ಕಂಡಕ್ಟರ್​​ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾದ BMTC: ಬಸ್​​ಗಳಲ್ಲಿ ಆನ್ ಬೋರ್ಡ್ ಆಕ್ಯುಪೆನ್ಸಿ ವ್ಯವಸ್ಥೆ ಅಳವಡಿಸಲು ಟೆಂಡರ್

ಶಕ್ತಿ ಯೋಜನೆಯ ದುರ್ಬಳಕೆ ಹಾಗೂ ನಿರ್ವಾಹಕರ ಕಳ್ಳಾಟ ತಡೆಯಲು ಬಸ್‌ಗಳಲ್ಲಿ 95% ನಿಖರತೆಯ 'ಆನ್ ಬೋರ್ಡ್ ಆಕ್ಯುಪೆನ್ಸಿ' (APC) ವ್ಯವಸ್ಥೆ ಅಳವಡಿಸಲು BMTC ನಿರ್ಧರಿಸಿದ್ದು, ಮೊದಲ ಹಂತದಲ್ಲಿ 30 ಬಸ್‌ಗಳಿಗೆ ಟೆಂಡರ್ ಕರೆದಿದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರ ಸಂಖ್ಯೆ, ರೂಟ್, ವಾಹನ ಮತ್ತು ಸಮಯದ ಆಧಾರದ ಮೇಲೆ ಮಾಹಿತಿ ಸಂಗ್ರಹವಾಗಲಿದೆ. ಆ ಡೇಟಾವನ್ನು ರೂಟ್ ಮತ್ತು ಟೈಮ್ ಟೇಬಲ್ ಮಾಡಲು, ಜನದಟ್ಟಣೆ ನಿಯಂತ್ರಣ ಹಾಗೂ ಪ್ರಯಾಣಿಕರ ಬೇಡಿಕೆ ವಿಶ್ಲೇಷಣೆಗೆ ಬಳಸಲು ಬಿಎಂಟಿಸಿ ಉದ್ದೇಶಿಸಿದೆ ಎನ್ನಲಾಗಿದೆ.

ಕಂಡಕ್ಟರ್​​ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾದ BMTC: ಬಸ್​​ಗಳಲ್ಲಿ ಆನ್ ಬೋರ್ಡ್ ಆಕ್ಯುಪೆನ್ಸಿ ವ್ಯವಸ್ಥೆ ಅಳವಡಿಸಲು ಟೆಂಡರ್
ಸಾಂದರ್ಭಿಕ ಚಿತ್ರ
Image Credit source: Tv9 Kannada
Edited By:

Updated on: Oct 02, 2026 | 2:39 PM

ಬೆಂಗಳೂರು, ಅಕ್ಟೋಬರ್​​​ 02: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾಗಿರುವ ಶಕ್ತಿ ಯೋಜನೆಯ ದುರ್ಬಳಕೆ ತಡೆಯಲು ಬಿಎಂಟಿಸಿ ಮುಂದಾಗಿದೆ. ಕೆಲ ನಿರ್ವಾಹಕರ ಕಳ್ಳಾಟಕ್ಕೆ ಬ್ರೇಕ್​​ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಸಾಮಾನ್ಯ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಈ ಯೋಜನೆ ಆರಂಭವಾದ ಬಳಿಕ ಕೆಲ ಕಂಡಕ್ಟರ್​​ಗಳು ಬೇರೆ ರಾಜ್ಯದ ಮಹಿಳೆಯರಿಗೆ ಮತ್ತು ಪುರುಷ ಪ್ರಯಾಣಿಕರಿಗೂ ಉಚಿತ ಟಿಕೆಟ್​​ ನೀಡಿ ಅವರಿಂದ ಹಣ ವಸೂಲಿ ಮಾಡುವ ಕೇಸ್​​ಗಳು ವರದಿಯಾಗ್ತಿರುವ ಬೆನ್ನಲ್ಲೇ ಬಸ್​​ಗಳಲ್ಲಿ ಆನ್ ಬೋರ್ಡ್ ಆಕ್ಯುಪೆನ್ಸಿ (ಎಪಿಸಿ) ಅಳವಡಿಸಲು ಬಿಎಂಟಿಸಿ ಟೆಂಡರ್ ಕರೆದಿದೆ.

ಆನ್ ಬೋರ್ಡ್ ಆಕ್ಯುಪೆನ್ಸಿ ಅಳವಡಿಕೆ ಯಾಕೆ?

