‘ಪಿಎಂ-ಇ ಡ್ರೈವ್’ ಯೋಜನೆಯಡಿ 4,500 ಇವಿ ಬಸ್: ಬಿಎಂಟಿಸಿಯ ಡ್ರೈವರ್​ಗಳನ್ನೇ ನೇಮಕ ಮಾಡುವಂತೆ ಆಗ್ರಹ

ಪಿಎಂ-ಇ ಡ್ರೈವ್ ಯೋಜನೆಯಡಿ ಬಿಎಂಟಿಸಿಗೆ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಸಿಗುವ ಸಾಧ್ಯತೆಯಿದೆ. ಆದರೆ, ಈ ಇವಿ ಬಸ್‌ಗಳಿಗೆ ಬಿಎಂಟಿಸಿ ಚಾಲಕರನ್ನೇ ನೇಮಿಸಬೇಕು ಹಾಗೂ ಖಾಸಗೀಕರಣ ತಡೆಯಬೇಕು ಎಂದು ಸಾರಿಗೆ ನೌಕರರ ಕೂಟ ಹೋರಾಟದ ಎಚ್ಚರಿಕೆ ನೀಡಿದೆ.

ಪಿಎಂ-ಇ ಡ್ರೈವ್ ಯೋಜನೆಯಡಿ 4,500 ಇವಿ ಬಸ್: ಬಿಎಂಟಿಸಿಯ ಡ್ರೈವರ್​ಗಳನ್ನೇ ನೇಮಕ ಮಾಡುವಂತೆ ಆಗ್ರಹ
ಬಿಎಂಟಿಸಿಗೆ 4,500 ಇವಿ ಬಸ್
Image Credit source: The Hindu
Edited By:

Updated on: Aug 19, 2026 | 9:26 AM

ಮುಖ್ಯಾಂಶಗಳು

  • ಬಿಎಂಟಿಸಿಗೆ 4,500 ಇವಿ ಬಸ್‌ ಸೇರ್ಪಡೆಗೆ ಕ್ಯಾಬಿನೆಟ್‌ನಲ್ಲಿ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ.
  • ಹೊಸ ಇವಿ ಬಸ್‌ಗಳಿಗೆ ಬಿಎಂಟಿಸಿ ಚಾಲಕರನ್ನೇ ನಿಯೋಜಿಸುವಂತೆ ನೌಕರರ ಪಟ್ಟು.
  • ಖಾಸಗೀಕರಣ ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸಾರಿಗೆ ನೌಕರರ ಎಚ್ಚರಿಕೆ.

ಬೆಂಗಳೂರು, ಆಗಸ್ಟ್ 19: ಕೇಂದ್ರ ಸರ್ಕಾರದ ‘ಪಿಎಂ-ಇ ಡ್ರೈವ್’ ಯೋಜನೆಯಡಿ ಬೆಂಗಳೂರಿನ ಬಿಎಂಟಿಸಿಗೆ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡುವ ಸಾಧ್ಯತೆಯಿದೆ. ಈಗಾಗಲೇ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಸಂಬಂಧ ಸಭೆ ನಡೆಸಿ, ಡಿಪೋಗಳನ್ನು ಸಿದ್ಧಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾರಿಗೆ ಸಚಿವ ಭೈರತಿ ಸುರೇಶ್ ಕೂಡ ಯೋಜನೆ ರದ್ದಾಗುವುದಿಲ್ಲ, ಶೀಘ್ರದಲ್ಲೇ ಕ್ಯಾಬಿನೆಟ್ ಗ್ರೀನ್ ಸಿಗ್ನಲ್ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಎಂಟಿಸಿ ಚಾಲಕರನ್ನೇ ನಿಯೋಜಿಸಲು ನೌಕರರ ಪಟ್ಟು

ಇತ್ತೀಚೆಗೆ ಇವಿ ಬಸ್‌ಗಳಿಗೆ ಖಾಸಗಿ ಚಾಲಕರನ್ನು ಬಳಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾರಿಗೆ ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗುತ್ತಿದೆ. ಜೊತೆಗೆ ಖಾಸಗಿ ಕಂಪನಿಗಳ ಸರಿಯಾದ ನಿರ್ವಹಣೆ ಇಲ್ಲದೆ ಹಲವು ಬಸ್ ರೂಟ್‌ಗಳು ರದ್ದಾಗುತ್ತಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಹೊಸ 4,500 ಇವಿ ಬಸ್‌ಗಳಿಗೂ ಬಿಎಂಟಿಸಿಯ ಅನುಭವಸ್ಥ ಚಾಲಕರನ್ನೇ ನಿಯೋಜಿಸಬೇಕು ಹಾಗೂ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಯತ್ನವನ್ನು ಕೈಬಿಡಬೇಕು ಎಂದು ಕೂಟದ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್ ಸಚಿವರಿಗೆ ಪತ್ರ ಬರೆದಿದ್ದಾರೆ.

ಖಾಸಗಿ ಚಾಲಕರ ಲೈಸೆನ್ಸ್ ರದ್ದುಗೊಳಿಸಿ, ಅತ್ಯಾಧುನಿಕ ವಾಹನಗಳನ್ನು ಚಾಲನೆ ಮಾಡಿದ ಅನುಭವವಿರುವ ಬಿಎಂಟಿಸಿ ಸಿಬ್ಬಂದಿಗೇ ಜವಾಬ್ದಾರಿ ನೀಡದಿದ್ದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಸಾರಿಗೆ ನೌಕರರ ಸಂಘ ಎಚ್ಚರಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us