ರಾಮನಗರದಲ್ಲಿರುವ ಚಾಮುಂಡಿ ದೇವಿ ದೇವಸ್ಥಾನ ಮತ್ತು ಅದರ ಹಿಂದಿನ ಇತಿಹಾಸದ ಬಗ್ಗೆ ಅನೇಕರಿಗೆ ಗೊತ್ತಿಲ್ಲ
ಆಮೇಲೆ ರಾಮನಗರದಲ್ಲಿ ಗುಡಿಯನ್ನು ಕಟ್ಟಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಮಾಡಲಾರಂಭಿಸುತ್ತಾರೆ. ದೇವಿ ಹೇಳಿದ ಹಾಗೆಯೇ ಅವರಿಗೆ ಇಬ್ಬರು ಗಂಡುಮಕ್ಕಳಾಗುತ್ತಾರೆ
ಬಹಳಷ್ಟು ಜನರಿಗೆ ಚಾಮುಂಡಿ ದೇವಿಯ ಗುಡಿ ರಾಮನಗರದಲ್ಲೂ ಇದೆ ಅಂತ ಗೊತ್ತಿಲ್ಲ. ಅದು ಮೈಸೂರಿನಲ್ಲಿ ಮಾತ್ರ ಇರೋದು ಅಂತ ಅವರು ಭಾವಿಸಿದ್ದಾರೆ. ರಾಮನಗರದಲ್ಲಿರುವ ಚಾಮುಂಡಿ ದೇವಸ್ಥಾನ ಮೈಸೂರಿನಲ್ಲಿರುವ ಗುಡಿಯಷ್ಟು ಪ್ರಸಿದ್ಧವಲ್ಲ. ಚಾಮುಂಡಿ ತಾಯಿ ರಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಶಕ್ತಿದೇವತೆ. ಇಲ್ಲಿ ಪ್ರತಿ ವರ್ಷ ಜುಲೈ ತಿಂಗಳಲ್ಲಿ ಕರಗ ಮಹೋತ್ಸವ ನಡೆಯುತ್ತದೆ. ಸಹಸ್ರಾರು ಜನ ಅದರಲ್ಲಿ ಪಾಲ್ಗೊಂಡು ಕೃತಾರ್ಥರಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಯಾವುದೇ ಚುನಾವಣೆಗೆ ಸ್ಪರ್ಧಿಸುವ ಮೊದಲು ರಾಮನಗರದ ಚಾಮುಂಡಿ ದೇವತೆಯ ದರ್ಶನ ಪಡೆದೇ ನಾಮಪತ್ರ ಸಲ್ಲಿಸುತ್ತಾರೆ.
ಸರಿ, ಚಾಮುಂಡಿ ದೇವಸ್ಥಾನ ರಾಮನಗರದಲ್ಲಿ ಅಸ್ತಿತ್ವಕ್ಕೆ ಬರುವ ಹಿಂದೆ ಒಂದು ಐತಿಹ್ಯವಿದೆ. ಇದನ್ನು ಕಟ್ಟಿದವರು ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಮೇಲುಕೋಟೆಯ ಕೊತ್ವಾಲರಾಗಿದ್ದ ಪ್ರತಾಪ್ ಸಿಂಗ್. ಅವರಿಗೆ ಮಕ್ಕಳಿಲ್ಲದ ಕೊರಗು ಕಾಡುತಿತ್ತು. ಹಾಗಾಗಿ, ಅನೇಕ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮಕ್ಕಳನ್ನು ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅದೊಂದು ದಿನ ಅವರು ನಿದ್ರಿಸುತ್ತಿದ್ದಾಗ ಚಾಮುಂಡಿ ತಾಯಿ ಕನಸಲ್ಲಿ ಬಂದು, ಕಳ್ಳರ ಗುಂಪೊಂದು ತನ್ನ ವಿಗ್ರಹ ಅಪಹರಿಸಿ ಅವರು ಮಾತ್ರ ಪೂಜೆ ಮಾಡುತ್ತಿದ್ದಾರೆ. ಅವರಿಂದ ವಿಗ್ರಹವನ್ನು ಪಡೆದು, ದೆವಸ್ಥಾನವೊಂದನ್ನು ಕಟ್ಟಿ ಅದರಲ್ಲಿ ತನ್ನನ್ನು ಪ್ರತಿಷ್ಠಾಪಿಸಿದರೆ, ಅವರ ಇಷ್ಟಾರ್ಥ ನೆರವೇರುತ್ತದೆ ಅಂತ ಹೇಳಿದಾಗ ಪ್ರತಾಪ್ ಸಿಂಗ್ ಅವರು ಮರುದಿನವೇ ಕಳ್ಳರಿದ್ದ ಸ್ಥಳಕ್ಕೆ ಮಾರುವೇಷದಲ್ಲಿ ಹೋಗಿ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳುವ ಮೊದಲು ವಿಗ್ರಹವನ್ನು ವಶಪಡಿಸಿಕೊಂಡರು. ಕಳ್ಳರನ್ನು ಹಿಡಿದುದಕ್ಕೆ ಮಹಾರಾಜರು ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಿದರಂತೆ.
ಆಮೇಲೆ ರಾಮನಗರದಲ್ಲಿ ಗುಡಿಯನ್ನು ಕಟ್ಟಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಮಾಡಲಾರಂಭಿಸುತ್ತಾರೆ. ದೇವಿ ಹೇಳಿದ ಹಾಗೆಯೇ ಅವರಿಗೆ ಇಬ್ಬರು ಗಂಡುಮಕ್ಕಳಾಗುತ್ತಾರೆ. ಅವರ ಕುಟುಂಬದ ಸದಸ್ಯರೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಅಲ್ಲಿಂದ ಇಲ್ಲಿಯವರೆಗೆ ನಡೆಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಈ ಮಾರ್ಕೆಟ್ನಲ್ಲಿ ಸಂಶೋಧನಾ ಪ್ರಬಂಧಗಳು ಮಾರಾಟಕ್ಕಿವೆ!; ರಹಸ್ಯ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