ಹೃದ್ರೋಗಿಗಳಿಗೆ ಶುಭ ಸುದ್ದಿ: ಜಿಬಿಎ 5 ಕಾರ್ಪೊರೇಷನ್ಗಳಲ್ಲಿ ಸ್ಥಾಪನೆಯಾಗಲಿದೆ ಜಯದೇವ ಆಸ್ಪತ್ರೆ ಸ್ಯಾಟಲೈಟ್ ಘಟಕ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಾಮಾನ್ಯವಾಗಿಬಿಟ್ಟಿದೆ. ವಯಸ್ಸು 20 ದಾಟಿರಲ್ಲ, ಆಗಲೇ ಕೆಲವರ ಹೃದಯಕ್ಕೆ ಸ್ಟೆಂಟ್ ಅಳವಡಿಸಿರಲಾಗುತ್ತದೆ. ಕಳೆದ 10 ವರ್ಷಗಳ ಪೈಕಿ ಕಳೆದ ಎರಡು ವರ್ಷಗಳಲ್ಲಿ ಹೃದಯಾಘಾತದ ಪ್ರಕರಣಗಳು ಸರಾಸರಿ ಶೇ 40 ರಷ್ಟು ಹೆಚ್ಚಳ ಕಂಡಿವೆ. ಯುವಕರಲ್ಲಿ ಹೃದಯಾಘಾತ ಏರಿಕೆ ಆಗುತ್ತಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬೆಂಗಳೂರಿನಲ್ಲಿ ಹೃದಯಘಾತದ ಸಾವು ತಡೆಯಲು ಹೊಸ ಯೋಜನೆಗೆ ಮುಂದಾಗಿದೆ.

ಬೆಂಗಳೂರು, ಜನವರಿ 13: ಈ ಹಿಂದೆ 40 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ (Heart Attack) ಸಂಭವಿಸುತ್ತಿತ್ತು. ಆದರೆ ಈಗ ಯುವ ಸಮೂಹವನ್ನೇ ಹೃದಯಾಘಾತ ಕಾಡಲಾರಂಭಿಸಿದೆ. ಯುವಕರಲ್ಲಿ ಹೆಚ್ಚು ಹೃದಯಾಘಾತ ಸಂಭವಿಸುತ್ತಿರುವ ಬಗ್ಗೆ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹೆಚ್ಚು ಹೃದಯಘಾತ ಹಿನ್ನಲೆ ಶಸ್ತ್ರಚಿಕಿತ್ಸೆಗೆ ಒಟಿಗಳ ಬೆಡ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಬೆಂಗಳೂರಿನಲ್ಲಿ 5 ಜಯದೇವ ಯೂನಿಟ್ ಶುರು ಮಾಡಲು ಮುಂದಾಗಿದೆ.
5 ಜಯದೇವ ಯೂನಿಟ್ ಶುರು ಮಾಡುವ ಬಗ್ಗೆ ಕ್ಯಾಬಿನೆಟ್ನಲ್ಲಿ ಪ್ರಸ್ತಾಪಿಸಿ ಅನುಮೋದನೆ ಪಡೆಯಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ. ಜಯದೇವದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸಾವಿರಕ್ಕಿಂತ ಕಡಿಮೆ ಇದ್ದ ವಾಕ್ ಇನ್ ರೋಗಿಗಳ ಸಂಖ್ಯೆ ಈಗ 2 ಸಾವಿರದ ಗಡಿದಾಟಿದೆ. ಹೀಗಾಗಿ ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರಿನ 5 ಕಾರ್ಪೊರೇಷನ್ಗಳಲ್ಲಿ ಜಯದೇವ ಸ್ಯಾಟಲೈಟ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆ ನೀಡಿದ್ದು ಈಗ ವೈದ್ಯಕೀಯ ಶಿಕ್ಷಣ ಇಲಾಖೆ ಇದಕ್ಕೆ ಸರ್ಕಾರದ ಹಂತದಲ್ಲಿ ಗ್ರೀನ್ ಸಿಗ್ನಲ್ ಪಡೆಯಲು ಮುಂದಾಗಿದೆ. ಜನಸಂಖ್ಯೆಗೆ ತಲಾ 100 ಹಾಸಿಗೆಗಳ ಸಾಮರ್ಥ್ಯದ ಐದು ಸ್ಯಾಟಲೈಟ್ ಕೇಂದ್ರಗಳನ್ನ ಶುರು ಮಾಡಲು ಮುಂದಾಗಿದೆ. ರಾಜ್ಯದ ಎಲ್ಲ ಜಿಲ್ಲ ಕೇಂದ್ರಗಳಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿ ಜಯದೇವ ಆಸ್ಪತ್ರೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಐದು ಕಾರ್ಪೊರೇಷನ್ಗಳಲ್ಲಿ ಪ್ರತಿಯೊಂದರಲ್ಲಿಯೂ ಒಂದು ಸ್ಯಾಟಲೈಟ್ ಕೇಂದ್ರ ಆರಂಭಕ್ಕೆ ಮುಂದಾಗಿದೆ.
ಇದನ್ನೂ ಓದಿ: ಹೃದಯ ಚೆನ್ನಾಗಿರಬೇಕು ಅಂದ್ರೆ ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ 3 ಆಹಾರಗಳನ್ನು ಸೇವಿಸಬೇಡಿ
ಒಟ್ಟಿನಲ್ಲಿ ರಾಜಧಾನಿಯಲ್ಲಿ ಇದೀಗ ಜಯದೇವ ಆಸ್ಪತ್ರೆ ಮೇಲೆ ಹೆಚ್ಚು ಒತ್ತಡದ ಜೊತೆಗೆ ಟ್ರಾಫಿಕ್ ಸಮಸ್ಯೆಯಿಂದ ಬೇಗ ಆಸ್ಪತ್ರೆ ತಲುಪಲು ಸಾಧ್ಯವಾಗದ ಹಿನ್ನಲೆ ಬೆಂಗಳೂರಿನಲ್ಲಿ 5 ಜಯದೇವ ಘಟಕ ಸ್ಥಾಪನೆಗೆ ಇಲಾಖೆ ಮುಂದಾಗಿದೆ. ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.