ಬೆಂಗಳೂರು: ದೇಶದಲ್ಲೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅತ್ಯುತ್ತಮ ಹೆಸರಿದೆ. ಸಾರಿಗೆ ಸಂಸ್ಥೆಯ ವ್ಯವಸ್ಥೆಯ ಆಧುನಿಕತೆ ಮಾಡಲು ನಾವು ಪೇಪರ್ ಟಿಕೆಟ್ ಗಳನ್ನು ಬಳಸದೇ ಅತ್ಯಾಧುನಿಕ ಮೆಶಿನ್ಗಳ ಮೂಲಕ ಟಿಕೆಟ್ ವಿತರಿಸುವ ಯೋಜನೆಯನ್ನೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಕಿಕೊಂಡಿತ್ತು. ಅದಕ್ಕಾಗಿಯೇ ಬಿಎಂಟಿಸಿ ಸಲುವಾಗಿ 10 ಸಾವಿರ ಟಿಕೆಟ್ ಮೆಶಿನ್ಗಳನ್ನು ಖರೀದಿ ಮಾಡಿತ್ತು. ಆದರೆ ಈಗ ಹೈಟೆಕ್ ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ (ಇಟಿಎಂ ಮೆಶಿನ್ಗಳು) ಸರಿಯಾಗಿ ಕೆಲಸ ಮಾಡುತ್ತಿಲ್ಲ. ಒಂದು ಟಿಕೆಟ್ ಪ್ರಿಂಟ್ ಬರಲು ಅರ್ಧ/ಒಂದು ಗಂಟೆ ಆಗುತ್ತಿದೆ ಎಂಬ ದೂರು ಕೇಳಿಬಂದಿದೆ. ಪ್ರಯಾಣಿಕರಿಗೆ ಟಿಕೆಟ್ ಕೊಡಲು ಆಗದೆ ಬಿಎಂಟಿಸಿ ಕಂಡಕ್ಟರ್ ಗಳು ಪರದಾಡುತ್ತಿದ್ದಾರೆ. ನಿತ್ಯ ಸಾವಿರಾರು ಬಸ್ಗಳಲ್ಲಿ ಹಳೇ ಪದ್ಧತಿಯಂತೆ ನಿರ್ವಾಹಕರು ಪೇಪರ್ ಟಿಕೆಟ್ ನೀಡುತ್ತಿದ್ದಾರೆ. ಕೆಟ್ಟುಹೋಗಿರುವ ಇಟಿಎಂಗಳ ನಿರ್ವಹಣೆ ಆಗದಿರುವುದು ಮತ್ತು ಅದರ ನಿರ್ವಹಣೆ ಮಾಡುವ ಟ್ರೈಮಾಕ್ಸ್ ಕಂಪನಿಗೆ ನಿಗದಿತ ಸಮಯಕ್ಕೆ ನಿಗಮ ಹಣ ನೀಡದಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ.
ಹಳೆಯ ಇಟಿಎಂ ಮೆಶಿನ್ಗಳೇ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೂ ಮತ್ತೆ 10 ಸಾವಿರ ಹೊಸ ಇಟಿಎಂ ಯಂತ್ರಗಳ ಖರೀದಿಗೆ ಬಿಎಂಟಿಸಿ ಮುಂದಾಗಿದೆ. ಇದು ಸಾಲದು ಅಂತ ಬಿಎಂಟಿಸಿಯ ಸೆಕ್ಯುರಿಟಿ ಆಫೀಸರ್ ಗಳು ಬಸ್ ಸ್ಟಾಫ್ ಗಳಲ್ಲಿ ಟಿಕೆಟ್ ಚೆಕ್ಕಿಂಗ್ ಹೆಸರಲ್ಲಿ ಪ್ರಯಾಣಿಕರಿಗೆ ದಂಡ ಹಾಕುತ್ತಿದ್ದಾರೆ. ಮೆಶಿನ್ ಕೆಲಸ ಮಾಡದೇ ಟಿಕೆಟ್ ಕೊಡದ ಕಾರಣಕ್ಕೆ ಕಂಡಕ್ಟರ್ಗಳನ್ನು ಅಮಾನತು ಮಾಡಲಾಗುತ್ತಿದೆ. ಐಟಿಎಸ್ ಅಡಿಯಲ್ಲಿ ಆಳವಡಿಸಿರುವ ಇಟಿಎಂ ಮೆಶಿನ್ ಮತ್ತು ಜಿಪಿಎಸ್ ಗಳು ಬಿಎಂಟಿಸಿ ಬಸ್ಗಳಲ್ಲಿ ಅಧ್ವಾನ ಸೃಷ್ಟಿಸಿವೆ. ಇದರಿಂದ ನಿಗಮಕ್ಕೆ ಕೋಟಿ ಕೋಟಿ ನಷ್ಟ ಆಗಿದೆ. ಇಟಿಎಂ ಕಂಪನಿ ನಾವು ದಿವಾಳಿ ಆಗಿದ್ದೇವೆ ಎಂದಿದ್ದು, ಈಗಾಗಲೇ ನೀಡಿರುವ ಹತ್ತು ಸಾವಿರ ಮಶಿನ್ಗಳನ್ನು ರಿಪೇರಿ ಮಾಡಲು ನಿರಾಕರಿಸಿದೆ. ಕೆಟ್ಟು ಹೋಗಿರುವ ಮೆಶಿನ್ ನಿರ್ವಹಣೆ ಮಾಡಲಾಗದಿದ್ದರೂ ಹೊಸದಾಗಿ ಯಂತ್ರಗಳ ಖರೀದಿಗೆ ಬಿಎಂಟಿಸಿ ಪ್ಲಾನ್ ಮಾಡಿದೆ. ಇದಕ್ಕೆ ಬಿಎಂಟಿಸಿ ಚಾಲಕರು ಮತ್ತು ಕಂಡಕ್ಟರ್ಗಳನ್ನು ಆತಂಕಕ್ಕೆ ದೂಡಿದೆ.
