ರಣಹದ್ದು ಸಂರಕ್ಷಣೆ ಜಾಗೃತಿ ದಿನ: ರಾಮನಗರವು ಉದ್ದಕೊಕ್ಕಿನ ರಣಹದ್ದುಗಳ ವಾಸಸ್ಥಾನ; ವಿಶೇಷ ವರದಿ ಇಲ್ಲಿದೆ
Ramanagara News: ಕರ್ನಾಟಕ ರಾಜ್ಯದಲ್ಲಿ ರಾಮನಗರವು ವಿಶಿಷ್ಟ ಉದ್ದಕೊಕ್ಕಿನ ರಣಹದ್ದುಗಳ ವಾಸಸ್ಥಾನ. ಇಲ್ಲಿನ ರಾಮದೇವರ ಬೆಟ್ಟ ರಣಹದ್ದುಗಳ ಪಾಲಿಗೆ ಮನೆಯಾಗಿದ್ದು, ಒಂದು ಕಾಲದಲ್ಲಿ ಎಣಿಕೆ ಮಾಡಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ಬೆರಳೆಣಿಕೆಯಷ್ಟಿವೆ.
ರಾಮನಗರ: ಇಂದು (ಸಪ್ಟೆಂಬರ್ ಮೊದಲ ಶನಿವಾರ) ರಣಹದ್ದು ಸಂರಕ್ಷಣೆ ಜಾಗೃತಿ ದಿನ. ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಮೂಲಕ ಅಳಿವಿನಂಚಿನಲ್ಲಿರುವ ರಣಹದ್ದುಗಳ ಪ್ರಭೇದವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ವಿವಿಧ ಸಂಘ ಸಂಸ್ಥೆಗಳು ನಡೆಸಿಕೊಂಡು ಬಂದಿವೆ. ಪರಿಸರದ ಸಮತೋಲನಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ರಣಹದ್ದುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಸಪ್ಟೆಂಬರ್ ಮೊದಲ ಶನಿವಾರವನ್ನು ರಣಹದ್ದು ಸಂರಕ್ಷಣೆ ಜಾಗೃತಿ ದಿನ ಎಂದು ಆಚರಣೆ ಮಾಡಲಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ರಾಮನಗರವು ವಿಶಿಷ್ಟ ಉದ್ದಕೊಕ್ಕಿನ ರಣಹದ್ದುಗಳ ವಾಸಸ್ಥಾನ. ಇಲ್ಲಿನ ರಾಮದೇವರ ಬೆಟ್ಟ ರಣಹದ್ದುಗಳ ಪಾಲಿಗೆ ಮನೆಯಾಗಿದ್ದು, ಒಂದು ಕಾಲದಲ್ಲಿ ಎಣಿಕೆ ಮಾಡಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ಬೆರಳೆಣಿಕೆಯಷ್ಟಿವೆ. ರಣಹದ್ದು ಸಂರಕ್ಷಣಾಧಾಮವಾದ ರಾಮದೇವರ ಬೆಟ್ಟದಲ್ಲಿ ದಿನೇ ದಿನೇ ಉದ್ದಕೊಕ್ಕಿನ ರಣಹದ್ದುಗಳ ಸಂತತಿ ಕ್ಷೀಣಿಸುತ್ತಿದೆ. ಇವುಗಳ ರಕ್ಷಣೆ ಮಾಡಲೆಂದು ರೂಪಿಸಲಾದ ಯೋಜನೆಗಳು ಇನ್ನು ಕೂಡ ಕಾರ್ಯರೂಪಕ್ಕೆ ಬಂದಿಲ್ಲ.
