ಎಚ್ಚರ! ಬಿಎಂಟಿಸಿ ಬಸ್​ನಲ್ಲಿ ಮಹಿಳಾ ಕಂಡಕ್ಟರ್​ಗಳಿಗೆ ದೈಹಿಕ ಕಿರುಕುಳ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿ

ನಿರ್ಭಯಾ ಯೋಜನೆ ಅಡಿಯಲ್ಲಿ ಬಿಎಂಟಿಸಿ ಮಹಿಳಾ ಸಿಬ್ಬಂದಿಗೆ ಸೆಲ್ಫ್ ಡಿಫೆನ್ಸ್ ಟ್ರೈನಿಂಗ್ ನೀಡುತ್ತಿದೆ.

ಎಚ್ಚರ! ಬಿಎಂಟಿಸಿ ಬಸ್​ನಲ್ಲಿ ಮಹಿಳಾ ಕಂಡಕ್ಟರ್​ಗಳಿಗೆ ದೈಹಿಕ ಕಿರುಕುಳ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿ
ಸಾಂಕೇತಿಕ ಚಿತ್ರ
Updated By: guruganesh bhat

Updated on: Sep 04, 2021 | 7:20 PM

ಬೆಂಗಳೂರು: ನಮ್ಮ ಬಿಎಂಟಿಸಿ ಬಸ್ಸುಗಳು ಪೀಕ್ ಟೈಮ್ ನಲ್ಲಿ ಫುಲ್ ರಶ್ ಇರುತ್ತವೆ. ತಮ್ಮ ವೃತ್ತಿ ನಿಭಾಯಿಸುವ ಮಹಿಳಾ ಕಂಡಕ್ಟರ್​ಗಳು  ಜನರ ಸಂದಿಯಲ್ಲಿ ನುಗ್ಗಿ  ಟಿಕೆಟ್ ವಿತರಿಸುತ್ತಾರೆ. ಆದರೆ ಈ ಸಮಯದಲ್ಲಿ ವಿಕೃತ ಮನಸಿನ ಕೆಲವರು ಮಹಿಳಾ ನಿರ್ವಾಹಕರಿಗೆ ದೈಹಿಕ ಕಿರುಕುಳ ನೀಡುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಮಾಡಿದಲ್ಲಿ ಅಂತವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹೇಗೆ ಎಂದಿರಾ? ಈ ಸ್ಟೋರಿ ಓದಿ.

ಬಿಎಂಟಿಸಿ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ತನ್ನ ಮಹಿಳಾ ಸಿಬ್ಬಂದಿಗೆ ಕರಾಟೆಯ ಪಟ್ಟುಗಳನ್ನು ಕಲಿಸುವ ಮೂಲಕ ಸೆಲ್ಫ್ ಡಿಫೆನ್ಸ್ ತರಬೇತಿ ನೀಡುತ್ತಿದೆ. ಹೀಗೆ ತರಬೇತಿ ನೀಡಲು ವಿಶೇಷ ಕಾರಣವೂ ಇದೆ. ಬಿಎಂಟಿಸಿಯಲ್ಲಿ 3 ಸಾವಿರಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಾರೆ. ಅವರ ಪೈಕಿ ಬಹುತೇಕರು ಬಸ್ಸುಗಳಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಾರೆ. ಬಸ್ ಫುಲ್ ರಶ್ ಇದ್ದಾಗ ಕೆಲ ಪ್ರಯಾಣಿಕರು ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಾರೆ. ಈ ಬಗ್ಗೆ ಸಂಸ್ಥೆಗೆ ಮಹಿಳಾ ಸಿಬ್ಬಂದಿಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಎಂಟಿಸಿ ನಿರ್ಭಯಾ ಯೋಜನೆ ಅಡಿಯಲ್ಲಿ ಮಹಿಳಾ ಸಿಬ್ಬಂದಿಗೆ ಸೆಲ್ಫ್ ಡಿಫೆನ್ಸ್ ಟ್ರೈನಿಂಗ್ ನೀಡುತ್ತಿದೆ. ಇನ್ನು ಟ್ರೈನಿಂಗ್ ಪಡೆಯುತ್ತಿರುವ ಸಿಬ್ಬಂದಿ ಕೂಡಾ ಫುಲ್ ಜೋಷ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ತರಬೇತಿಯಿಂದ ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿದೆ ಎನ್ನುತ್ತಾರೆ ಬಿಎಂಟಿಸಿ ಮಹಿಳಾ ಸಿಬ್ಬಂದಿ ಸ್ವಾತಿ.

