ಔಷಧಿಗಳ ಬಳಕೆಗೆ ಹೊಸ ರೂಲ್ಸ್: ನಕಲಿ ಹಾವಳಿಗೆ ಬೀಳುತ್ತಾ ಬ್ರೇಕ್?
ಫೇಕ್ ಮೆಡಿಸಿನ್‌ಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಔಷಧಗಳ ಬಳಕೆಯಲ್ಲಿ ಬದಲಾವಣೆ ತರಲಾಗುತ್ತಿದೆ. ಆ ಮೂಲಕ ನಕಲಿ ಔಷಧಿಗಳಿಗೆ ಕಡಿವಾಣ ಹಾಕುವುದರ ಜೊತೆಗೆ ರೋಗಿಗಳಿಗೆ ಔಷಧದ ಬಗ್ಗೆ ನಂಬಿಕೆ ಮತ್ತು ಸುರಕ್ಷತೆ ಸಿಗಲಿದೆ.

ಬೆಂಗಳೂರು, ಜನವರಿ 22: ಸದ್ಯ ದಿನಮಾನಗಳಲ್ಲಿ ಯಾವುದೇ ವಸ್ತು ತೆಗೆದುಕೊಂಡರು ಅದರಲ್ಲಿ ನಕಲಿ ಎನ್ನುವುದು ಇರುತ್ತೆ. ಅದರಲ್ಲೂ ಫಾರ್ಮಸಿ ಕ್ಷೇತ್ರದಲ್ಲಂತೂ ಫೇಕ್ ಔಷಧಿಗಳ (Medicines) ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಯಾವಾಗ ಬೀಳುತ್ತೆ ಎನ್ನುತ್ತಿರುವ ರೋಗಿಗಳಿಗೆ ಇದೀಗ ಆರೋಗ್ಯ ಇಲಾಖೆ (health department) ಗುಡ್ ನ್ಯೂಸ್ ಕೊಟ್ಟಿದೆ. ಔಷಧಿಗಳ ಬಳಕೆಯಲ್ಲಿ ಬದಲಾವಣೆ ತರುವುದಕ್ಕೆ ಮುಂದಾಗಿದೆ.
ಔಷಧಗಳ ಬಳಕೆಯಲ್ಲಿ ಅನೇಕ ಬದಲಾವಣೆ
ಮೆಡಿಕಲ್ ಫೀಲ್ಡ್‌ನಲ್ಲಿ ಫೇಕ್ ಹಾಗೂ ಕಳಪೆ ಗುಣಮಟ್ಟದ ಔಷಧಿಗಳ ಉತ್ಪಾದನೆ ಹಾಗೂ ಮಾರಾಟದ ಪ್ರಕರಣಗಳು ಹೆಚ್ಚಾಗಿವೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಫೇಕ್ ಹಾಗೂ ಕಳಪೆ ಗುಣಮಟ್ಟದ ಔಷಧಗಳನ್ನ ಪತ್ತೆ ಹಚ್ಚಿ ಅವುಗಳ ಬ್ಯಾಚ್ ನಂಬರ್ ಸಹಿತವಾಗಿ ಬ್ಯಾನ್ ಮಾಡಲಾಗುತ್ತಿದ್ದರೂ ಹೊಸ ಫೇಕ್ ಔಷಧಗಳು ತಲೆ ಎತ್ತುತ್ತಲಿವೆ. ಈ ಬೆನ್ನಲ್ಲೇ ಇದೀಗ ಮತ್ತಷ್ಟು ಔಷಧಗಳ ಬಳಕೆಯಲ್ಲಿ ಅನೇಕ ಬದಲಾವಣೆ ತರುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ಹೃದ್ರೋಗಿಗಳಿಗೆ ಶುಭ ಸುದ್ದಿ: ಜಿಬಿಎ 5 ಕಾರ್ಪೊರೇಷನ್ಗಳಲ್ಲಿ ಸ್ಥಾಪನೆಯಾಗಲಿದೆ ಜಯದೇವ ಆಸ್ಪತ್ರೆ ಸ್ಯಾಟಲೈಟ್ ಘಟಕ