ರಣಹದ್ದು ವನ್ಯಧಾಮ ಅಂದಹಾಗೆ ರಣಹದ್ದುಗಳ ಸಂರಕ್ಷಣೆ ಮಾಡುವ ಉದ್ದೇಶದಿಂದಲೇ ಮೊದಲಿಗೆ 2012 ರಲ್ಲಿ ರಾಜ್ಯ ಸರ್ಕಾರ ರಾಮದೇವರ ಬೆಟ್ಟ ವ್ಯಾಪ್ತಿಯ ಸುಮಾರು 800 ಹೆಕ್ಟೇರ್ ಪ್ರದೇಶವನ್ನು ರಣಹದ್ದು ವನ್ಯಧಾಮವೆಂದು ಅಧಿಕೃತವಾಗಿ ಘೋಷಣೆ ಮಾಡಿತ್ತು. ನಂತರ 2017 ರ ಸಪ್ಟೆಂಬರ್ 12 ರಂದು ಅಂತಿಮ ಅಧಿಸೂಚನೆಯನ್ನು ಹೊರಡಿಸಿ ವನ್ಯಧಾಮಕ್ಕೆ ಹೊಂದಿಕೊಂಡಿರುವ ಸುಮಾರು 708 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
ರಾಮದೇವರ ಬೆಟ್ಟ ಮತ್ತು ವನ್ಯಧಾಮ ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆಯಾಗಿದೆ. ಆದರೆ ರಣಹದ್ದು ಸಂರಕ್ಷಣೆ ವಿಚಾರದಲ್ಲಿ ಅರಣ್ಯ ಇಲಾಖೆ ಇಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರಮುಖವಾಗಿ ಯುವ ಸಮುದಾಯಕ್ಕೆ ಸಮತೋಲನ ಪರಿಸರಕ್ಕೆ ರಣಹದ್ದುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಜೊತೆಗೆ ರಾಮದೇವರ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೂ ಹೆಚ್ಚಿನ ಅರಿವು ಮೂಡಿಸುವ ಕೆಲಸ ಅರಣ್ಯ ಇಲಾಖೆಯಿಂದ ಆಗಬೇಕಿದೆ. ರಣಹದ್ದುಗಳ ವಾಸಸ್ಥಾನವಾಗಿರುವ ರಾಮದೇವರ ಬೆಟ್ಟದಲ್ಲಿ ಶಬ್ಧ ಮಾಲಿನ್ಯ ಕಡಿಮೆ ಮಾಡುವ ಜತೆಗೆ ಪ್ಲಾಸ್ಟಿಕ್ ಮುಕ್ತಗೊಳಿಸಿ ಮಾದರಿ ವನ್ಯಧಾಮವನ್ನಾಗಿ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮೇಲಿದೆ.
ಸಂತಾನೋತ್ಪತ್ತಿ ಕೇಂದ್ರ ಎಲ್ಲಿ? ರಾಮದೇವರ ಬೆಟ್ಟದಲ್ಲಿ ಪ್ರಸ್ತುತ 3-4 ಉದ್ದ ಕೊಕ್ಕಿನ ರಣಹದ್ದುಗಳು ಕಾಣಸಿಗುತ್ತವೆಯಾದರೂ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿಮಾಡುವುದು ಒಂದೇ ಒಂದು ಪಕ್ಷಿ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕಳೆದ 5 ವರ್ಷಗಳಿಂದಲೂ ಯಾವುದೇ ಸಂತಾನೋತ್ಪತ್ತಿ ಆಗದೇ ಇರುವುದು ಉದ್ದಕೊಕ್ಕಿನ ರಣಹದ್ದು ಉಳಿವಿನ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದನಂತರ ರಾಮನಗರದಲ್ಲಿ ಬ್ರೀಡಿಂಗ್ ಕೇಂದ್ರ (ತಳಿ ಸಂವರ್ಧನಾ ಕೇಂದ್ರ) ಸ್ಥಾಪನೆಗೆ ಬಜೆಟ್‍ನಲ್ಲಿ 2 ಕೋಟಿ ರೂ.ಗಳ ಅನುಧಾನವನ್ನು ಮೀಸಲಿಟ್ಟು, ಹಣವನ್ನು ಬಿಡುಗಡೆ ಕೂಡ ಮಾಡಿದ್ದರು. ಆದರೆ ಈವರೆಗೂ ರಾಮನಗರದಲ್ಲೋ ಅಥವಾ ಬನ್ನೇರುಘಟ್ಟದಲ್ಲೋ ಎನ್ನುವ ಚರ್ಚೆಯ ವಸ್ತುವಾಗಿ ಸಂತಾನೋತ್ಪತ್ತಿ ಕೇಂದ್ರ ಇರುವುದು ಬಿಟ್ಟರೆ ಬೇರೇನೂ ಬೆಳವಣಿಗೆ ಆಗಿಲ್ಲ.
