ಕೇವಲ 24 ನಿಮಿಷದಲ್ಲಿ KR ಪುರಂ-ವೈಟ್‌ಫೀಲ್ಡ್ ನಡುವೆ ಪ್ರಯಾಣ; 10-12 ನಿಮಿಷಗಳ ಅಂತರದಲ್ಲಿ 7 ಮೆಟ್ರೋ ರೈಲುಗಳ ಸೇವೆ ನೀಡಲಿರುವ BMRCL

|

Updated on: Mar 24, 2023 | 1:04 PM

ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಪ್ರಯಾಣದ ಸಮಯ ಕಡಿಮೆ ಆಗಿದ್ದು. ಕೆಆರ್ ಪುರಂನಿಂದ ವೈಟ್‌ಫೀಲ್ಡ್ ತಲುಪಲು ಮೆಟ್ರೋದಲ್ಲಿ ಕೇವಲ 24 ನಿಮಿಷಗಳು ಮಾತ್ರ ತಗುಲಲಿದೆ.

ಕೇವಲ 24 ನಿಮಿಷದಲ್ಲಿ KR ಪುರಂ-ವೈಟ್‌ಫೀಲ್ಡ್ ನಡುವೆ ಪ್ರಯಾಣ; 10-12 ನಿಮಿಷಗಳ ಅಂತರದಲ್ಲಿ 7 ಮೆಟ್ರೋ ರೈಲುಗಳ ಸೇವೆ ನೀಡಲಿರುವ BMRCL
ವೈಟ್‌ಫೀಲ್ಡ್
Follow us on

ಬೆಂಗಳೂರು ಮೆಟ್ರೋ(Namma Metro) ಪ್ರಯಾಣಿಕರಿಗೆ ಸಿಹಿ ಸುದ್ದಿ. ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ(KR Puram-Whitefield Metro Line) 10-12 ನಿಮಿಷಗಳ ಸಮಯದ ಅಂತರದಲ್ಲಿ ಏಳು ರೈಲುಗಳು ಓಡಲಿವೆ ಎಂದು ಸಂಸದ ಪಿ.ಸಿ.ಮೋಹನ್(PC Mohan) ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದರಿಂದ ಪ್ರಯಾಣಿಕರ ಸಮಯ ಉಳಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ಕರ್ನಾಟಕಕ್ಕೆ ತಮ್ಮ ಏಳನೇ ಭೇಟಿ ನೀಡಲಿದ್ದು ಈ ವೇಳೆ ಈ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.

ಈ ಹೊಸ ಮೆಟ್ರೋ ಮಾರ್ಗವು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಕೆಆರ್ ಪುರಂನಿಂದ ವೈಟ್‌ಫೀಲ್ಡ್ ತಲುಪಲು ಮೆಟ್ರೋದಲ್ಲಿ ಕೇವಲ 24 ನಿಮಿಷಗಳು ಮಾತ್ರ ತಗುಲಲಿದೆ ಎಂದು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾ.25 ರಂದು 13.2 ಕಿಮೀ ಉದ್ದದ ವೈಟ್‌ಫೀಲ್ಡ್-ಕೆಆರ್ ಪುರ ಮಾರ್ಗದ ಮೆಟ್ರೋವನ್ನು ಉದ್ಘಾಟಿಸಲಿದ್ದಾರೆ. ಸಾಮಾನ್ಯವಾಗಿ ರಸ್ತೆ ಮೂಲಕ ಕೆಆರ್ ಪುರ ಮತ್ತು ವೈಟ್‌ಫೀಲ್ಡ್ ನಡುವೆ ಪ್ರಯಾಣಿಸಲು ಒಂದು ಗಂಟೆ ಬೇಕು. ಆದ್ರೆ ಮೆಟ್ರೋದಲ್ಲಿ ಪ್ರಯಾಣಿಸಲು ಕೇವಲ 24 ನಿಮಿಷಗಳು ತಗುಲಲಿದೆ. BMRCL 10- 12 ನಿಮಿಷಗಳ ಅಂತರದೊಳಗೆ 7 ರೈಲುಗಳ ಸೇವೆಯನ್ನು ನೀಡಲಿದೆ. ಇದರಿಂದ ಜನರಿಗೆ ಪ್ರಯಾಣದ ಸಮಯ ಉಳಿಯಲಿದೆ ಎಂದು ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: Namma Metro: ಕೆಆರ್​ ಪುರಂ-ವೈಟ್ ಫೀಲ್ಡ್ ನಮ್ಮ ಮೆಟ್ರೋ ಸೇವೆ ಮಾ.25 ರಿಂದ ಆರಂಭ, ಪ್ರಧಾನಿ ಮೋದಿ ಉದ್ಘಾಟನೆ

