Loan Apps: ಆ್ಯಪ್​ಗಳಿಂದ ಸಾಲ ಪಡೆಯುವ ಮುನ್ನ ಇರಲಿ ಎಚ್ಚರ, ಚೀನಿ ಆ್ಯಪ್​ಗಳಿಂದ ಆಗುವ ಮತ್ತೊಂದು ದೋಖಾ ಬಯಲು

| Updated By: Rakesh Nayak Manchi

Updated on: Sep 28, 2023 | 7:28 PM

ಲೋನ್ ನೀಡುವುದಕ್ಕೂ ಮೊದಲು ಮೊಬೈಲ್‌ನಲ್ಲಿರುವ ಎಲ್ಲಾ ಡಾಟಾ ಆಕ್ಸೆಸ್ ಪಡೆದು ಹಣ ನೀಡ್ತಾರೆ. ಒಂದು ವೇಳೆ ನಿಗದಿತ ಸಮಯದಲ್ಲಿ ಹಣ ನೀಡಿಲ್ಲ ಎಂದಾದರೆ ಚೀನಿ ಕಂಪನಿಗಳು ಗ್ರಾಹಕರಿಗೆ ಹಿಂಸೆ ನೀಡುತ್ತಾರೆ. ಮೊದಲ ಹಂತದಲ್ಲಿ ಫೋನ್ ಮಾಡಿ ಹಣ ನೀಡುವಂತೆ ಕೇಳ್ತಾರೆ.

Loan Apps: ಆ್ಯಪ್​ಗಳಿಂದ ಸಾಲ ಪಡೆಯುವ ಮುನ್ನ ಇರಲಿ ಎಚ್ಚರ, ಚೀನಿ ಆ್ಯಪ್​ಗಳಿಂದ ಆಗುವ ಮತ್ತೊಂದು ದೋಖಾ ಬಯಲು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಚೀನಾದವರು ಭಾರತದ ಡಿಜಿಟಲ್ ಮಾರ್ಕೆಟನ್ನು ದೊಡ್ಡ ಮಟ್ಟಿಗೆ ಕಬ್ಜಾ ಮಾಡಿದ್ದಾರೆ. ಚೀನಾದ ಮನೋಪಲಿ ಎಷ್ಟರ ಮಟ್ಟಿಗೆ ಇದೆ ಅಂದ್ರೆ ನಮ್ಮ ಭಾರತದ ಜನರ ಅವಶ್ಯಕಥೆಗೆ ಏನು ಬೇಕು ಅದನ್ನು ಒದಗಿಸುವ ಕೆಲಸ ಮಾಡ್ತಿದ್ದಾರೆ. ಅದ್ರಲ್ಲೂ ಮೊಬೈಲ್ ಆ್ಯಪ್‌ಗಳಲ್ಲಿ ಅವರದ್ದೇ ಮೇಲು ಗೈ. ಭಾರತದಲ್ಲಿ ವಾಸ ಮಾಡುವ ಅದೆಷ್ಟೋ ಜನರಿಗೆ ಸಣ್ಣ ಪ್ರಮಾಣದ ಸಾಲ ಬೇಕಿರುತ್ತೆ. ಇದನ್ನು ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕ್ ನಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಬ್ಯಾಂಕ್ ಸಾಲ ಪಡೆಯಬೇಕೆಂದರೆ ಅದಕ್ಕೆ ಹಲವಾರು ರೀತಿಯ ದಾಖಲಾತಿಗಳನ್ನು ನೀಡಬೇಕು. ಇದು ಅಷ್ಟು ಸುಲಭದ ಕೆಲಸ ಅಲ್ಲ. ಹೀಗಾಗಿ ಈ ಪರಿಸ್ಥಿತಿಯ ಲಾಭ ಪಡೆಯುವಲ್ಲಿ ಚೀನಿ ಕಂಪನಿಗಳು ಕೆಲವೊಂದು ಲೋನ್ ಆ್ಯಪ್ ಕಂಪನಿಗಳನ್ನೇ ತೆರದು ಅಪ್‌ಗಳನ್ನು ಡಿಜಿಟಲ್ ಮಾರುಕಟ್ಟೆಗೆ ಬಿಟ್ಟಿದೆ. ಆ್ಯಪ್‌ನ ಡೌನ್ ಲೋಡ್ ಮಾಡಿ ಲಾಗ್ ಇನ್ ಆದ್ರೆ ಸಾಕು ಕೆಲವೇ ಕೆಲವು ದಾಖಲಾತಿಗಳನ್ನ ಪಡೆದು ಕ್ಷಣ ಮಾತ್ರದಲ್ಲಿ ಫ್ರೀ ಅಪ್ರೂಡ್ ಲೋನ್ ನೀಡುತ್ವೆ. ಆದ್ರೆ ಈಗ ಆ ಆ್ಯಪ್​ಗಳಿಂದ ಆಗುವ ಮೋಸದ ಬಗ್ಗೆ ಅಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ.