ರಣಹದ್ದುಗಳಿಗೆ ಸಿಗುತ್ತಿಲ್ಲ ಆಹಾರ ಇನ್ನು ರಣಹದ್ದುಗಳ ವಿಶೇಷತೆ ಅಂದರೆ ಸತ್ತ ಪ್ರಾಣಿಯ ಮಾಂಸ ತಿಂದು ಬದುಕುತ್ತವೆ. ಆದರೆ ಇತ್ತೀಚಿಗೆ ಪ್ರಾಣಿಗಳನ್ನ ಹೂಳುವ ಇಲ್ಲವೆ ಸುಡುವ ಪ್ರಕ್ರಿಯೆ ಹೆಚ್ಚಾದ ಕಾರಣ ಅವುಗಳಿಗೆ ಆಹಾರದ ಕೊರತೆ ಎದುರಾಗಿದೆ. ಹೀಗಾಗಿ ರಣಕಾಟಿಗಳ ಸಂಖ್ಯೆಯೂ ಕೂಡ ಕಡಿಮೆ ಆಗಿದೆ. ಆಹಾರ ಹರಿಸಿ ಬೇರೆ ಬೇರೆ ದೂರದ ಊರುಗಳತ್ತ ಪ್ರಯಾಣ ಬೆಳೆಸಿವೆ.
ರಾಮನಗರದ ರಾಮದೇವರ ಬೆಟ್ಟ ಅಳವಿನಂಚಿನಲ್ಲಿರುವ ಉದ್ದಕೊಕ್ಕಿನ ರಣಹದ್ದುಗಳ ಆವಾಸ ಸ್ಥಾನ. ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಒಂದು ವೇಳೆ ರಣಹದ್ದುಗಳು ಇಲ್ಲವಾದರೆ, ಮನ್ಯುಷ್ಯ ಹಲವಾರು ರೋಗಗಳಿಗೆ ತುತ್ತಾಗಿ ಸಾಯಬೇಕಾಗುತ್ತದೆ. ಇವುಗಳ ಸಂತಾನ ಅಭಿವೃದ್ಧಿಗೆ ಸರ್ಕಾರ ಕೂಡಲೇ ಕ್ರಮವಹಿಸಬೇಕು. ಬ್ರೀಡಿಂಗ್ ಕೇಂದ್ರವನ್ನು ತಡಮಾಡದೇ ಸ್ಥಾಪನೆ ಮಾಡಬೇಕು ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್, ರಾಮನಗರ ಇದರ ಕಾರ್ಯದರ್ಶಿ ಶಶಿಕುಮಾರ್ ಬಿ ತಿಳಿಸಿದ್ದಾರೆ.
ವಿಶೇಷ ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ
ಇದನ್ನೂ ಓದಿ: ರಾಮನಗರದಲ್ಲಿರುವ ಚಾಮುಂಡಿ ದೇವಿ ದೇವಸ್ಥಾನ ಮತ್ತು ಅದರ ಹಿಂದಿನ ಇತಿಹಾಸದ ಬಗ್ಗೆ ಅನೇಕರಿಗೆ ಗೊತ್ತಿಲ್ಲ
ಇದನ್ನೂ ಓದಿ: ರಾಮನಗರ, ರಾಜಾನುಕುಂಟೆ, ಮಾಗಡಿವರೆಗೆ ಮೆಟ್ರೋ ವಿಸ್ತರಿಸುವ ಚಿಂತನೆ ಇದೆ; ಸಿಎಂ ಬಸವರಾಜ ಬೊಮ್ಮಾಯಿ