ಮೋದಿ ವಿರುದ್ಧ ರಣದೀಪ್ ಸುರ್ಜೆವಾಲಾ ವಾಗ್ದಾಳಿ

ಇನ್ನು ಮತ್ತೊಂದೆಡೆ ಕೆಆರ್​ ಪುರಂ-ವೈಟ್‌ಫೀಲ್ಡ್ ಮೆಟ್ರೋ ಸಂಬಂಧ ಮೋದಿ ವಿರುದ್ಧ ರಣದೀಪ್ ಸುರ್ಜೆವಾಲಾ ವಾಗ್ದಾಳಿ ನಡೆಸಿದ್ದಾರೆ. 2022ರ ನವೆಂಬರ್ 22ಕ್ಕೆ ಪ್ರಧಾನಿ ಮೋದಿ ಅಪೂರ್ಣಗೊಂಡಿರುವ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ 2ನೆ ಟರ್ಮಿನಲ್ ಉದ್ಘಾಟಿಸಿದರು. ಆದರೆ, ಈ ದಿನದವರೆಗೂ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭವಾಗಿಲ್ಲ. ಫೆಬ್ರವರಿ 27ಕ್ಕೆ 500 ಕೋಟಿ ರೂ.ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಇದುವರೆಗೂ ಅಲ್ಲಿ ಒಂದೇ ಒಂದು ವಿಮಾನ ಕಾರ್ಯಾಚರಣೆ ಆರಂಭ ಮಾಡಿಲ್ಲ.

ಕೆ.ಆರ್.ಪುರಂ ಹಾಗೂ ವೈಟ್‍ಫೀಲ್ಡ್ ನಡುವಣ ಮೆಟ್ರೋ ಮಾರ್ಗವನ್ನು ಇದೇ ಮಾರ್ಚ್ 25ಕ್ಕೆ ಮೋದಿ ಉದ್ಘಾಟಿಸುತ್ತಿದ್ದು, ಈ ಮೆಟ್ರೋ ಮಾರ್ಗ ಎರಡೂ ಕಡೆಯಿಂದಲೂ ಹಾಲಿ ಮೆಟ್ರೋ ಮಾರ್ಗಕ್ಕೆ ಸಂಪರ್ಕ ಸಾಧಿಸಿಲ್ಲ. ಬೈಯಪ್ಪನಹಳ್ಳಿ ಹಾಗೂ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದ ಮಧ್ಯೆ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸುವುದಾಗಿ ಸಮರ್ಥನೆ ನೀಡುತ್ತಿದ್ದು, ಈಗಾಗಲೇ ಬಿಎಂಟಿಸಿಯಲ್ಲಿ 8 ಸಾವಿರ ಬಸ್‍ಗಳ ಕೊರತೆ ಎದುರಾಗಿದೆ ಎಂದು ಕಿಡಿಕಾರಿದ್ದಾರೆ.

ಹೀಗಾಗಿ ಅಪೂರ್ಣಗೊಂಡಿರುವ ಕೆ.ಆರ್.ಪುರಂ ಹಾಗೂ ವೈಟ್‍ಫೀಲ್ಡ್ ನಡುವಣ ಮೆಟ್ರೋ ಮಾರ್ಗ ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿದೆ. ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕೆ.ಆರ್.ಪುರಂ ನಿಲ್ದಾಣ ಹಾಗೂ ವೈಟ್‍ಫೀಲ್ಡ್ ನಿಲ್ದಾಣಗಳಿಂದ ಬೈಯಪ್ಪನಹಳ್ಳಿ ಮೆಟ್ರೋಗೆ ಸಂಪರ್ಕವಿಲ್ಲದ ಅಪೂರ್ಣಗೊಂಡಿರುವ ಮೆಟ್ರೋ ಮಾರ್ಗವನ್ನು ಮೋದಿ ಉದ್ಘಾಟಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:53 pm, Wed, 22 March 23