ಎಚ್ಚರ, ಟ್ರಾಫಿಕ್ ಚಲನ್ ಪಾವತಿಗೆಂದು ಸಿಕ್ಕಸಿಕ್ಕ ಲಿಂಕ್ ಕ್ಲಿಕ್ ಮಾಡ್ಬೇಡಿ: 2.32 ಲಕ್ಷ ರೂ. ಕಳಕೊಂಡ ಬೆಂಗಳೂರು ಟೆಕ್ಕಿ

ಟ್ರಾಫಿಕ್ ಫೈನ್ ಪಾವತಿ ಮಾಡಲು ಹೋಗಿ ಬೆಂಗಳೂರಿನ ಟೆಕ್ಕಿಯೊಬ್ಬರು ಫ್ರಾಡ್ ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 2.32 ಲಕ್ಷ ರೂ. ಕಳೆದುಕೊಂಡಿದ್ದಾರೆ. ಟ್ರಾಫಿಕ್ ಚಲನ್ ಹೆಸರಿನಲ್ಲಿ ಯಾವುದೇ ಲಿಂಕ್​​ಗಳನ್ನು ಪೊಲೀಸರು ಕಳುಹಿಸುವುದಿಲ್ಲ ಎಂಬುದನ್ನು ಸಾರ್ವಜನಿಕರು ತಿಳಿದಿರಬೇಕು. ಸೈಬರ್ ವಂಚನೆಗಳಿಗೆ ಬಲಿಯಾಗಬಾರದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಎಚ್ಚರ, ಟ್ರಾಫಿಕ್ ಚಲನ್ ಪಾವತಿಗೆಂದು ಸಿಕ್ಕಸಿಕ್ಕ ಲಿಂಕ್ ಕ್ಲಿಕ್ ಮಾಡ್ಬೇಡಿ: 2.32 ಲಕ್ಷ ರೂ. ಕಳಕೊಂಡ ಬೆಂಗಳೂರು ಟೆಕ್ಕಿ
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Jan 29, 2026 | 9:07 AM

ಬೆಂಗಳೂರು, ಜನವರಿ 29: ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ಪಾವತಿಸಲು ಹೋಗಿ ಟೆಕ್ಕಿಯೊಬ್ಬರು 2.32 ಲಕ್ಷ ರೂ. ಕಳಕೊಂಡ ಘಟನೆ ಬೆಂಗಳೂರು (Bangalore) ಪೂರ್ವ ವಿಭಾಗದಲ್ಲಿ ನಡೆದಿದೆ. ಟ್ರಾಫಿಕ್ ಚಲನ್ ಪಾವತಿ ಹೆಸರಿನಲ್ಲಿ ಬಂದ ನಕಲಿ ವೆಬ್‌ಸೈಟ್‌ನಲ್ಲಿ ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಿ, 500 ರೂ. ಟ್ರಾಫಿಕ್ ಚಲನ್ ಪಾವತಿಸಲು ಹೋಗಿ 2.32 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದೀಗ 57 ವರ್ಷದ ಸಂತ್ರಸ್ತ ವ್ಯಕ್ತಿಯ ದೂರಿನ ಮೇರೆಗೆ ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ವೈಟ್‌ಫೀಲ್ಡ್‌ನ ಟೆಕ್ಕಿಗೆ ಜನವರಿ 26 ರಂದು ‘ನಿಮ್ಮ 500 ರೂ. ಟ್ರಾಫಿಕ್ ಚಲನ್ ಬಾಕಿ ಇದೆ’ ಎಂದು ಹೇಳುವ ಟೆಕ್ಷ್ಟ್​ ಮೆಸೇಜ್ ಬಂದಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ ಸಂದೇಶದಲ್ಲಿ ಹಣ ಪಾವತಿಗೆ ಲಿಂಕ್ ಕೂಡ ಇತ್ತು.

ಅವರು ಲಿಂಕ್ ಕ್ಲಿಕ್ ಮಾಡಿದಾಗ, 500 ರೂ. ದಂಡವನ್ನು ಪಾವತಿಸಲು ಪಾವತಿ ವಿವರಗಳನ್ನು ಕೇಳುವ ವೆಬ್​ಸೈಟ್ ಓಪನ್ ಆಯಿತು. ಅವರು ತಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದರು. ತಕ್ಷಣವೇ ಖಾತೆಯಿಂದ 2,32,272 ರೂ.ಗಳನ್ನು ಡೆಬಿಟ್ ಆಯಿತು. ಬಳಿಕ ಮೋಸದ ಅರಿವಾಗಿ ಅವರು ಪೊಲೀಸರ ಮೊರೆ ಹೋದರು.

ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಚಲನ್‌ಗಳ ಕ್ಲಿಯರೆನ್ಸ್ ಕೋರಿ ನಾವು ಅಂತಹ ಸಂದೇಶಗಳನ್ನು ಕಳುಹಿಸುವುದಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 4 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್, ಕೇರಳ ಮೂಲದ 7 ಪೆಡ್ಲರ್ಸ್ ಸೇರಿ 10 ಮಂದಿಯ ಬಂಧನ

ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್‌ಗಳು, ದಂಡ ಅಥವಾ ಬಹುಮಾನ ಎಂಬ ಸಂದೇಶಗಳನ್ನು ಎಂದಿಗೂ ನಂಬಬೇಡಿ. ಯಾವುದೇ ಸಂದರ್ಭದಲ್ಲೂ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಅಥವಾ ಕಾರ್ಡ್ ವಿವರಗಳನ್ನು ನಮೂದಿಸಬೇಡಿ. ಸಂಶಯ ಇದ್ದಲ್ಲಿ ನೇರವಾಗಿ ಅಧಿಕೃತ ವೆಬ್‌ಸೈಟ್ ಅಥವಾ ಸಂಬಂಧಿತ ಇಲಾಖೆಯನ್ನು ಸಂಪರ್ಕಿಸುವುದು ಸುರಕ್ಷಿತ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