ಇದು ದ್ವಿಚಕ್ರ ವಾಹನ ಸವಾರರು ಓದಲೇ ಬೇಕಾದ ಸ್ಟೋರಿ: ಬೆಚ್ಚಿ ಬೀಳಿಸುವಂತಿದೆ ನಿಮ್ಹಾನ್ಸ್ ವರದಿ!
ದ್ವಿಚಕ್ರ ವಾಹನ ಸವಾರರಿಗೆ ಬೆಚ್ಚಿಬೀಳಿಸುವ ಸುದ್ದಿಯಿದು! ನಿಮ್ಹಾನ್ಸ್ ವರದಿಯ ಪ್ರಕಾರ, ಸಂಭವಿಸುವ ಬಹುತೇಕ ದ್ವಿಚಕ್ರ ವಾಹನ ಅಪಘಾತಗಳು ಗಂಭೀರ ಮೆದುಳಿನ ಗಾಯಕ್ಕೆ ಕಾರಣವಾಗುತ್ತವೆ. ಹೆಲ್ಮೆಟ್ ಧರಿಸದಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದ್ದು, ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆಯೂ ಸಿಗದ ಕಾರಣ ಸಾವುಗಳು ಸಂಭವಿಸುತ್ತಿವೆ. ಅಪಘಾತಗಳಲ್ಲಿ ಬದುಕುಳಿದವರೂ ಕೆಲವರು ಕೆಲಸಕ್ಕೆ ಮರಳಲು ಅಸಮರ್ಥರಾಗುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಜನವರಿ 26: ನಗರಗಳಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಅಪಘಾತಗಳು ಮಾಮೂಲು ಎಂಬಂತಾಗಿದೆ. ಈ ಪೈಕಿ ಬೈಕ್ ಅಪಘಾತಗಳ ಸಂದರ್ಭ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರುವವರ ಬಗ್ಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಅಧ್ಯಯನವೊಂದು ನಡೆಸಿದ್ದು, ಈ ಅಂಕಿ ಅಂಶಗಳು ಬೆಚ್ಚಿಬೀಳಿಸುವಂತಿವೆ. ಸರಿಯಾಗಿ ಹೆಲ್ಮೆಟ್ ಧರಿಸದೇ ಇರುವುದು, ಅಥವಾ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ಚಾಲನೆ ವೇಳೆ ನಡೆಯುವ ಅಪಘಾತಗಳು ಮೆದುಳಿನ ಗಾಯಕ್ಕೆ ಕಾರಣವಾಗುತ್ತಿವೆ. 2025ರಲ್ಲಿ ಚಿಕಿತ್ಸೆ ಪಡೆದ 1,500 ಮೆದುಳಿನ ಗಾಯ ಪ್ರಕರಣಗಳ ಸಮಗ್ರ ಅಧ್ಯಯನ ನಡೆಸಿರುವ ನಿಮ್ಹಾನ್ಸ್ನ ನರಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರೊಬ್ಬರು ಅಚ್ಚರಿಯ ವಿಷಯವನ್ನು ತೆರೆದಿಟ್ಟಿದ್ದಾರೆ.
ಗೋಲ್ಡನ್ ಅವರ್‌ನಲ್ಲಿ ಸಿಗ್ತಿಲ್ಲ ಚಿಕಿತ್ಸೆ
ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದ ಮೆದುಳಿನ ಗಾಯ ಪ್ರಕರಣಗಳಲ್ಲಿ ರಸ್ತೆ ಅಪಘಾತಗಳೇ ಶೇ.65ರಷ್ಟಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಡೆದ ಅಪಘಾತಗಳನ್ನು ಈ ಸಂಖ್ಯೆ ಒಳಗೊಂಡಿದೆ. ಈ ಪೈಕಿ ಶೇ.80ರಷ್ಟು ಕೇಸ್ಗಳು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದವು. ಹತ್ತು ಮಂದಿಯಲ್ಲಿ ಎಂಟು ಮಂದಿ ರೋಗಿಗಳು ಪುರುಷರಾಗಿದ್ದು, ಬಹುತೇಕರು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೇರಿದವರು ಎನ್ನುವುದಿಲ್ಲಿ ಗಮನಾರ್ಹ. ಇನ್ನು ಆತಂಕಕಾರಿ ಸಂಗತಿಯೆಂದರೆ, ಅಪಘಾತದ ಬಳಿಕ ಗಾಯಾಳುಗಳಿಗೆ ವೈದ್ಯಕೀಯ ನೆರವು ಸಿಗುವುದು ಕೂಡ ವಿಳಂಬವಾಗುತ್ತಿದೆ. ಗಾಯಗೊಂಡವರು ಯಾವುದೇ ರೀತಿಯ ಚಿಕಿತ್ಸೆಗೆ ಪಡೆಯಲು ಐದು ಕಿಲೋಮೀಟರ್ ಸರಾಸರಿ ಪ್ರಯಾಣ ಮಾಡಬೇಕಾಗುತ್ತದೆ. ಇದು ಗಾಯದ ನಂತರದ ಅತ್ಯಂತ ಮಹತ್ವದ ‘ಗೋಲ್ಡನ್ ಅವರ್’ ಕಳೆದುಕೊಳ್ಳುವಷ್ಟು ಸಮಯವಾಗಿದೆ. ಕೇವಲ ಹತ್ತು ಮಂದಿಯಲ್ಲಿ ನಾಲ್ಕು ಮಂದಿ ಮಾತ್ರ ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆ ಕೇಂದ್ರವನ್ನು ತಲುಪುತ್ತಾರೆ. ಉಳಿದವರು ಖಾಸಗಿ ಅಥವಾ ಬಾಡಿಗೆ ವಾಹನಗಳಲ್ಲಿ ಪ್ರಯಾಣಿಸಬೇಕಾದ ಸ್ಥಿತಿ ಇದೆ.
