ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸಾವು, ಮಗ ಬದುಕಿದ್ದೇ ಪವಾಡ!

ಬೆಂಗಳೂರಿನ ಆಡುಗೋಡಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ 49 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಅವರ ಮಗ ಪವಾಡ ಸದೃಶವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಅಪಘಾತಕ್ಕೆ ರಸ್ತೆ ಗುಂಡಿ ಅಥವಾ ಚಾಲಕನ ನಿರ್ಲಕ್ಷ್ಯ ಕಾರಣವೇ ಎಂಬ ಬಗ್ಗೆ ವಿವಾದವಿದ್ದು, ಘಟನೆ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸಾವು, ಮಗ ಬದುಕಿದ್ದೇ ಪವಾಡ!
ಮೃತ ಮಹಿಳೆ ಅಮಲಾ
Image Credit source: Tv9 Kannada

Updated on: Feb 16, 2026 | 2:44 PM

ಬೆಂಗಳೂರು, ಫೆಬ್ರವರಿ 16: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಅಮಲಾ(49) ಮೃತ ದುರ್ದೈವಿಯಾಗಿದ್ದು, ಆಡುಗೋಡಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಅಪಘಾತ ನಡೆದಿತ್ತು. ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಅಮಲಾ ರಸ್ತೆಗೆ ಬಿದ್ದಿದ್ದರು. ಈ ವೇಳೆ ಅವರ ದೇಹದ ಮೇಲೆ ಟಿಪ್ಪರ್​​ ಹರಿದ ಕಾರಣ ಅವರ ಎರಡೂ ಕಾಲುಗಳು ಛಿದ್ರಗೊಂಡಿದ್ದವು. ಗಾಯಾಳುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಅಸಲಿ ಕಾರಣ ಏನು?

ಇನ್ನು ಅಪಘಾತದ ಕಾರಣದ ಬಗ್ಗೆಯೂ ಚರ್ಚೆ ಶುರುವಾಗಿದೆ. ರಸ್ತೆ ಗುಂಡಿಯಿಂದಲೇ ಅವಾಂತರ ಎಂದು‌ ಸ್ಥಳೀಯರು ಆರೋಪಿಸುತ್ತಿದ್ದರೆ, ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಟಿಪ್ಪರ್ ಚಾಲಕನ ವಿರುದ್ಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ನಮಾಜ್ ವೇಳೆ ಶಾಂತಿ ಇರಬೇಕಾದ ಮಸೀದಿಯೊಳಗೇ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ

ಅಪಘಾತದ ಬಳಿಕ ಟಿಪ್ಪರ್​​ ಚಾಲಕ ಪರಾರಿ

ಅಪಘಾತದ ಬಗ್ಗೆ ಮೃತ ಅಮಲಾರ ಸಹೋದರ ಪ್ರತಿಕ್ರಿಯೆ ನೀಡಿದ್ದು, ಚರ್ಚ್​​ಗೆ ಹೋಗಿ ದ್ವಿಚಕ್ರ ವಾಹನದಲ್ಲಿ ಆಕೆ ಮಗನ ಜೊತೆ ಹಿಂತಿರುಗುತ್ತಿದ್ದಾಗ ಆಡುಗೋಡಿಯ ಬಾಷ್ ಕಂಪನಿ ಮುಂದೆ ಅಪಘಾತ ನಡೆದಿದೆ. ಎದುರಿಗೆ ಆಟೋ ಬಂದ ಹಿನ್ನೆಲೆ ಅಮಲಾ ಬ್ರೇಕ್​​ ಹಾಕಿದ್ದು, ಈ ವೇಲೆ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್​​ ಇವರ ದ್ವಿಚಕ್ರ ವಾಹನದ ಮೇಲೆ ಹರಿದಿದೆ. ಬೆಳಿಗ್ಗೆ 11 ಗಂಟೆ ವೇಳೆಗೆ ನಡೆದ ಈ ಅಪಘಾತದಲ್ಲಿ ಅಮಲಾ ಗಂಭೀರ ಗಾಯಗೊಂಡಿದ್ದರೆ, ಆಕೆಯ ಮಗನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ಟಿಪ್ಪರ್​​ ಚಾಲಕ ಪರಾರಿಯಾಗಿದ್ದು, ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ವರದಿ: ನಟರಾಜ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.