ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ: ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿ ವಯೋಮಿತಿ ಸಡಿಲಿಕೆ!
ಕರ್ನಾಟಕ ಸಚಿವ ಸಂಪುಟವು ಸಿವಿಲ್ ಸೇವಾ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಗೆ ಅನುಮೋದನೆ ನೀಡಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷಗಳ ಹೆಚ್ಚುವರಿ ವಯೋಮಿತಿ ನೀಡಲಾಗಿದೆ. ಸಾಮಾನ್ಯ ವರ್ಗಕ್ಕೆ 35 ಮತ್ತು ಎಸ್‌ಸಿ, ಎಸ್‌ಟಿ ವರ್ಗಕ್ಕೆ 38 ಇದ್ದ ವಯೋಮಿತಿಗೆ 5 ವರ್ಷ ಸೇರಿಸಲಾಗಿದೆ. ಈ ಸಡಿಲಿಕೆಯು 2027ರ ಡಿಸೆಂಬರ್ 31ವರೆಗೆ ಜಾರಿಯಲ್ಲಿರಲಿದೆ.
ಬೆಂಗಳೂರು, ಜನವರಿ 23: ಕರ್ನಾಟಕ ಸಚಿವ ಸಂಪುಟವು ರಾಜ್ಯದ ಸಿವಿಲ್ ಸೇವಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಕೊಡುಗೆ ನೀಡಿದೆ. ವಯೋಮಿತಿ ಸಡಿಲಿಕೆಗೆ ಅನುಮೋದನೆ ನೀಡಿದೆ. ಈ ನಿರ್ಧಾರದ ಮೂಲಕ, ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷಗಳ ಹೆಚ್ಚುವರಿ ವಯೋಮಿತಿ ಸೌಲಭ್ಯವನ್ನು ನೀಡಲಾಗಿದೆ. ಇದು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ.
ಈ ಹಿಂದೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳ ವಯೋಮಿತಿ ಇದ್ದು, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳ ಗರಿಷ್ಠ ವಯೋಮಿತಿ ಇತ್ತು. ಹೊಸ ಆದೇಶದ ಪ್ರಕಾರ, ಈ ಎಲ್ಲಾ ವರ್ಗದ ವಯೋಮಿತಿಗಳಿಗೆ ಐದು ವರ್ಷಗಳನ್ನು ಸೇರ್ಪಡೆ ಮಾಡಲಾಗಿದೆ. ಅಂದರೆ, ಸಾಮಾನ್ಯ ವರ್ಗಕ್ಕೆ ಈಗ 40 ವರ್ಷ ಮತ್ತು ಎಸ್‌ಸಿ, ಎಸ್‌ಟಿ ವರ್ಗಕ್ಕೆ 43 ವರ್ಷ ಗರಿಷ್ಠ ವಯೋಮಿತಿ ಆಗಲಿದೆ.
ಈ ವಯೋಮಿತಿ ಸಡಿಲಿಕೆಯು 2027ರ ಡಿಸೆಂಬರ್ 31 ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಅವಧಿಯೊಳಗೆ ಎಷ್ಟು ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದು ಸದ್ಯದ ಪ್ರಮುಖ ಪ್ರಶ್ನೆಯಾಗಿದೆ.