ಸೆಪ್ಟೆಂಬರ್ 2 ರಂದು ಬೆಂಗಳೂರಿನ 6 ಕಡೆಯಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಾಮಾಜದಲ್ಲಿ ಜನರ ನಂಬಿಕೆ ಗಳಿಸಿರುವಂತಹ ಕಂಪನಿಗಳಾದ ರೇಜರ್ ಪೇ‘, ಪೇಟಿಎಂ ಮತ್ತು ಕ್ಯಾಶ್ ಫ್ರೀ ಕಂಪನಿಗಳಿಗೆ ಇಡಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದಾರೆ. ದಾಳಿಗೆ ಒಳಗಾಗಿರುವ ಕಂಪನಿಗಳು ಜನರ ನಂಬಿಕೆ ಗಳಿಸಿದ ಅನ್‌ಲೈನ್ ಪೇಮೆಂಟ್ ಗೇಟ್‘ ವೇ ಎಂದು ಕರೆಸಿಕೊಳ್ಳುವ ಹಣಕಾಸು ವ್ಯವಹಾರ ನಡೆಸುತ್ತಿದ್ದ ಕಂಪನಿಗಳಾಗಿವೆ. ದಾಳಿ ವೇಳೆ ಈ ಕಂಪನಿಗಳನ್ನು ಚೀನಾ ಮೂಲದ ವ್ಯಕ್ತಿಗಳು ಕಂಟ್ರೋಲ್ ಮಾಡುತಿದ್ರು. ಆ ವ್ಯಕ್ತಿಗಳು ಸಣ್ಣ ಪ್ರಮಾಣದ ಲೋನ್ ನೀಡುವ ಹಲವಾರು ಮೊಬೈಲ್ ಅಪ್ಲಿಕೇಶನ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದು ತನಿಖೆ ವೇಳೆ ಗಮನಕ್ಕೆ ಬಂದಿದೆ. ಇದೇ ಚೀನಿ ಮರ್ಚೆಂಟ್ ಐಡಿ ಮತ್ತು ಬ್ಯಾಂಕ್ ಅಕೌಂಟ್ ನಲ್ಲಿ ಇದ್ದ 17ಕೋಟಿ ರೂಪಾಯಿಯನ್ನು ಇಡಿ ಜಪ್ತಿ ಮಾಡಿದೆ.