ಫೇಕ್ ಔಷಧಗಳನ್ನ ಪತ್ತೆ ಹಚ್ಚಲು ಕ್ಯೂಆರ್ ಕೋಡ್ ಮೊರೆ ಹೋಗುತ್ತಿದೆ. ಆರೋಗ್ಯ ಇಲಾಖೆ ನಕಲಿ ಔಷಧಿಗಳ ಪತ್ತೆಹಚ್ಚಲು ಹಾಗೂ ಬ್ರೇಕ್ ಹಾಕಲು ನಯಾ ಪ್ಲಾನ್ ಮಾಡಿದೆ. ಔಷಧಗಳ ಪ್ಯಾಕ್ ಮೇಲೆ ಬಾರ್‌ಕೋಡ್ ಮತ್ತು ಕ್ಯೂಆರ್ ಕೋಡ್‌ಗಳನ್ನು ಮುದ್ರಿಸಲು ಮುಂದಾಗಿದೆ. ಆ ಮೂಲಕ ಟ್ರ್ಯಾಕ್ ಮತ್ತು ಟ್ರೇಸ್ ಮಾಡಲು ಮುಂದಾಗಿದೆ. ಔಷಧಿಗಳನ್ನು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯಾಪ್ತಿಯಲ್ಲಿ ತಂದು ನಕಲಿ ಔಷಧಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ್ತಿದ್ದಂತೆಯೇ ಔಷಧಿಗಳ ಬ್ಯಾಚ್, ಇದು ಯಾವಾಗ ತಯಾರಿಸಿದ್ದು, ಯಾವ ಕಂಪನಿ, ಇದರಲ್ಲಿ ಬಳಕೆ ಮಾಡಿರುವ ವಸ್ತುಗಳು ಎಷ್ಟು ಪ್ರಮಾಣದಲ್ಲಿದೆ ಹಾಗೂ ಎಕ್ಸ್ಪೆರಿ ಡೇಟ್ ಮತ್ತು ಇದರ ಬಳಕೆಯ ಉಪಯೋಗಗಳು ಹಾಗೂ ಸೈಡ್ ಎಫೆಕ್ಟ್ ಏನಿದೆ ಎಂಬುದನ್ನ ಸಂಪೂರ್ಣವಾಗಿ ಮಾಹಿತಿ ದೊರೆಯುತ್ತದೆ.
ಫಾರ್ಮಾ ಕ್ಷೇತ್ರಕ್ಕೆ ಕೋಡಿಂಗ್ ವ್ಯವಸ್ಥೆ
ಅಷ್ಟೇ ಅಲ್ಲದೆ ಪ್ರತಿ ಔಷಧಗಳಿಗೂ ಬಾರ್ ಕೋಡ್ ಹಾಕುವುದರಿಂದ ಪ್ರತಿಯೊಬ್ಬರು ಸುಲಭವಾಗಿ ಔಷಧಗಳ ಉತ್ಪಾದಕ ಕಂಪನಿಯ ಮಾಹಿತಿ ಪಡೆಯಬಹುದಾಗಿದೆ. ಪ್ರಾರಂಭ ಹಂತದಲ್ಲಿ ಔಷಧಿಗಳಿಗೆ ಕ್ಯೂಆರ್ ಕೋಡ್ ಬಳಸಿ ನಂತರ ಇಡೀ ಫಾರ್ಮಾ ಕ್ಷೇತ್ರಕ್ಕೆ ಕೋಡಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಯಿಂದ ಈ ಬಗ್ಗೆ ಮಾಹಿತಿಯನ್ನ ಕೂಡ ಪಡೆಯಲು ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್ ಶಾಕ್: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ
ಒಟ್ಟಿನಲ್ಲಿ ನಕಲಿ ಔಷಧಿಗಳಿಗೆ ಕಡಿವಾಣ ಹಾಕುವುದಕ್ಕೆ ಇಲಾಖೆ ಹೊಸ ಮಾದರಿಯ ರೂಲ್ಸ್ ಜಾರಿಗೆ ತರುತ್ತಿದ್ದು, ಇನ್ಮುಂದೆ ಔಷಧಿಗಳ ಸಂಪೂರ್ಣ ಮಾಹಿತಿಯನ್ನ ರೋಗಿಗಳೇ ಪಡೆಯಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.