಇದೆ. ಗುರುವಾರದ (ಏಪ್ರಿಲ್ 4-5) ವರೆಗೆ ಬಾಗಲಕೋಟೆ ಮತ್ತು ವಿಜಯಪುರ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಉಷ್ಣ ಮಾರುತದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ.
ಇದನ್ನೂ ಓದಿ: ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಏಪ್ರಿಲ್ 8ರ ಬಳಿಕ ಮಳೆ
ಶನಿವಾರದಿಂದ ಮಂಗಳವಾರದವರೆಗೆ (ಏಪ್ರಿಲ್ 6-10) ಬೆಂಗಳೂರನ್ನು ಒಳಗೊಂಡಂತೆ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Fri, 5 April 24