ಇಡಿ ಈಗ ಯಾಕೆ ದಾಳಿ ಮಾಡಿದೆ ಅನ್ನೋ ಪ್ರಶ್ನೆಗೆ ಹಲವು ತಿಂಗಳ ಹಿಂದೆ ಬೆಂಗಳೂರು ಸಿಸಿಬಿ ಅಧಿಕಾರಿಗಳು ಮಾಡಿದ್ದ ಒಂದು ಕಾರ್ಯಾಚರಣೆ ಕಾರಣ. ಇಡಿ ತನಿಖೆ ನಡೆಸುವ ಮೊದಲು ಬೆಂಗಳೂರು ಸಿಸಿಬಿಯ ವಿಶೇಷ ವಿಚಾರಣೆ ದಳದ ( special enquiry )ಅಧಿಕಾರಿಗಳು ಈ ಪ್ರಕರಣವನ್ನು ಬೆಳಕಿಗೆ ತಂದಿದ್ದರು. ನಗರದಲ್ಲಿ ಇರುವ ವಿವಿಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಹಾಗೂ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹಲವಾರು ಸಾರ್ವಜನಿಕರು ದೂರು ನೀಡಿದ್ದರು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇರುವ ಲೋನ್ ಆ್ಯಪ್ ಗಳಿಂದ ಕಿರುಕುಳ ಅಗ್ತಿದೆ ಅಂತ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಅಂದ್ರೆ 5 ಸಾವಿರ. 10 ಸಾವಿರದಿಂದ 30 ಸಾವಿರದವರೆಗೂ ಯಾವುದೇ ದಾಖಲಾತಿ ಇಲ್ಲದೆ ಈ ಆ್ಯಪ್‌ಗಳು ಲೋನ್ ನೀಡ್ತಿದ್ವು. ಅದ್ರೆ ಈ ಲೋನ್ ಆಪ್ ಇನ್‌ಸ್ಟಾಲ್ ಮಾಡುವ ಮೊದಲೇ ಮೊಬೈಲ್‌ನ ಸಂಪೂರ್ಣ ಡಾಟಾ, ಲೋನ್ ಆ್ಯಪ್ ಗಳಿಗೆ ಆಕ್ಸೆಸ್ ನೀಡುವಂತೆ ಪರ್ಮಿಷನ್ ನೀಡಲು ಬೇಕಾಗುವ ರೀತಿ ಇರತ್ತೆ. ಒಂದು ವೇಳೆ ಪರ್ಮಿಷನ್ ನೀಡಿಲ್ಲವಾದ್ರೆ ಆ್ಯಪ್ ಇನ್ ಸ್ಟಾಲ್ ಅಗುವುದಿಲ್ಲಾ ಜೊತೆಗೆ ಲೋನ್ ಸಹ ನೀಡುವುದಿಲ್ಲ.

ಲೋನ್ ನೀಡುವುದಕ್ಕೂ ಮೊದಲು ಮೊಬೈಲ್‌ನಲ್ಲಿರುವ ಎಲ್ಲಾ ಡಾಟಾ ಆಕ್ಸೆಸ್ ಪಡೆದು ಹಣ ನೀಡ್ತಾರೆ. ಒಂದು ವೇಳೆ ನಿಗದಿತ ಸಮಯದಲ್ಲಿ ಹಣ ನೀಡಿಲ್ಲ ಎಂದಾದರೆ ಚೀನಿ ಕಂಪನಿಗಳು ಗ್ರಾಹಕರಿಗೆ ಹಿಂಸೆ ನೀಡುತ್ತಾರೆ. ಮೊದಲ ಹಂತದಲ್ಲಿ ಫೋನ್ ಮಾಡಿ ಹಣ ನೀಡುವಂತೆ ಕೇಳ್ತಾರೆ. ಹಣ ಕೊಟ್ಟರೂ ಸರಿ ಕೊಡದಿದ್ರೂ ಸರಿ ನಂತರ ಗ್ರಾಹಕರ ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಇರುವ ಎಲ್ಲರಿಗೂ ಇವನೊಬ್ಬ ಚೀಟರ್ ಎಂದು ಮೆಸೇಜ್ ಮಾಡ್ತಾರೆ. ಫೇಸ್ ಬುಕ್, ಇನ್ಸ್‌ಸ್ಟಾಗ್ರಾಂ ಸೇರಿ ಎಲ್ಲಾ ಸಾಮಾಜಿಕ ಜಾಲದಲ್ಲಿ ಚೀಟರ್, ಮೋಸಗಾರ ಎಂದು ಮೆಸೇಜ್ ಪೋಸ್ಟ್ ಮಾಡಿ ಮಾನಸಿಕ ಹಿಂಸೆ ನೀಡ್ತಿದ್ದಾರೆ ಎಂದು ದೂರುಗಳು ದಾಖಲಾಗಿದ್ವು. ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಈ ರೀತಿಯ 18 ಕೇಸ್‌ಗಳು ದಾಖಲಾಗಿದ್ದವು.

