ಪತ್ನಿಗೆ ವಂಚಿಸಿ ಟೆಕ್ಕಿ ಪತಿ ಅಕ್ರಮ ಸಂಬಂಧ: ಪ್ರೇಯಸಿ ಜೊತೆ ಪಲ್ಲಂಗದಲ್ಲಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ!
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪತ್ನಿಗೆ ವಂಚಿಸಿ ಪ್ರೇಯಸಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಜೆಡ್ರೆಲಾ ಜಾಕೋಬ್ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪತ್ನಿ ನೀಡಿದ ದೂರಿನನ್ವಯ ಶೋಧ ನಡೆಸಿದ ಪೊಲೀಸರಿಗೆ ಜಾಕೋಬ್ ಪ್ರೇಯಸಿ ಜತೆ ಪಿಜಿಯೊಂದರಲ್ಲಿ ಸಿಕ್ಕಿಬಿದ್ದಿದ್ದಾನೆ. ಪತ್ನಿ ಮೇಲೆ ಜಾತಿನಿಂದನೆ ಮತ್ತು ಹಲ್ಲೆ ನಡೆಸಿ ಗರ್ಭಪಾತಕ್ಕೆ ಕಾರಣನಾಗಿದ್ದ ಆರೋಪಿ, ಪರಸ್ತ್ರೀಯೊಂದಿಗೆ ರೀಲ್ಸ್ ಕೂಡ ಮಾಡಿದ್ದ.

ಬೆಂಗಳೂರು, ಜನವರಿ 13: ಪತ್ನಿಗೆ ಮೋಸ ಮಾಡಿ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಪತಿಯನ್ನು ಬೆಂಗಳೂರು (Bangalore) ಪೊಲೀಸರು ಬಂಧಿಸಿದ್ದಾರೆ. ಪತ್ನಿಗೆ ಜಾತಿ ನಿಂದನೆ, ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಆರೋಪಿ ಟೆಕ್ಕಿ ಜೆಡ್ರೆಲಾ ಜಾಕೂಬ್ ಆರೂಪ್ನನ್ನು ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಜಾಕೂಬ್ ತನ್ನ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಪತ್ನಿ ಖಾಸಗಿ ಸಂಸ್ಥೆಯಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದರೆ, ಜಾಕೂಬ್‌ಗೆ ಉದ್ಯೋಗ ಇಲ್ಲದ ಹಿನ್ನೆಲೆಯಲ್ಲಿ ಪತ್ನಿ ತನ್ನ ಕೆಲಸವನ್ನೇ ಬಿಟ್ಟುಕೊಟ್ಟು, ಪತಿಗೆ ಉದ್ಯೋಗ ಸಿಗುವಂತೆ ಸಹಾಯ ಮಾಡಿದ್ದಳು ಎನ್ನಲಾಗಿದೆ.
ಮಗು ಜನಿಸಿದ ಬಳಿಕ ಪತ್ನಿಯ ಮೇಲೆ ಜಾಕೂಬ್ ಜಾತಿ ನಿಂದನೆ ನಡೆಸಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಗರ್ಭಪಾತವಾಗುವ ರೀತಿಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿದೆ.
ಮಗುವಾದ ಮೇಲೆ ಪತ್ನಿ ಬಿಟ್ಟು ಮತ್ತೊಬ್ಬ ಯುವತಿ ಜತೆ ಚಕ್ಕಂದ
ಈ ನಡುವೆ ಪತ್ನಿಗೆ ತಿಳಿಯದೆ ಜಾಕೂಬ್ ಮತ್ತೊಬ್ಬ ಯುವತಿಯೊಂದಿಗೆ ಸಹವಾಸ ಬೆಳೆಸಿ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದ. ಈ ವಿಚಾರ ತಿಳಿದ ಪತ್ನಿ, ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಬೆಂಗಳೂರಿನ ಡೆಂಟಲ್ ಕಾಲೇಜಿನ 6 ಉಪನ್ಯಾಸಕರು ಕೆಲಸದಿಂದ ವಜಾ
ಪಿಜಿಯಲ್ಲಿ ಯುವತಿ ಜತೆ ಪಲ್ಲಂಗದಲ್ಲಿದ್ದಾಗಲೇ ಪೊಲೀಸ್ ದಾಳಿ
ಪತ್ನಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಎಲೆಕ್ಟ್ರಾನಿಕ್ ಸಿಟಿಯ ಪಿಜಿಯೊಂದಕ್ಕೆ ದಾಳಿ ನಡೆಸಿದಾಗ, ಪ್ರೇಯಸಿಯೊಂದಿಗೆ ಪಲ್ಲಂಗದ ಮೇಲೆಯೇ ಇದ್ದ ಜಾಕೂಬ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 am, Tue, 13 January 26