ಬೆಂಗಳೂರು, ಡಿಸೆಂಬರ್ 10: ಬೆಂಗಳೂರು ಕಂಟೋನ್ಮೆಂಟ್ (BNC) ರೈಲು ನಿಲ್ದಾಣದ ಎರಡು ಪ್ಲಾಟ್ಫಾರ್ಮ್ಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 100 ವರ್ಷ ಇತಿಹಾಸ ಹೊಂದಿರುವ ಪ್ಲಾಟ್‌ಫಾರ್ಮ್ ಒಂದು ಮತ್ತು ಪ್ಲಾಟ್‌ಫಾರ್ಮ್ ಎರಡರ ನಡುವೆ ಇರುವ ಕಮಾನುಗಳನ್ನು ರೈಲ್ವೆ ಇಲಾಖೆ (Railway Department) ನೆಲಸಮ ಮಾಡಿದೆ. ಇದು ಪಾರಂಪರಿಕ ತಾಣಗಳ ಸಂರಕ್ಷಣಾ ಪ್ರೇಮಿಗಳಿಗೆ ಬೇಸರವಾಗಿದೆ.
ಕಮಾನುಗಳು ಶಿಥಿಲಗೊಂಡಿದ್ದು, ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇತ್ತು ಎಂಬ ಕಾರಣವನ್ನು ನೀಡಿ ರೈಲ್ವೆ ಇಲಾಖೆ ನೆಲಸಮ ಮಾಡಿದೆ. ಆದರೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಮಾನುಗಳನ್ನು ಉಳಿಸಿಕೊಳ್ಳಬೇಕಿತ್ತು ಎಂದು ಪಾರಂಪರಿಕ ತಾಣಗಳ ಸಂರಕ್ಷಣಾ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೂರು ವರ್ಷಗಳಷ್ಟು ಹಳೆಯದಾದ ರೈಲ್ವೆ ನಿಲ್ದಾಣದಲ್ಲಿ 480 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಾಮಗಾರಿಗೆ ಸಂಬಂಧಿಸಿದಂತೆ ನೈಋತ್ಯ ರೈಲ್ವೆ ವಲಯ ಕಳೆದ ವರ್ಷ ಬಿಡುಗಡೆಗೊಳಿಸಿದ್ದ ಅಧಿಕೃತ ಪ್ರಕಟಣೆಯಲ್ಲಿ ನಿಲ್ದಾಣದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲಾಗುವುದು ಎಂದು ಹೇಳಿತ್ತು. ಆದರೆ, ಇದೀಗ ತನ್ನ ಹೇಳಿಕೆಯ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗ: ಬೊಮ್ಮಸಂದ್ರ ನಿಲ್ದಾಣಕ್ಕೆ ತೈವಾನ್ ಕಂಪನಿಯ ಹೆಸರು! ಕಾರಣ ಇಲ್ಲಿದೆ
ಒಂದು ಶತಮಾನದಷ್ಟು ಹಳೆಯದಾದ ಪ್ಲಾಟ್‌ಫಾರ್ಮ್ ಒಂದು ಮತ್ತು ಪ್ಲಾಟ್‌ಫಾರ್ಮ್ ಎರಡರ ನಡುವಿನ ಕಮಾನುಗಳನ್ನು ನೆಲಸಮ ಮಾಡಿದ್ದಕ್ಕೆ, ಪಾರಂಪರಿಕ ಸ್ಥಳಗಳ ಸಂರಕ್ಷಣಾ ಸಮುದಾಯ ಬೇಸರ ವ್ಯಕ್ತಪಡಿಸಿದ್ದು, ರೈಲ್ವೆ ಇಲಾಖೆಗೆ ಪತ್ರ ಬರೆದಿದೆ. ಒಂದು ಶತಮಾನದಷ್ಟು ಹಳೆಯದಾದ ಕಮಾನುಗಳನ್ನು ನೆಲಸಮ ಮಾಡುವ ಮೊದಲು ಏಕೆ ನಮ್ಮೊಂದಿಗೆ ಸಮಾಲೋಚನೆ ನಡೆಸಲಿಲ್ಲ ಎಂದು ಪತ್ರದ ಮೂಲಕ ಪ್ರಶ್ನಿಸಿದ್ದಾರೆ.
ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಯೋಗೇಶ್ ಮೋಹನ್ ಮಾತನಾಡಿ, “ಕಮಾನುಗಳು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಮಯದಲ್ಲಿ ಪ್ರಯಾಣಿಕರ ಮೇಲೆ ಬೀಳುವ ಸಾಧ್ಯತೆಯಿದ್ದವು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಮಾನುಗಳನ್ನು ತೆರವುಗೊಳಿಸುವ ಅನಿವಾರ್ಯ ಸೃಷ್ಟಿಯಾಗಿತ್ತು. ಸುರಕ್ಷತಾ ಕ್ರಮದ ದೃಷ್ಟಿಯಿಂದ ಅವುಗಳನ್ನು ನೆಲಸಮ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಲಸ ಮಾಡಿದ್ದೇವೆ ಎಂದರು.
ಬೆಂಗಳೂರು ಕಂಟೋನ್ಮೆಂಟ್ ಅನ್ನು 1862ರಲ್ಲಿ ನಿರ್ಮಾಣ ಮಾಡಲಾಗಿದೆ. 162 ವರ್ಷಗಳ ಹಳೆಯದಾದ ರೈಲು ನಿಲ್ದಾಣದ ಜೋರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Tue, 10 December 24