ಕೇಸ್ ದಾಖಲು ಮಾಡಿ ತನಿಖೆ ಮಾಡಿದಾಗ ಚೀನಿ ವ್ಯಕ್ತಿಗಳು ಶಾಮಿಲಾಗಿರುವುದು ಬಯಲು

ಕೇಸ್ ದಾಖಲು ಮಾಡಿ ಬೆಂಗಳೂರಿನ ಕೋರಮಂಗಲ, ಹೆಚ್ ಎಸ್ ಆರ್ ಲೇಔಟ್, ಮಾರತ್ ಹಳ್ಳಿಯಲ್ಲಿ ಕಾರ್ಯನಿರ್ವಹಿಸುವ ಹಲವು ಚೀನಿ ಮೂಲಕ ಲೋನ್ ಆಪ್ ಗಳ ಕಂಪನಿಗಳ ಮೇಲೆ ದಾಳಿ ಮಾಡಿ ಅರೆಸ್ಟ್ ಸಹ ಮಾಡಲಾಗಿತ್ತು. ತನಿಖಾ ಹಂತದಲ್ಲಿ ಚೀನಿ ಮೂಲದ ವ್ಯಕ್ತಿಗಳು ವ್ಯವಸ್ಥಿತವಾಗಿ ಸ್ಥಳೀಯ ಜನರ ಐಡಿ ಕಾರ್ಡ್ ಗಳನ್ನು ಬಳಸಿ ಕಟ್ಟಡ ಬಾಡಿಗೆಗೆ ಪಡೆದು ಕೆಲಸಕ್ಕೆ ಜನರನ್ನು ಇಟ್ಟುಕೊಂಡು ಲೋನ್ ನೀಡಿ ನಂತ್ರ ಆ ವ್ಯಕ್ತಿಗಳಿಗೆ ಮಾನಸಿಕ ಹಿಂಸೆ ನೀಡಿ ಹೆಚ್ಚಿನ ಹಣ ವಸೂಲಿ ಮಾಡ್ತಿರೊ ವಿಚಾರ ಗಮನಕ್ಕೆ ಬಂದಿತ್ತು. ಜೊತೆಗೆ ಈ ಕಂಪನಿಗಳಿಗೆ ವಿದೇಶದಿಂದ ಹವಾಲ ಮೂಲಕ ಹಣ ಬರ್ತಿದೆ ಎನ್ನೋದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಸಂಪೂರ್ಣ ತನಿಖೆ ನಂತ್ರ ಇದು ಬೆಂಗಳೂರಿಗೆ ಮಾತ್ರವಲ್ಲದೆ ವಿದೇಶದ ಲಿಂಕ್ ಪತ್ತೆಯಾಗಿತ್ತು. ಯಾವಾಗ ವ್ಯಾಪ್ತಿ ಮೀರಿದ್ದ ಪ್ರಕರಣ ಅನ್ನೊದು ಬೆಳಕಿಗೆ ಬಂದ ನಂತ್ರ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಇಡಿ ಅಧಿಕಾರಿಗಳ ಗಮನಕ್ಕೆ ಪ್ರಕರಣವನ್ನು ತರಲಾಗಿತ್ತು.

ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ದಾಖಲಾಗಿದ್ದ ಮದರ್ ಕೇಸ್ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸಿದಾಗ, ರೇಜರ್ ಪೇ, ಪೇಟಿಎಂ ಹಾಗು ಕ್ಯಾಶ್ ಫ್ರೀ ಕಂಪನಿಗಳು ಲೋನ್ ನೀಡುವ ಕಂಪನಿಗಳಿಗೆ ಹಣವನ್ನು ನೀಡ್ತಿದೆ ಅನ್ನೋ ಮಾಹಿತಿ ಸಿಕ್ಕಿತ್ತು. ಮಾಹಿತಿ ಅನ್ವಯ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ ಅಡಿಯಲ್ಲಿ ( prevention of money laundering act) ಕೇಸ್ ದಾಖಲು ಮಾಡಿ ತನಿಖೆ ಕೈಗೊಂಡಿದ್ದರು. ತನಿಖೆ ಮುಂದಿನ ಅಂಗವಾಗಿ ಬೆಂಗಳೂರಿನ 6 ಕಡೆಯಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಚೀನಿ ವ್ಯಕ್ತಿಗಳ ಪಾಲುದಾರಿಕೆ ಹಾಗು ಲೋನ್ ಆ್ಯಪ್ ನಲ್ಲಿ ಆರ್‌ಬಿಐ ನಿಯಮ ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿದೆ.

ವರದಿ: ಪ್ರಜ್ವಲ್, ಟಿವಿ9 ಬೆಂಗಳೂರು

Published On - 7:25 pm, Sun, 4 September 22