ನಾಯಕತ್ವ ಬದಲಾವಣೆ ಜಟಾಪಟಿ ಸಂಕ್ರಾಂತಿ ಬಳಿಕ ಮತ್ತಷ್ಟು ಚುರುಕು? ಸಿಕ್ತು ಮಹತ್ವದ ಸುಳಿವು
ಇನ್ನೊಂದು ದಿನ ಕಳೆದರೆ ಸಂಕ್ರಾಂತಿ. ಸೂರ್ಯ ಪಥ ಬದಲಿಸುವ ದಿನ. ಸೂರ್ಯನ ಪಥದಂತೆ ರಾಜ್ಯ ರಾಜಕಾರಣದ, ಅದರಲ್ಲೂ ಕಾಂಗ್ರೆಸ್ನ ಪಥವೂ ಬದಲಾಗುತ್ತಾ ಎಂಬ ಪ್ರಶ್ನೆ ಹುಟ್ಟಿದೆ. ನಾಯಕತ್ವ ಬದಲಾವಣೆ ವಿಚಾರವಾಗಿ ನಡೀತಿದ್ದ ಜಟಾಪಟಿಗೆ ಸಂಕ್ರಾಂತಿ ಬಳಿಕ ಮತ್ತಷ್ಟು ವೇಗ ಸಿಗುವ ಮುನ್ಸೂಚನೆಗಳಂತೂ ಸೋಮವಾರ ಸಿಕ್ಕಿವೆ! ಹೌದು, ಅದು ಏನೇನು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಜನವರಿ 13: ಸಂಕ್ರಾಂತಿ (Sankranti) ಸಮೀಪಿಸುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್ನಲ್ಲಿ (Congress) ಸಣ್ಣ ತರಂಗ ಶುರುವಾದಂತೆ ಕಾಣಿಸುತ್ತಿದೆ. ಇದಕ್ಕೆ ಉದಾಹರಣೆ ಎಂದರೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರು ಕೂಡ ಆಡುತ್ತಿರುವ ವಿಶ್ವಾಸದ ಮಾತು. ಸದ್ಯ ರಾಜ್ಯದ ನಾಯಕತ್ವ ಬದಲಾವಣೆ ತೀರ್ಮಾನದ ಚೆಂಡು ದೆಹಲಿಗೆ ಅಂಗಳದಲ್ಲಿದೆ. ಆದರೆ ಈವರೆಗೆ ವರಿಷ್ಠರು ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಿಲ್ಲ. ಬದಲಿಗೆ ನಮಗೆ ಬಿಡಿ ಎನ್ನುತ್ತಾ ಸಣ್ಣ ಗೆರೆಯನ್ನಷ್ಟೇ ಎಳೆದಿದ್ದಾರೆ. ಈ ಮಧ್ಯೆ ಚಟುವಟಿಕೆಗಳು ಗರಿಗೆದರುತ್ತಿವೆ.
ಹೈಕಮಾಂಡ್ ಮೇಲೆ ಡಿಕೆ ಶಿವಕುಮಾರ್ ಆತ್ಮವಿಶ್ವಾಸದ ಮಾತುಗಳನ್ನಾಡಿದ ಬೆನ್ನಲ್ಲೇ ಕಾಂಗ್ರೆಸ್ ಪಡಸಾಲೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸೋಮವಾರ ಬೆಳಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಆಗಿ ಸರಿಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಇದು ಪವರ್ ಪಾಲಿಟಿಕ್ಸ್ ಎಂಬುದರಲ್ಲಿ ಎರಡು ಮಾತಿಲ್ಲ. ಮುಖ್ಯಮಂತ್ರಿ ಕುರ್ಚಿ ಬಗ್ಗೆ ಯಾವುದೇ ಚರ್ಚೆ ನಡೆಯದೇ ಇದ್ದರೂ ಕೂಡ ಈ ಬೆಳವಣಿಗೆ ನಡೆದಿರುವುದು ಸಹಜವಾಗಿ ಕುತೂಹಲ ಕೆರಳುವಂತೆ ಮಾಡಿದೆ.