ಇನ್ನು ಸೆಲ್ಫ್ ಡಿಫೆನ್ಸ್ ಟ್ರೇನಿಂಗ್ ಜೊತೆಗೆ ಮಹಿಳೆಯರಿಗೆ ಇರುವ ಕಾನೂನುಗಳ ಬಗ್ಗೆಯೂ ತಿಳಿಸಿಕೊಡಲಾಗುತ್ತಿದೆ. ಸದ್ಯ ಈ ಎರಡು ತರಬೇತಿಗಳಿಗೆ ಎಲ್ಲಾ ಡಿಪೋಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಿರುವ ಸಿಬ್ಬಂದಿಯನ್ನು ಮೊದಲ ಹಂತದಲ್ಲಿ 50 ಜನರನ್ನು ಆಯ್ಕೆ ಮಾಡಿ ಅವರಿಗೆ ಪರಿಣಿತರಿಂದ ತರಬೇತಿ ನೀಡಲಾಗುತ್ತಿದೆ. 16 ದಿನಗಳ ಈ ಟ್ರೈನಿಂಗ್ ನಲ್ಲಿ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲಿ ತರಬೇತಿ ಹೊಂದಿದವರು ಅವರವರ ಡಿಪೋಗಳಿಗೆ ಹೋಗಿ ಅಲ್ಲಿ ಇರುವ ತಮ್ಮ ಸಹೋದ್ಯೋಗಿಗಳಿಗೆ ತಾವು ಕಲಿತಿರುವುದನ್ನು ಅವರಿಗೆ ಹೇಳಿ ಕೊಡಬೇಕಿದೆ.

ಏನಿದು ನಿರ್ಭಯಾ ಯೋಜನೆ?
2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿರುವ  ಬಸ್​ ಒಂದರಲ್ಲಿ ನಡೆದ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತು. ಮುಂದೆ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಭಯಾ ಹೆಸರಿನಲ್ಲಿ ಯೋಜನೆ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಹಿಳೆಯರಿಗೆ ಸ್ವಯಂ ರಕ್ಷಣೆಯ ಸಲುವಾಗಿ ಕರಾಟೆಯಂತಹ ಕಲೆಯನ್ನು ಕಲಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿಯೂ ಈ ತರಬೇತಿ ನೀಡಲಾಗುತ್ತದೆ.

ವಿಶೇಷ ವರದಿ: ಕಿರಣ್ ಸೂರ್ಯ, ಟಿವಿ9 ಬೆಂಗಳೂರು 

ಇದನ್ನೂ ಓದಿ: 

BMTC Bus: ಬಿಎಂಟಿಸಿ ಬಸ್​ಗಳಲ್ಲಿ ಟಿಕೆಟ್ ನೀಡಲಾರದೇ ಕಂಡಕ್ಟರ್​ಗಳ ಪರದಾಟ; ಇಟಿಎಂ ಮಶಿನ್ ದುರಸ್ತಿಗೆ ನಿರ್ವಾಹಕರ ಆಗ್ರಹ

ರಣಹದ್ದು ಸಂರಕ್ಷಣೆ ಜಾಗೃತಿ ದಿನ: ರಾಮನಗರವು ಉದ್ದಕೊಕ್ಕಿನ ರಣಹದ್ದುಗಳ ವಾಸಸ್ಥಾನ; ವಿಶೇಷ ವರದಿ ಇಲ್ಲಿದೆ