ಇಟಿಎಂ ಹೇಗೆ ಕೆಲಸ ಮಾಡುತ್ತದೆ?
ಐಟಿಎಸ್ (ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್) ಅಡಿ ಎಲ್ಲ ಬಸ್ಗಳಲ್ಲಿ ವೆಹಿಕಲ್ ಟ್ರಾಕಿಂಗ್ ಸಿಸ್ಟಂ (ವಿಟಿಎಸ್) ಅಳವಡಿಸಲಾಗಿದೆ. ಪ್ರತಿ ಬಸ್ ಮೇಲೆ ನಿಗಾ ಇರಿಸುವ ತಂತ್ರಜ್ಞಾನ ಇದಾಗಿದ್ದು, ಜತೆಗೆ ಇಟಿಎಂ ಮುಖಾಂತರ ಪ್ರತಿ ಬಸ್ಗಳಲ್ಲಿ ಎಷ್ಟು ಟಿಕೆಟ್ ವಿತರಣೆಯಾಗುತ್ತಿದೆ ಎನ್ನುವುದನ್ನು ಕೇಂದ್ರ ಕಚೇರಿಯಲ್ಲೇ ಕುಳಿತು ವೀಕ್ಷಿಸಬಹುದು. ಈ ವ್ಯವಸ್ಥೆಗೆ ಪ್ರತಿ ತಿಂಗಳು ನಿಗಮ ಬಾಡಿಗೆ ಕಟ್ಟುತ್ತಿದೆ. 5 ವರ್ಷಗಳ ಒಪ್ಪಂದದಂತೆ ಬಿಎಂಟಿಸಿ ಒಂದು ಇಟಿಎಂಗೆ ಪ್ರತಿ ತಿಂಗಳು 684 ರೂ. ಮತ್ತು ವಿಟಿಎಎಸ್ಗೆ ಪ್ರತಿ ತಿಂಗಳು 695 ರೂ. ಬಾಡಿಗೆ ಕಟ್ಟುತ್ತಿದೆ. ನಿಗಮದ ಎಲ್ಲ ಘಟಕಗಳಿಗೆ ಒಟ್ಟು 10,498 ಇಟಿಎಂ ನೀಡಲಾಗಿದೆ ಮತ್ತು ಅಂದಾಜು 6,400 ಬಸ್ಗಳಲ್ಲಿ ವಿಟಿಎಸ್ ಅಳವಡಿಸಲಾಗಿದೆ. ಇವೆಲ್ಲ ಸೇರಿ ನಿಗಮ ಪ್ರತಿ ತಿಂಗಳು ಅಂದಾಜು 80-90 ಲಕ್ಷ ರೂ. ಬಾಡಿಗೆ ಕಟ್ಟುತ್ತಿದೆ. ಆದರೆ ಇದೀಗ ಕಂಪನಿ ನಷ್ಟದಲ್ಲಿ ಸಿಲುಕೊಂಡಿರುವ ಕಾರಣ ಐಟಿಎಸ್ ನ್ನು ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಬಿಎಂಟಿಸಿ ಬಸ್ ಗಳಲ್ಲಿ ಪೇಪರ್ ಟಿಕೆಟ್ ವಿತರಣೆ ಅನಿವಾರ್ಯವಾಗಿದೆ ಇದರ ಬಗ್ಗೆ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್ ವೆಂಕಟೇಶ, ‘ಈಗಾಗಲೇ ಹೊಸ ಮೆಶಿನ್ ಖರೀದಿಗಾಗಿ ಟೆಂಡರ್ ಕರೆಯಲಾಗಿದೆ. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಿಲ್ಲ. ಹೊಸ ಮೆಶಿನ್ಗಳು ಸಂಪೂರ್ಣ ಹೈಟೆಕ್ ಆಗಿರುತ್ತದೆ ಎಂದಿದ್ದಾರೆ.
ವಿಶೇಷ ವರದಿ: ಕಿರಣ್ ಸೂರ್ಯ ಟಿವಿ9 ಬೆಂಗಳೂರು
ಇದನ್ನೂ ಓದಿ:
(BMTC decided to buy 10 thousand new ETM Machine Conductors demand for old ETM machine repair)