ಇನ್ನು ರಾಜ್ಯಕ್ಕೆ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭೇಟಿ ಕೊಡಲಿದ್ದಾರೆ ಎನ್ನಲಾಗಿದೆ. ಇಂತಹ ಹೊತ್ತಲ್ಲೇ ಡಿಕೆಶಿ, ಖರ್ಗೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಮನೆಯೊಳಗಿನ ಚರ್ಚೆ ಅಷ್ಟೆ ಅಲ್ಲದೆ, ಉಭಯ ನಾಯಕರು ಒಂದೇ ಕಾರಿನಲ್ಲಿ ಹೆಚ್ಎಎಲ್ಗೆ ತೆರಳಿದ್ದಾರೆ. ಇನ್ನು ಖರ್ಗೆಯನ್ನು ಡಿಕೆಶಿ ಭೇಟಿ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಒಂದೂವರೆ ತಿಂಗಳ ಅಂತರದಲ್ಲಿ ಮೂರು ಬಾರಿಗೆ ಎಐಸಿಸಿ ಅಧ್ಯಕ್ಷರ ಜೊತೆಗೆ ಚರ್ಚಿಸಿದ್ದಾರೆ. ಅದರಲ್ಲೂ ಎರಡು ಬಾರಿ ಅಂತೂ ಇನ್ನೇನು ಖರ್ಗೆ ದೆಹಲಿಗೆ ಹೋಗ್ತಾರೆಂಬ ಹೊತ್ತಲ್ಲೇ ಮುಖತಃ ಭೇಟಿ ಆಗಿರುವುದು ಯಾವುದರ ಸಂಕೇತ ಎಂಬ ಚರ್ಚೆ ಕಾಂಗ್ರೆಸ್ ಮನೆಯಲ್ಲಿ ಶುರುವಾಗಿದೆ.
ಸಂಕ್ರಾಂತಿ ಬಳಿಕ ದೆಹಲಿಗೆ ಡಿಕೆ ಶಿವಕುಮಾರ್
ಸದ್ಯ ಡಿಕೆ ಶಿವಕುಮಾರ್ರನ್ನು ಅಸ್ಸಾಂ ವಿಧಾನಸಭೆ ಚುನಾವಣೆ ವೀಕ್ಷಕರಾಗಿ ನೇಮಿಸಲಾಗಿದೆ. ಈ ಸಂಬಂಧ ಸಂಕ್ರಾಂತಿ ಬಳಿಕ, ಅಂದರೆ ಜನವರಿ 16 ರಂದು ಅವರು ದೆಹಲಿಗೆ ತೆರಳಲಿದ್ದಾರೆ. ಬೆಂಗಳೂರಿಗೆ ವಾಪಸ್ ಬಂದು 22 ರಂದು ಮತ್ತೆ ದೆಹಲಿಯ ವಿಮಾನ ಹತ್ತಲಿದ್ದಾರೆ. ಹೇಳಿಕೇಳಿ ಅಸ್ಸಾಂನ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವುದು ಪ್ರಿಯಾಂಕಾ ಗಾಂಧಿ. ಹೀಗಾಗಿ ದೆಹಲಿ ಭೇಟಿ ವೇಳೆ ಅಥವಾ ಭೇಟಿ ನಂತರ ಡಿಕೆ ಶಿವಕುಮಾರ್ ರಾಜ್ಯ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಬಹುದು ಎಂದು ಹೇಳಲಾಗುತ್ತಿದೆ.
ಇದರ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿಯೇ ಖರ್ಗೆಯನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರನ್ನ ದೆಹಲಿಗೆ ಕರೆಯುವ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅವಶ್ಯತೆ ಇದ್ದಾಗ ಕರೆಯುತ್ತೇವೆ ಎಂದಿದ್ದಾರೆ.
ಈ ಬೆಳವಣಿಗೆ ನಡುವೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಮೈಸೂರಿಗೆ ಆಗಮಿಸುತ್ತಿದ್ದಾರೆ. ಊಟಿಯಲ್ಲಿ ಖಾಸಗಿ ಕಾರ್ಯಕ್ರಮ ಇರುವ ಕಾರಣ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ರಾಹುಲ್ ಗಾಂಧಿಯನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಇಬ್ಬರೂ ಜತೆಯಾಗಿ ಬರಮಾಡಿಕೊಳ್ಳಲಿದ್ದಾರೆ.
ಸಂಕ್ರಾಂತಿ ಬಳಿಕ ಬಜೆಟ್ ಸಿದ್ಧತೆ ಆರಂಭಿಸಲು ಸಿಎಂ ಸಜ್ಜು!