ಇದನ್ನೂ ಓದಿ: ಔಷಧಿಗಳ ಬಳಕೆಗೆ ಹೊಸ ರೂಲ್ಸ್; ನಕಲಿ ಹಾವಳಿಗೆ ಬೀಳುತ್ತಾ ಬ್ರೇಕ್?
ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಅಲೆಯಬೇಕು!
ಇನ್ನು ಗಾಯಾಳುಗಳನ್ನು ಕರೆದೊಯ್ಯುವ ಮೊದಲ ಆಸ್ಪತ್ರೆಯಲ್ಲಿಯೇ ಅಗತ್ಯ ಚಿಕಿತ್ಸೆ ಸಿಗುವ ಸಾಧ್ಯತೆಯೂ ಬಹಳ ವಿರಳವಾಗಿದೆ. ಅನೇಕ ಆಸ್ಪತ್ರೆಗಳಲ್ಲಿ ಟ್ರಾಮಾ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸೌಲಭ್ಯಗಳಿಲ್ಲ. ಇಲ್ಲವೇ ರಸ್ತೆ ಅಪಘಾತ ಪ್ರಕರಣಗಳನ್ನು ದಾಖಲಿಸಲು ಹಿಂಜರಿಯುತ್ತಾರೆ. ಹೀಗಾಗಿ ನಿಮ್ಹಾನ್ಸ್‌ನಂತಹ ವಿಶೇಷ ಆಸ್ಪತ್ರೆಗಳಿಗೆ ತಲುಪುವ ಮೊದಲು ಬಹುತೇಕ ರೋಗಿಗಳು ಎರಡು ಅಥವಾ ಅದಕ್ಕಿಂತ ಹೆಚ್ಚು ಆಸ್ಪತ್ರೆಗಳಿಗೆ ಅಲೆದಾಡಿರುತ್ತಾರೆ. ನಿಮ್ಹಾನ್ಸ್‌ಗೆ ಬರುವ ಶೇ.20ರಷ್ಟು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ. ನಿಮ್ಹಾನ್ಸ್‌ಗೆ ತಲುಪುವ ಹತ್ತು ಮಂದಿಯಲ್ಲಿ ಒಂಬತ್ತು ಮಂದಿ ಜೀವ ಉಳಿಸಿಕೊಳ್ಳುತ್ತಾರೆ. ಆದರೆ ಬದುಕುಳಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಮೂರು ತಿಂಗಳ ನಂತರವೂ ಕೆಲಸಕ್ಕೆ ಮರಳಲು ಅಸಮರ್ಥರಾಗುತ್ತಾರೆ ಎಂದು ಅಧ್ಯಯನ ತಿಳಿಸಿದೆ.
ಏನು ಮಾಡಬಹುದು?
ಅಪಘಾತದ ವೇಳೆ ಮೆದುಳು ಗಾಯದಿಂದ ಬಚಾವ್ ಆಗಲು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆ ಏಕೈಕ ಆಯ್ಕೆಯಾಗಿದೆ. ಅಂಕಿ-ಅಂಶದ ಪ್ರಕಾರ ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ಸವಾರರಲ್ಲಿ ಕೇವಲ ಶೇ.23ರಷ್ಟು ಜನ ಮಾತ್ರ ಸರಿಯಾದ ಹೆಲ್ಮೆಟ್ ಧರಿಸಿದ್ದರೆ, ಶೇ.33ರಷ್ಟು ಮಂದಿ ಧರಿಸಿದ್ದಿದ್ದು ಹಾಫ್ ಹೆಲ್ಮೆಟ್. ಇನ್ನು ತಜ್ಞರ ಪ್ರಕಾರ ಅಪಘಾತಗಳು ನಡೆದಾಗ ತಕ್ಷಣದ ಕ್ಷಣಗಳು ಅತ್ಯಂತ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ. ಹೆಚ್ಚಾಗಿ ಅಪಘಾತ ನಡೆಯುವ ಸ್ಥಳಗಳಲ್ಲಿ ತರಬೇತಿ ಪಡೆದ ಸಿಬ್ಬಂದಿಯೊಂದಿಗೆ ಕ್ರಿಟಿಕಲ್ ಕೇರ್ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸುವುದು ಅತ್ಯಂತ ಅಗತ್ಯವಾಗಿದೆ. ಆಸ್ಪತ್ರೆ ವ್ಯವಸ್ಥೆಯಲ್ಲಿಯೂ ಹೆಚ್ಚಿನ ಸುಧಾರಣೆ ಆಗಬೇಕಿದೆ. ಅತ್ಯಂತ ಮುಖ್ಯವಾಗಿ, ಸರ್ಕಾರವು ಆಸ್ಪತ್ರೆಗಳಲ್ಲಿ ಟ್ರಾಮಾ ಪ್ರಕರಣಗಳನ್ನು ಕಡ್ಡಾಯವಾಗಿ ದಾಖಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಮತ್ತು ನಿರ್ಣಾಯಕ ಅವಧಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಹೀಗಾದಾಗ ಅಪಘಾತಗಳ ಸಂದರ್ಭ ನೆರವಿಗೆ ಬರಲು ಸಾರ್ವಜನಿಕರಿಗೂ ಪ್ರೇರಣೆ ನೀಡಿದಂತಾಗುತ್ತದೆ ಎಂದು ಅಧ್ಯಯನ ಹೇಳಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:03 pm, Mon, 26 January 26