ಈ ಆನ್ ಬೋರ್ಡ್ ಆಕ್ಯುಪೆನ್ಸಿಯಿಂದ ಯಾವ ನಿಲ್ದಾಣದಲ್ಲಿ ಎಷ್ಟು ಪ್ರಯಾಣಿಕರು ಬಸ್​​ ಹತ್ತಿದರು? ಯಾವ ಸ್ಟಾಪ್​​ನಲ್ಲಿ ಎಷ್ಟು ಮಂದಿ ಇಳಿದರು? ಎಂಬ ಲೆಕ್ಕ ಬಿಎಂಟಿಸಿ ಕಂಟ್ರೋಲ್ ರೂಂಗೆ ಸಿಗಲಿದೆ. ಹೀಗಾಗಿ ಮೊದಲ ಹಂತದಲ್ಲಿ 30 ಬಸ್‌ಗಳಲ್ಲಿ ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರ ಸಂಖ್ಯೆ, ರೂಟ್, ವಾಹನ ಮತ್ತು ಸಮಯದ ಆಧಾರದ ಮೇಲೆ ಮಾಹಿತಿ ಸಂಗ್ರಹವಾಗಲಿದೆ. ಆ ಡೇಟಾವನ್ನು ರೂಟ್ ಮತ್ತು ಟೈಮ್ ಟೇಬಲ್ ಮಾಡಲು, ಜನದಟ್ಟಣೆ ನಿಯಂತ್ರಣ ಹಾಗೂ ಪ್ರಯಾಣಿಕರ ಬೇಡಿಕೆ ವಿಶ್ಲೇಷಣೆಗೆ ಬಳಸಲು ಬಿಎಂಟಿಸಿ ಉದ್ದೇಶಿಸಿದೆ. ಹೀಗಾಗಿ ಈ ವ್ಯವಸ್ಥೆಯು ಕನಿಷ್ಠ 95% ನಿಖರತೆ ಹೊಂದಿರಬೇಕು ಎಂದು ಟೆಂಡರ್‌ನಲ್ಲಿ ಬಿಎಂಟಿಸಿ ಷರತ್ತು ಕೂಡ ಹಾಕಿದೆ.

ಇದನ್ನೂ ಓದಿ: ಶಕ್ತಿ ಯೋಜನೆ ಟಿಕೆಟ್ ಕಳ್ಳಾಟಕ್ಕೆ ಬೀಳಲಿದೆ ಬ್ರೇಕ್: ಪದೇಪದೇ ಫ್ರೀ ಟಿಕೆಟ್ ದುರ್ಬಳಕೆ ಮಾಡಿದ್ರೆ ಸಸ್ಪೆಂಡ್, ಡಿಸ್ಮಿಸ್ ಗ್ಯಾರಂಟಿ

ಶಕ್ತಿ ಯೋಜನೆ ಟಿಕೆಟ್ ಕಳ್ಳಾಟಕ್ಕೆ ಬ್ರೇಕ್​​ ಹಾಕುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ(KSRTC)ಯಿಂದ ಇತ್ತೀಚೆಗಷ್ಟೇ ಕಠಿಣ ಕ್ರಮಗಳನ್ನು ಘೋಷಿಸಲಾಗಿತ್ತು. ಯೋಜನೆಯ ಟಿಕೆಟ್‌ಗಳನ್ನು ಅಕ್ರಮವಾಗಿ ಬಳಸಿ ಹಣ ಸಂಪಾದಿಸುವ ಅಥವಾ ಉಚಿತ ಟಿಕೆಟ್‌ಗಳನ್ನು ಅನಗತ್ಯವಾಗಿ ವಿತರಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿತ್ತು. ಮೂರು ಟಿಕೆಟ್‌ಗಳವರೆಗೆ ಉಚಿತ ಟಿಕೆಟ್‌ಗಳ ದುರ್ಬಳಕೆ ಕಂಡುಬಂದರೆ ಅದನ್ನು ಸಾಮಾನ್ಯ ಪ್ರಕರಣವಾಗಿ, ನಾಲ್ಕರಿಂದ ಐದು ಟಿಕೆಟ್‌ಗಳ ಅಕ್ರಮ ಪತ್ತೆಯಾದರೆ ರೆಡ್ ಜೋನ್‌ನಲ್ಲಿ ಇರಿಸಿ ಕ್ರಮವಾಗಲಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದುರ್ಬಳಕೆ ಕಂಡುಬಂದರೆ ಅಸಾಧಾರಣ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಮೊದಲ ಹಂತದಲ್ಲಿ ದಂಡ ವಿಧಿಸುವುದರಿಂದ ಆರಂಭಿಸಿ, ಪ್ರಕರಣದ ಗಂಭೀರತೆ ಮತ್ತು ಪುನರಾವರ್ತನೆಯ ಆಧಾರದ ಮೇಲೆ ಅಮಾನತು ಹಾಗೂ ವಜಾ ಕ್ರಮ ಕೈಗೊಳ್ಳಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:38 pm, Fri, 2 October 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us