ಇನ್ನು ತಾವೇ ಮುಂದುವರೆಯಬೇಕು ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ ಸಂಕ್ರಾಂತಿ ಬಳಿಕ ಬಜೆಟ್ ಮೀಟಿಂಗ್ ಆರಂಭಿಸಲಿದ್ದಾರೆ. ಸಂಪುಟ ಪುನಾರಚನೆ ಬಗ್ಗೆಯೂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಈ ಎರಡು ದಾಳ ಮೂಲಕ ನಾಯಕತ್ವ ಬದಲಾವಣೆ ವಿಷಯ ಅಂತ್ಯವಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಡಿಕೆ ಟೀಮ್ ಮಾತ್ರ ಪೂರ್ವಭಾವಿ ಸಭೆಗೂ ಮುನ್ನವೇ ಗೊಂದಲ ಬಗೆಹರಿಸಲು ಪಟ್ಟು ಹಿಡಿದಿದೆ ಎನ್ನಲಾಗ್ತಿದೆ.
ಒಂದೆಡೆ, ನಾಯಕತ್ವದ ಬದಲಾವಣೆಯ ಕುಲುಮೆ ನಿಧಾನಕ್ಕೆ ಕಾವೇರ ತೊಡಗಿದೆ. ಇಂಥಾ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಮತ್ತು ಡಿಸಿಎಂ ಬಗ್ಗೆ ಆಡಿರುವ ಮಾತು ಕುತೂಹಲವಾಗಿದೆ. ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಸೋಮವಾರ ನಡೆದ ವಿವಿಧ ಕಾಮಗಾರಿ ಉದ್ಘಾಟನೆ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸರ್ಕಾರಿ ಶಾಲೆಯಲ್ಲಿ ಓದಿ ಸಿದ್ದರಾಮಯ್ಯ 2 ಬಾರಿ ಸಿಎಂ ಆದರು. ಆದರೆ, ಡಿಕೆ ಶಿವಕುಮಾರ್ಗೆ ಕಾನ್ವೆಂಟ್ ಲಿಂಕ್ ಇದೆ ಎಂದಿದ್ದಾರೆ.
ಅದೇ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ, ನಾನು ಈ ಭಾಗದಲ್ಲೇ ಹುಟ್ಟಬೇಕಿತ್ತು ಅನ್ನಿಸುತ್ತಿದೆ. ಚುನಾವಣೆ ವೇಳೆ ಮಾತು ಕೊಟ್ಟಂತೆ ಋಣ ತೀರಿಸಲು ಬಂದಿದ್ದೇವೆ ಎಂದಿದ್ದಾರೆ. ಡಿಕೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿಸಿಎಂ ಹೇಳ್ತಾರೆ. ಆದರೆ ನೀವು ಇಲ್ಲಿ ಹುಟ್ಟೋದು ಬೇಡ, ನಾವು ಅಲ್ಲಿ ಹುಟ್ಟೋದು ಬೇಡ. ಮೈಸೂರು, ಬೆಂಗಳೂರಿನ ರೀತಿ ಅಭಿವೃದ್ಧಿ ಮಾಡಿ ಸಾಕು ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ನಡುವೆ ಹೊಸ ವಾರ್: ಗೆಲ್ಲೋದ್ಯಾರು?
ಹೀಗೆ ಮಲ್ಲಿಕಾರ್ಜುನ ಖರ್ಗೆ ಸ್ಥಳೀಯ ನಾಯಕರಾಗಿ ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಕೆಲಸ ಆಗಬೇಕು ಎಂದರೆ, ಎಐಸಿಸಿ ಅಧ್ಯಕ್ಷರಾಗಿ ಆಡಳಿತಕ್ಕೆ ಚುರುಕು ಮುಟ್ಟಿಸಿ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ಆದರೆ ಬದಲಾವಣೆ ಕ್ರಾಂತಿಯಲ್ಲೇ ನಾಯಕರು ಮುಳುಗಿರುವಾಗ, ಆಡಳಿತವನ್ನು ರಹದಾರಿಗೆ ತರಬೇಕಾದವರೇ ಗೊಂದಲದಲ್ಲಿರುವಾಗ, ಅದ್ಹೇಗೆ ತಾನೇ ಅಭಿವೃದ್ಧಿ ಸಾಧ್ಯ ಎಂಬ ಪ್ರಶ್ನೆಯೂ ಮೂಡಿದೆ.
