
ಬೆಂಗಳೂರು, (ಆಗಸ್ಟ್ 06): ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಅನ್ನು(ambaari double decker buses) ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದು. ಹೌದು…ಪ್ರವಾಸೋದ್ಯಮ ಇಲಾಖೆಯ ಅಂಬಾರಿ ಡಬಲ್ ಡೆಕರ್ ಬಸ್‌ಗಳು ಇನ್ಮುಂದೆ ಬೆಂಗಳೂರು ನಗರದಲ್ಲಿ ಓಡಾಡಲು ಸೀಮಿತವಾಗಿರುವುದಿಲ್ಲ. ಬದಲಾಗಿ ಪ್ರಿ ವೆಡ್ಡಿಂಗ್ ಶೂಟ್, ಬರ್ತ್ ಡೇ ಸೆಲೆಬ್ರೆಶನ್ಗೆ ಬಸ್‌ಗಳು ಬಾಡಿಗೆಗೆ ಸಿಗಲಿವೆ.
2026ರ ಜನವರಿಯಲ್ಲಿ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ಪ್ರಾರಂಭಿಸಲಾಯಿತು. ಕೆಎಸ್‌ಟಿಡಿಸಿ (KSTDC) ನಿರ್ವಹಿಸುವ ಮೂರು ಬಸ್‌ಗಳು ಇದುವರೆಗೆ ಪ್ರವಾಸಿಗರಿಗೆ ನಗರ ಪರ್ಯಟನೆಯ ‘ಹಾಪ್-ಆನ್, ಹಾಪ್-ಆಫ್’ (Hop-on, Hop-off) ಸೇವೆಯನ್ನು ನೀಡುತ್ತಿದ್ದವು. ಇವು ರವೀಂದ್ರ ಕಲಾಕ್ಷೇತ್ರ, ಹಡ್ಸನ್ ಸರ್ಕಲ್, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಕಬ್ಬನ್ ರಸ್ತೆ, ವಿಧಾನ ಸೌಧ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಒಟ್ಟು 26 ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಸುತ್ತಿಬರುತ್ತವೆ.
ಇನ್ನು ಈ ಬಸ್ ಒಂದು ದಿನಕ್ಕೆ ವಾರದ ದಿನಗಳಲ್ಲಿ 32 ಸಾವಿರ ರೂಪಾಯಿ, ವಾರಾಂತ್ಯದಲ್ಲಿ 40 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇನ್ನು ಸಮಾರಂಭಗಳು ಮತ್ತು ಪಾರ್ಟಿಗಳಿಗೆ 5 ಗಂಟೆಗಳ ಅವಧಿಗೆ ವಾರಾಂತ್ಯ (Sat-Sun): 28,000 + 5% GST, ವಾರದ ದಿನಗಳು (Mon-Fri 26,000 ರೂ. + 5% GST. ಒಂದು ವೇಳೆ ನಿಯಮಿತ ಸಮಯ ಮೀರಿದರೆ, ಇಡೀ ದಿನದ ದರ ಅನ್ವಯಿಸುತ್ತದೆ.
ಇದು ಕೇವಲ ಹೆಚ್ಚುವರಿ ಆದಾಯ ಗಳಿಕೆಯಷ್ಟೇ ಅಲ್ಲ, ಬೆಂಗಳೂರಿನಂತಹ ನಗರದಲ್ಲಿ ಪ್ರವಾಸಿಗರಿಗೆ ಮತ್ತು ಜನರಿಗೆ ಆಚರಣೆ ಮಾಡಲು ಹೊಸ ಮತ್ತು ವಿಶಿಷ್ಟ ಆಯ್ಕೆಗಳನ್ನು ಒದಗಿಸುವ ಪ್ರಯತ್ನವಾಗಿದೆ.
ಕೆಎಸ್‌ಟಿಡಿಸಿ ಅಧಿಕಾರಿಯೊಬ್ಬರು,ಜನವರಿಯಿಂದ ಇದುವರೆಗೆ ಸುಮಾರು 20,000 ಜನರು ಈ ಹಾಪ್-ಆನ್, ಹಾಪ್-ಆಫ್ ಸೇವೆಯನ್ನು ಬಳಸಿಕೊಂಡಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ವಾರದ ದಿನಗಳಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ತಂಪಾದ ವಾತಾವರಣವಿದ್ದಾಗ ಹೆಚ್ಚಿನವರು ಟಾಪ್ ಡೆಕ್ ಸೀಟುಗಳನ್ನೇ ಇಷ್ಟಪಡುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು, ಈಗ ಸಾರ್ವಜನಿಕರಿಗೆ ಜನ್ಮದಿನದ ಆಚರಣೆಗಳು, ಕಾರ್ಪೊರೇಟ್ ಈವೆಂಟ್‌ಗಳು ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಅಂಬಾರಿ ಬಸ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.