ಬೆಂಗಳೂರು: 4 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್, ಕೇರಳ ಮೂಲದ 7 ಪೆಡ್ಲರ್ಸ್ ಸೇರಿ 10 ಮಂದಿಯ ಬಂಧನ
ಯುವ ಸಮುದಾಯಕ್ಕೆ ಮಾರಕವಾಗಿರುವ ಮಾದಕ ವಸ್ತುವಿನ ಹಾವಳಿ ಬೆಂಗಳೂರಿನಲ್ಲಿ ಅವ್ಯಾಹತವಾಗಿದೆ. ಹಿಂದೆಲ್ಲ ಕೇವಲ ಹೊಸ ವರ್ಷ ಸಂಭ್ರಮಾಚರಣೆ ಸಂದರ್ಭ ಮಾತ್ರ ಪತ್ತೆಯಾಗುತ್ತಿದ್ದ ಕೋಟಿ ಕೋಟಿ ರೂ. ಮೌಲ್ಯದ ಡ್ರಗ್ ಸಾಮಾನ್ಯ ದಿನಗಳಲ್ಲೂ ಪತ್ತೆಯಾಗುತ್ತಿದೆ. ಸದ್ಯ ಪೊಲೀಸರು ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಡ್ರಗ್ ವಶಪಡಿಸಿಕೊಂಡು 10 ಮಂದಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.

ಬೆಂಗಳೂರು, ಜನವರಿ 29: ಬೆಂಗಳೂರಿನ (Bangalore) ಅಮೃತಹಳ್ಳಿ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿದ್ದಾರೆ. ಕೇರಳ ಮೂಲದ 7 ಡ್ರಗ್ ಪೆಡ್ಲರ್ಸ್ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು, ಡಾರ್ಕ್‌ವೆಬ್ ಬಳಸಿ ಬೆಂಗಳೂರಿನಾದ್ಯಂತ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಎಂದು ಗುರುತಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಡ್ರಗ್ ಪೆಡ್ಲರ್ಗಳ ಪೈಕಿ ಇಬ್ಬರು ಕರ್ನಾಟಕ, ಮತ್ತೋರ್ವ ಆಂಧ್ರ ಮೂಲದವರಾಗಿದ್ದು, ಉಳಿದ ಎಳು ಜನರು ಕೇರಳದವರಾಗಿದ್ದಾರೆ. ಆರೋಪಿಗಳು ಥೈಲ್ಯಾಂಡ್‌ನಿಂದ ಡ್ರಗ್ಸ್ ತರಿಸಿಕೊಂಡು ಡಾರ್ಕ್‌ವೆಬ್‌ನಲ್ಲಿ ‘ಟೀಂ ಕಲ್ಕಿ’ (Team Kalki) ಎಂಬ ವೆಬ್‌ಸೈಟ್ ಮೂಲಕ ಡ್ರಗ್ಸ್‌ಗಾಗಿ ಆರ್ಡರ್ ಮಾಡುತ್ತಿದ್ದರು. ಥೈಲ್ಯಾಂಡ್‌ನಲ್ಲಿರುವ ಕೇರಳ ಮೂಲದ ವ್ಯಕ್ತಿಯೊಬ್ಬ ವಿಮಾನದ ಮೂಲಕ ಬೆಂಗಳೂರಿಗೆ ಡ್ರಗ್ಸ್ ಕಳುಹಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿಗೆ ತಲುಪಿದ ನಂತರ, ಆರೋಪಿಗಳು ನಗರದಾದ್ಯಂತ ಡ್ರಗ್ಸ್ ವಿತರಿಸುತ್ತಿದ್ದರು.
ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳೇ ಟಾರ್ಗೆಟ್
ಯಲಹಂಕ, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ವಿವಿಧ ಪ್ರದೇಶಗಳನ್ನು ಹಂಚಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಮತ್ತು ಪಾರ್ಟಿಗಳಿಗೆ ಬರುವವರೇ ಇವರ ಪ್ರಮುಖ ಗುರಿಗಳಾಗಿದ್ದರು. ಈ ಡ್ರಗ್ ಪೆಡ್ಲರ್‌ಗಳು ಒಂದೇ ತಂಡದ ಭಾಗವಾಗಿದ್ದರೂ ತಾವು ಹಂಚಿಕೊಂಡಿದ್ದ ಪ್ರದೇಶಗಳ ವಿಚಾರದಲ್ಲಿ ಆಗಾಗ ಜಗಳವಾಡುತ್ತಿದ್ದರು. ತಮ್ಮ ವ್ಯಾಪ್ತಿಯನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ಡ್ರಗ್ಸ್ ಮಾರಾಟಕ್ಕೆ ಹೋದ ಪೆಡ್ಲರ್‌ನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಕೂಡ ನಡೆದಿತ್ತು. ಕೆಲವೊಮ್ಮೆ ಕೊಲೆ ಮಾಡುವ ಹಂತದವರೆಗೆ ಅವರ ಜಗಳ ತಲುಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಸಿಕ್ಕಿದ್ದು ಏನೇನು?
ಬಂಧಿತರಿಂದ 3 ಕೆಜಿ ಹೈಡ್ರೋ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, 10 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು ಮತ್ತು 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮುಖ್ಯ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಅಮೃತಹಳ್ಳಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದೆ. ಪ್ರತ್ಯೇಕ ಪ್ರಕರಣದಲ್ಲಿ ತಲಘಟ್ಟಪುರ ಪೊಲೀಸರು ಕಾರ್ಯಾಚರಣೆ ನಡೆಸಿ 60 ಲಕ್ಷ ರೂ. ಮೌಲ್ಯದ 78 ಕೆಜೆ ಗಾಂಜಾ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಡ್ರಗ್ಸ್ ಲ್ಯಾಬ್ ಶಂಕೆ? ಎನ್ಸಿಬಿ ದಿಢೀರ್ ದಾಳಿ
ಇತ್ತಿಚೇಗಷ್ಟೇ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿಗೆ ಬಂದು ಮೂರು ಪೊಲೀಸ್ ಠಾಣಾ ವ್ಯಾಪ್ತಿಯ ಡ್ರಗ್ ಪ್ಯಾಕ್ಟರಿ ಭೇದಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ಗಳೇ ಸಂಸ್ಪೆಂಡ್ ಆಗಿದ್ದರು. ಖುದ್ದು ಸಿಎಂ ಸಿದ್ದರಾಮಯ್ಯ ಬೆಂಗಳೂರು ಪೊಲೀಸರಿಗೆ ಚಾಟಿ ಬೀಸಿದ್ದರು. ಇದರ ಬೆನ್ನಲ್ಲೇ ಮತ್ತಷ್ಟು ಅಲರ್ಟ್ ಆಗಿರುವ ಬೆಂಗಳೂರು ನಗರ ಪೊಲೀಸರು, ಮಾದಕ ವಸ್ತು ಜಾಲದ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಬೇಟೆ ಮುಂದುವರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:54 am, Thu, 29 January 26